ಬೆಂಗಳೂರಿನಲ್ಲಿ ಮತ್ತೆ ಗುಂಡಿಗಳ ಸದ್ದು, ಬಿಬಿಎಂಪಿಗೆ ಜನರ ಹಿಡಿಶಾಪ!
ಬೆಂಗಳೂರು, ಆಗಸ್ಟ್ 26: ಬೆಂಗಳೂರು ನಗರದ ರಸ್ತೆಗಳು ಗುಂಡಿಗಳಿಗೆ ಕುಖ್ಯಾತಿ ಪಡೆದಿದ್ದು, ಹಲವು ಜನರ ಪಾಣಕ್ಕೂ ಎರವಾಗಿವೆ. ಎಷ್ಟೇ ಮನವಿ, ಅರ್ಜಿ ಹಾಗೂ ಕೇಸುಗಳನ್ನು ದಾಖಲಿಸಿ ಕೋರ್ಟ್ ಕಟಕಟೆಗೆ ಎಳೆದರೂ ಮತ್ತೆ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳ ಸಮಸ್ಯೆ ಮುಗಿಯುತ್ತಲೇ ಇಲ್ಲ. ಈಗ ಮಳೆಗಾಲದಲ್ಲಿ ಆಡಿದ್ದೇ ರಾಗ ಎಂಬಂತೆ ಮತ್ತೆ ಬೆಂಗಳೂರಿನಲ್ಲಿ ಅವು ಸದ್ದು ಮಾಡುತ್ತಿವೆ.
ಹೇರೋಹಳ್ಳಿ ಬಳಿಯ ಸುಂಕದಕಟ್ಟೆ ಬಳಿ ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು 44 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೆ ಕಸ್ತೂರಿನಗರದ ಬಳಿ ಹೊರ ವರ್ತುಲ ರಸ್ತೆಯ ಹಳ್ಳಕ್ಕೆ ಮಹಿಳಾ ಬೈಕ್ ಸವಾರ ಮಹಿಳೆ ಬ್ಯಾಲೆನ್ಸ್ ಕಳೆದುಕೊಂಡು ಬಿದ್ದಿರುವ ವಿಡಿಯೋ ವೈರಲ್ ಆಗಿದ್ದು, ಬೆಂಗಳೂರಿನಲ್ಲಿ ಹಳ್ಳದ ಸಮಸ್ಯೆಯನ್ನು ಯಾವತ್ತೂ ಮುಗಿಯುವುದಿಲ್ಲ ಎಂದು ಸಾರಿ ಹೇಳಿದೆ.
ಇತ್ತೀಚೆಗಷ್ಟೇ ಸುರಿದ ಮಳೆಯಿಂದ ಸಾರ್ವಜನಿಕರ ಬವಣೆ ಹೆಚ್ಚಾಗಿದ್ದು, ರಸ್ತೆಗಳಲ್ಲಿರುವ ಗುಂಡಿಗಳನ್ನು ಸರಿಪಡಿಸದಿದ್ದಲ್ಲಿ ನಗರದ ರಸ್ತೆಗಳ ದಯನೀಯ ಸ್ಥಿತಿ ಪ್ರಯಾಣಿಕರಿಗೆ ಮತ್ತಷ್ಟು ಮಾರಕವಾಗಲಿದೆ. ವಾಹನ ಸವಾರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಮಳೆಗಾಲದ ಆರಂಭದಲ್ಲೇ ನಗರದಲ್ಲಿ ಸಾವಿರಾರು ಹೊಂಡಗಳು ತುಂಬಿವೆ ಎಂದು ಗಮನಕ್ಕೆ ತಂದಿದ್ದರು. ಈಗ ಮತ್ತೆ ಮಳೆಗಾಲ ಆರಂಭವಾಗಿ ಹಳೆಯ ಹಳ್ಳಗಳ ಜೊತೆ ಅನೇಕ ಹಳ್ಳಗಳು ಮತ್ತೆ ಹೊಸದಾಗಿ ಕಾಣಿಸಿಕೊಂಡಿವೆ.

ಮಳೆಗಾಲದಲ್ಲಿ ಸಂಚರಿಸಲು ಕಷ್ಟ
ಈ ಬಗ್ಗೆ ಕೆ.ಎಚ್.ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ರಾಕೇಶ್ ಎಸ್. ಮಾತನಾಡಿ, "ಎರಡು ತಿಂಗಳ ಹಿಂದೆ ರಸ್ತೆಗಳು ಉತ್ತಮವಾಗಿದ್ದವು. ಆದರೆ ಈಗ ಮತ್ತೆ ಗುಂಡಿಗಳು ಎದ್ದು ಕಾಣುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಎಷ್ಟೇ ಬಿಬಿಎಂಪಿ ಕಂಡು ಕಾಣದಂತೆ ಇದೆ. ಆರ್ ಆರ್ ನಗರ, ರಾಜ್‌ಕುಮಾರ್ ರಸ್ತೆ, ಮಾಗಡಿ ರಸ್ತೆಯಲ್ಲಿ ಅನೇಕ ರಸ್ತೆಗಳು ಗುಂಡಿಗಳಲ್ಲೇ ರಸ್ತೆ ಇದೆ ಎಂಬಂತೆ ಭಾಸವಾಗುತ್ತವೆ," ಎಂದು ಹೇಳಿದರು.

ರಸ್ತೆ ಕಾಮಗಾರಿಗಳ ಕೆಲಸ ಇನ್ನೂ ಇದೆ
ನಾವು ಕಳೆದ ಎರಡು ತಿಂಗಳಲ್ಲಿ 3,900 ಅಧಿಕ ಗುಂಡಿಗಳನ್ನು ಮುಚ್ಚಿದ್ದೇವೆ. ಸಾಕಷ್ಟು ರಸ್ತೆ ಕಾಮಗಾರಿಗಳ ಕೆಲಸ ಇನ್ನೂ ಆಗುತ್ತಿದೆ. ಮಳೆಗಾಲದಲ್ಲಿ ಹಳ್ಳಗಳು ಉಂಟಾಗುವುದು ಸಹಜ. ದುರಸ್ತಿ ಕಾಮಗಾರಿಗೆ ಮಳೆಯೂ ಕೂಡ ಅಡ್ಡವಾಗಿದೆ. ಆದರೂ ಕೆಲಸಗಳು ನಿಂತಿಲ್ಲ. ಮಳೆಯಿಂದಾಗಿ ಕೆಲವೆಡೆ ಕಾಮಗಾರಿ ಸ್ಥಗಿತಗೊಂಡಿವೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಪೊಲೀಸರಿಂದ 4,545 ಗುಂಡಿಗಳ ಪಟ್ಟಿ
ಕಳೆದ 90 ದಿನಗಳಲ್ಲಿ ಕೆಲಸ ನಿರ್ವಹಿಸಲು ನಮಗೆ 15 ಮಳೆ ಇಲ್ಲದ ದಿನಗಳು ಸಿಕ್ಕಿಲ್ಲ. ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) 4,545 ಗುಂಡಿಗಳ ಪಟ್ಟಿಯನ್ನು ಅವುಗಳ ಸ್ಥಳದೊಂದಿಗೆ ಸಲ್ಲಿಸಿದ್ದರು. ಕಳೆದ ಎರಡು ತಿಂಗಳಲ್ಲಿ ನಾವು 3,900 ಗುಂಡಿಗಳನ್ನು ಮುಚ್ಚಿದ್ದೇವೆ. ಇನ್ನೂ 600 ಗುಂಡಿಗಳನ್ನು ಭರ್ತಿ ಮಾಡಬೇಕಾಗಿದೆ ಎಂದು ಬಿಬಿಎಂಪಿಯ ಹಿರಿಯ ಎಂಜಿನಿಯರ್ ತಿಳಿಸಿದ್ದಾರೆ.

ತೇಪೆ ಹಾಕುವ ಕೆಲಸ ಇನ್ನೂ ನಡೆದೆ ಇದೆ
ನಗರದಲ್ಲಿ ನಡೆಯುತ್ತಿರುವ ಇನ್ನೂ ಅನೇಕ ಕಾಮಗಾರಿಗಳು ಸಹ ಗುಂಡಿಗಳಿಗೆ ಪ್ರಮುಖ ಕಾರಣವಾಗಿದೆ. ರಸ್ತೆಗಳಿಗೆ ತೇಪೆ ಹಾಕುವ ಕೆಲಸ ಇನ್ನೂ ನಡೆದೆ ಇದೆ. ಕಳಪೆ ಕಾಮಗಾರಿಯೇ ರಸ್ತೆಗಳಲ್ಲಿ ಗುಂಡಿಗಳು ಬೀಳಲು ಕಾರಣ. ವರ್ಷದಲ್ಲಿ ರಸ್ತೆಯ ಗುಂಡಿಗಳಿಂದ್ದ ಅನೇಕ ಸಾವು ನೋವುಗಳು ಸಂಭವಿಸಿವೆ. ಇನ್ನೂ ದಿನನಿತ್ಯದ ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವೇ ಇಲ್ಲವಾಗಿದೆ. ಒಟ್ಟಿನಲ್ಲಿ ಬಿಬಿಎಂಪಿ ಯಾವಾಗ ಜನರ ಸುಗಮ ಸಂಚಾರಕ್ಕೆ ರಸ್ತೆ ಸಿದ್ಧಪಡಿಸುತ್ತದೋ ಬಲ್ಲವರಾರು?.












Click it and Unblock the Notifications