ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ; ಯಾರು ಏನು ಹೇಳಿದರು?
ಬೆಂಗಳೂರು, ನವೆಂಬರ್ 17: ಕನ್ನಡ ಚಲನಚಿತ್ರದ ಖ್ಯಾತ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ "ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ದಿ. ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ "ಪುನೀತ ನಮನ' ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ನಟ- ನಟಿಯರು ಪಾಲ್ಗೊಂಡಿದ್ದರು.
ಸಮಾರಂಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ""ಪುನೀತ್ ನಮ್ಮೆಲ್ಲರಿಗೂ ಆತ್ಮೀಯನಾಗಿದ್ದ. ಅವನನ್ನು ನಾನು ಬಾಲ್ಯದಿಂದ ಅವನನ್ನು ಬಲ್ಲೆ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ,'' ಎಂದು ಬಣ್ಣಿಸಿದರು.
ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆ ಮುಂದಿನ ವಾರ ನವೆಂಬರ್ 26ರಂದು ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ ಬಗ್ಗೆ ಮಹತ್ವದ ಚರ್ಚೆ ಮಾಡಲಾಗುವುದು.
ಇದರ ಜೊತೆಗೆ ಪದ್ಮಶ್ರೀ ನೀಡಲು ಸಹ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಗುತ್ತದೆ ಎನ್ನಲಾಗಿದೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಪ್ರಶಸ್ತಿ ಪ್ರದಾನ ಮಾಡುವ ಸಾಧ್ಯತೆಯೂ ಇದೆ. ಕರ್ನಾಟಕ ರತ್ನ ಪ್ರಶಸ್ತಿಗೆ ವಿವಿಧ ನಾಯಕರ ಪ್ರತಿಕ್ರಿಯೆ ನೀಡಿದ್ದಾರೆ.
Koo Appಕನ್ನಡಿಗರ ಕಣ್ಮಣಿ, ಚಿಕ್ಕ ವಯಸ್ಸಿನಲ್ಲಿಯೇ ಮಹತ್ತನ್ನು ಸಾಧಿಸಿ ನಮ್ಮನ್ನೆಲ್ಲ ಬಿಟ್ಟು ಅಗಲಿದ ಜನಪ್ರಿಯ ಕಲಾವಿದ ಪುನೀತ್ ರಾಜಕುಮಾರ್ ಸ್ಮರಣಾರ್ಥ ಇಂದು ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಲಾಯಿತು. ಸರ್ಕಾರದ ಪರವಾಗಿ ಸಿಎಂ @BSBommai ಅವರು ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ. - BS Yediyurappa (@bsybjp) 16 Nov 2021
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂ ಮಾಡಿದ್ದಾರೆ
"ಕನ್ನಡಿಗರ ಕಣ್ಮಣಿ, ಚಿಕ್ಕ ವಯಸ್ಸಿನಲ್ಲಿಯೇ ಮಹತ್ತನ್ನು ಸಾಧಿಸಿ ನಮ್ಮನ್ನೆಲ್ಲ ಬಿಟ್ಟು ಅಗಲಿದ ಜನಪ್ರಿಯ ಕಲಾವಿದ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಮಂಗಳವಾರ ನಡೆದ ಪುನೀತ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಸಲ್ಲಿಸಲಾಯಿತು. ಸರ್ಕಾರದ ಪರವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರು ಪುನೀತ್‌ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೂ ಮಾಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮೂಲಕ ಸ್ವಾಗತ
ವಿಶಾಲವಾದ ಹೃದಯಕ್ಕಿಂತ ಗುಡಿಯು ಎಲ್ಲಿದೆ? ನಟ ಪುನೀತ್ ರಾಜ್‌ಕುಮಾರ್ ಸಿನಿಮಾವೊಂದರ ಅರ್ಥಪೂರ್ಣ ಸಾಲಿದು. ನಟನೆ ಜೊತೆಗೆ ಕಷ್ಟದಲ್ಲಿರುವ ಹೃದಯಗಳಿಗೆ ಕರಗಿದ ಅಪ್ಪು ಒಬ್ಬ ಹೃದಯವಂತ ನಟ ಎಂಬುದರಲ್ಲಿ ಸಂದೇಹವಿಲ್ಲ. ಜನರ ಅಪೇಕ್ಷೆಯಂತೆ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಸ್ವಾಗತಾರ್ಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತ
ರಾಜ್ಯ ಸರ್ಕಾರ ಪುನೀತ್ ರಾಜ್‌ಕುಮಾರ್‌ರವರಿಗೆ ಕರ್ನಾಟಕ ರತ್ನ ಬಿರುದನ್ನು ನೀಡಲು ತೀರ್ಮಾನ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರ ಈ ನಿರ್ಧಾರ ಸ್ವಾಗತಾರ್ಹವಾದುದ್ದು. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ.
ಪುನೀತ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎಂದು ಹಿಂದೆಯೇ ಒತ್ತಾಯ ಮಾಡಿದ್ದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶೀಘ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಬಹುಮುಖ ಪ್ರತಿಭೆ, ತಮ್ಮ ಇಡೀ ಬದುಕನ್ನು ಕನ್ನಡ ಸಿನಿಮಾಕ್ಕೆ ಮೀಸಲಿಟ್ಟು, ಈಚೆಗೆ ನಮ್ಮನ್ನು ಅಗಲಿದ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ "ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ ಮಾಡಿರುವುದು ಅರ್ಥಪೂರ್ಣ ಹಾಗೂ ನಿಜವಾದ ಗೌರವ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಕೆ. ಸುಧಾಕರ್ ಸ್ವಾಗತ
ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರಕಟಿಸಿರುವುದನ್ನು ಸಮಸ್ತ ಕನ್ನಡಿಗರೊಂದಿಗೆ ಸ್ವಾಗತಿಸುತ್ತೇನೆ. ಕನ್ನಡ ಕಲಾಲೋಕಕ್ಕೆ, ಚಿಕ್ಕ ವಯಸ್ಸಿನಿಂದಲೇ ಅಪಾರ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದನಿಗೆ ಸರ್ಕಾರದಿಂದ ಸಂದ ಗೌರವ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಕೂ ಮೂಲಕ ಸ್ವಾಗತಿಸಿದ್ದಾರೆ.

ಸಚಿವ ಆರ್. ಅಶೋಕ ಪ್ರತಿಕ್ರಿಯೆ
ಕನ್ನಡನಾಡಿನ ಜನಪ್ರಿಯ ಚಲನಚಿತ್ರ ಕಲಾವಿದ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ ಮಾಡಿದ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಧನ್ಯವಾದಗಳು ಎಂದು ಕಂದಾಯ ಸಚಿವ ಸಚಿವ ಆರ್. ಅಶೋಕ ಟ್ವೀಟ್ ಮಾಡಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಮರಣೋತ್ತರವಾಗಿ 'ಕರ್ನಾಟಕ ರತ್ನ ಪ್ರಶಸ್ತಿ' ಘೋಷಣೆ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್ ಅವರಿಗೆ ವಿಶೇಷ ಗೌರವ ಸಲ್ಲಿಸಿದೆ.
ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ನೀಡಿ ಪುನೀತ್ ಅವರಿಗೆ ಗೌರವ ಸಲ್ಲಿಸಿದ ರಾಜ್ಯ ಸರ್ಕಾರ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೂ ಮೂಲಕ ಅಭಿನಂದಿಸಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ
ದಿವಂಗತ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿಯ ಗೌರವವನ್ನು ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿರುವುದು ಸ್ವಾಗತಾರ್ಹ ಸಂಗತಿ. ಇದು ಕನ್ನಡ ಚಿತ್ರರಂಗದ ಅಪರೂಪದ ಕಲಾವಿದನಿಗೆ ಸೂಕ್ತವಾದ ಗೌರವವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮೂಲಕ ಅಭಿನಂದಿಸಿದ್ದಾರೆ.