ಬೆಂಗಳೂರು ನಗರದಲ್ಲಿ ಇನ್ನೂ 2,648 ಗುಂಡಿ ಮುಚ್ಚಬೇಕಿದೆ!
ಬೆಂಗಳೂರು, ಅಕ್ಟೋಬರ್ 27 : ಬೆಂಗಳೂರು ನಗರದ ರಸ್ತೆಗಳಲ್ಲಿ ಇನ್ನೂ 2,648 ಗುಂಡಿಗಳನ್ನು ಮುಚ್ಚಬೇಕಿದೆ. ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಈ ಕುರಿತು ವರದಿಯನ್ನು ಲೋಕಾಯುಕ್ತರಿಗೆ ಸಲ್ಲಿಕೆ ಮಾಡಿದೆ.
ಬೆಂಗಳೂರು ನಗರದಲ್ಲಿನ ಗುಂಡಿಗಳಿಗೆ ಜನರು ಬಲಿಯಾಗುತ್ತಿರುವ ವರದಿಯನ್ನು ನೋಡಿದ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ವರದಿ ನೀಡುವಂತೆ ಬಿಬಿಎಂಪಿಗೆ ಸೂಚನೆ ನೀಡಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ವರದಿ ನೀಡಿದೆ.

ನಗರದಲ್ಲಿ 23,644 ಗುಂಡಿಗಳನ್ನು ಗುರುತಿಸಲಾಗಿತ್ತು. 20,996 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಬಿಬಿಎಂಪಿ ವರದಿ ಕೊಟ್ಟಿದೆ. ಇನ್ನೂ 2,648 ಗುಂಡಿಗಳನ್ನು ಮುಚ್ಚಬೇಕಿದೆ ಎಂದು ಹೇಳಿದೆ.
ಗುಂಡಿ ಮುಚ್ಚುವ ಕಾಮಗಾರಿಯನ್ನು ಬಿಬಿಎಂಪಿ ನಡೆಸುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ನವೆಂಬರ್ 10ರಂದು ಪೂರ್ಣ ವರದಿಯನ್ನು ಸಲ್ಲಿಸಬೇಕು ಎಂದು ಲೋಕಾಯುಕ್ತರು ಬಿಬಿಎಂಪಿಗೆ ನಿರ್ದೇಶನ ನೀಡಿದ್ದಾರೆ.
15 ದಿನದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ ಗಡುವು ನೀಡಿದ್ದರು. ನಂತರ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಸಂಪತ್ ರಾಜ್ ನಿರಂತರವಾಗಿ ಪರಿಶೀಲನೆ ನಡೆಸುತ್ತಿದ್ದು, ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ.
ಆಗಸ್ಟ್ 14ರಿಂದ ಸತತ ಒಂದೂವರೆ ತಿಂಗಳ ಕಾಲ ಬೆಂಗಳೂರು ನಗರದಲ್ಲಿ ಭಾರೀ ಮಳೆಯಾಗಿತ್ತು. ಇದರಿಂದಾಗಿ ನಗರದ ರಸ್ತೆಗಳು ಹದಗೆಟ್ಟು ಹೋಗಿದ್ದವು. ನಗರದ ರಸ್ತೆ ಗುಂಡಿಗೆ ಐವರು ಬಲಿಯಾಗಿದ್ದರು.












Click it and Unblock the Notifications