PG ಹಾಸ್ಟೆಲಿನಲ್ಲಿ ದಂಧೆ: ಕೋಲ್ಕೊತ್ತಾ ಯುವತಿಯರ ಸೆರೆ

ಪ್ರಕರಣದ ಸಂಬಂಧ ಒಬ್ಬ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಪೇದೆ ಮಂಜೇಗೌಡಗೆ ವೇಶ್ಯಾವಾಟಿಕೆಗಳ ಬಗ್ಗೆ ಮಾಹಿತಿಯಿದ್ದರೂ ಆತ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಸ್ವತಃ ಈತ ಆ ಅಡ್ಡೆಗಳ ಜತೆ ಸಂಬಂಧ ಹೊಂದಿದ್ದ ಎಂದು ಆರೋಪಿಸಿ ಅಮಾನತು ಮಾಡಲಾಗಿದೆ ಎಂದು DCP (north) ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಯುವಕರಿಂದ ಡೈರಿಯೊಂದನ್ನು ವಶಪಡಿಸಿಕೊಳ್ಳಲಾಗಿದ್ದು ಅದರಲ್ಲಿ ಆರೋಪಿಗಳು ತಿಂಗಳಾ ತಿಂಗಳಾ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರಿಗೆ ವಂತಿಗೆ ನೀಡಿರುವುದನ್ನು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಇನ್ಸ್ ಪೆಕ್ಟರ್ ಅವರ ವಿರುದ್ಧವೂ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಅವರಿಗೆ ವರದಿ ಕಳುಹಿಸಿರುವುದಾಗಿ DCP ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬೆಂಗಳೂರಿನಲ್ಲಿ ಪಶ್ಚಿಮ ಬೆಂಗಾಲಿ ಯುವತಿಯರ ಕಾರುಬಾರು
ವೈಯಾಲಿಕಾವಲ್ ಹಾಗೂ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯಲ್ಲಿ ಪೇಯಿಂಗ್ ಗೆಸ್ಟ್ (PG accommodations) ಮನೆಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಈ ದಾಳಿ ನಡೆಸಿದೆ. ಈ ದಾಳಿಯ ವೇಳೆ ಮೂವತು ಯುವಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ವೇಶ್ಯಾವಾಟಿಕೆಯ ಸೂತ್ರಧಾರ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ರಾಜೇಶ್ ಅಲಿಯಾಸ್ ಹರೀಶ್ (23), ದಿಲೀಪ್ (27) ಮತ್ತು ಆರ್ ಶಿವಕುಮಾರ್ (26) ಬಂಧಿತ ಆರೋಪಿಗಳು. ಬಂಧಿತ ಯುವಕರು ಕೆಲಸದ ಆಮಿಷವೊಡ್ಡಿ ಹೊರ ರಾಜ್ಯದಿಂದ ಹೆಣ್ಣು ಮಕ್ಕಳನ್ನು ಕರೆಸಿಕೊಂಡು Paying Guest ಮನೆಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯೂಟಿ ಪಾರ್ಲರ್ ಹಾಗೂ ಇತರೆ ಕಡೆ ಕೆಲಸ ಕೊಡಿಸುವುದಾಗಿ ಹೇಳಿ ಈ ಹೆಣ್ಣು ಮಕ್ಕಳನ್ನು ಪಿಜಿ ಹಾಸ್ಟೆಲುಗಳಲ್ಲಿ ಇಟ್ಟುಕೊಂಡು ಅವರನ್ನು ಪುಸಲಾಯಿಸಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications