ಬೆಂಗಳೂರು:ಪೌರಕಾರ್ಮಿಕರಿಗೆ ಇಂದು ಕೊರೊನಾ ಲಸಿಕೆ, ವೇತನ ಸಹಿತ ರಜೆ
ಬೆಂಗಳೂರು,ಫೆಬ್ರವರಿ12: ಬೆಂಗಳೂರಲ್ಲಿ ಎರಡನೇ ಹಂತದ ಕೊರೊನಾ ಲಸಿಕೆ ವಿತರಣಾ ಅಭಿಯಾನ ನಡೆಯುತ್ತಿದ್ದು, ಪೌರಕಾರ್ಮಿಕರಿಗೆ ಲಸಿಕೆ ನೀಡಿ, ವೇತನ ಸಹಿತ ರಜೆ ನೀಡಲಾಗುತ್ತಿದೆ.
ಲಸಿಕೆ ಪಡೆದವರಿಗೆ ಅರ್ಧ ದಿನ ವೇತನ ಸಹಿತ ರಜೆ ಮಂಜೂರು ಮಾಡಲಾಗುವುದು. ಲಸಿಕೆ ಹಾಕಿಸಿಕೊಳ್ಳದೆ ಇರುವ ನೌಕರರು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ರಜೆ ಹಾಕಿದರೆ ವೇತನ ರಹಿತ ರಜೆ ದಿನವಾಗಿ ಪರಿಗಣಿಸಲಾಗುವುದು ಎಂದು ಸೂಚಿಸಲಾಗಿದೆ.
ಬಿಬಿಎಂಪಿ ಘನತ್ಯಾಜ್ಯ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 18,000 ಪೌರ ಕಾರ್ಮಿಕರು, 4,000ಕ್ಕೂ ಹೆಚ್ಚಿರುವ ಟಿಪ್ಪರ್ ಆಟೋ ಹಾಗೂ ಕಾಂಪ್ಯಾಕ್ಟರ್ ಚಾಲಕರು ತಮ್ಮ ಎರಡನೇ ಮಸ್ಟರಿಂಗ್ (ಬೆಳಿಗ್ಗೆ 10.30) ಕಾರ್ಯಪೂರ್ಣಗೊಂಡ ನಂತರ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳುವಂತೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮನವಿ ಮಾಡಿಕೊಂಡಿದ್ದಾರೆ.

ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿ ಹಲವು ಸಿಬ್ಬಂದಿ ಕೊರೊನಾ ಲಸಿಕೆ ಹಾಕಿಸಿಕೊಂಡರು.
ಬಿಬಿಎಂಪಿ ಕೇಂದ್ರ ಕಚೇರಿಯ ಡಾ.ರಾಜ್ ಕುಮಾರ್ ಗಾಜಿನ ಮನೆ ಸಭಾಂಗಣದಲ್ಲಿ ಮಂಗಳವಾರ ಪಾಲಿಕೆಯ ಆಡಳಿತಾಧಿಕಾರಿ ಗೌರವ್ ಗುಪ್ತ ಅವರೊಂದಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ 2ನೇ ಹಂತದ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ವದಂತಿಗಳ ನಂಬಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವ ಸಿಬ್ಬಂದಿಗಳಿಗೆ ಪ್ರೇರಣೆ ಹಾಗೂ ಅಭಯ ನೀಡುವ ಸಲುವಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಮಂಗಳವಾರ ಲಸಿಕೆ ಹಾಕಿಸಿಕೊಂಡಿದ್ದಾರೆ.











Click it and Unblock the Notifications