ಮೆಡಿಕಲ್ ಸೀಟಿಗೆ ಹಣ ಪಡೆದು ವಂಚಿಸಿದವ ಬಲೆಗೆ
ಬೆಂಗಳೂರು, ಡಿ. 10: ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೀಟ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಸಂದರ್ಭ ಉಪಯೋಗಿಸಿಕೊಂಡು ದುರುಪಯೋಗ ಪಡೆಯುವವರೂ ಹೆಚ್ಚಾಗಿದ್ದಾರೆ. ಇಂತಹ ಪ್ರಕರಣವೊಂದರ ಆರೋಪಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಜನೆ ಬಯಸಿದ್ದ ವಿದ್ಯಾರ್ಥಿಯೋರ್ವನಿಂದ ಲಕ್ಷಾಂತರ ರೂ. ಹಣ ಪಡೆದು, ಸೀಟೂ ಕೊಡಿಸದೆ ವಂಚಿಸಿದ ಆರೋಪದ ಮೇಲೆ ಚೈತನ್ಯ ಎಂಬಾತನನ್ನು ದಸ್ತಗಿರಿ ಮಾಡಲಾಗಿದೆ. ಆತನಿಂದ 13.80 ಲಕ್ಷ ರೂ. ನಗದು ಹಾಗೂ 400 ಗ್ರಾಂ. ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. [ಉಚಿತ ಎಂಬಿಬಿಎಲ್ ಸೀಟು ಲಭ್ಯ]

ಆರೋಪಿ ಚೈತನ್ಯ ಬೆಂಗಳೂರಿನಲ್ಲಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ಭರವಸೆ ನೀಡಿ 27 ಲಕ್ಷ ರೂ.ಗಳನ್ನು ಪಡೆದಿದ್ದ. ನಂತರ ಸೀಟು ಕೊಡಿಸದೆ ವಂಚಿಸಿದ್ದಾನೆಂದು ಆರೋಪಿಸಿ ಪಶ್ಚಿಮ ಬಂಗಾಳ ಮೂಲದ ಪಿಯಾಲಿ ಗೋಷಾಲಿ ಎಂಬ ವಿದ್ಯಾರ್ಥಿ ದೂರು ನೀಡಿದ್ದ. [ವೈದ್ಯಕೀಯ ಕಾಲೇಜಿಗೆ ಜಮೀನು]
ಬಂಧಿತ ಆರೋಪಿಯು ಇತರರನ್ನೂ ವಂಚಿಸಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಸಂದೀಪ ಪಾಟೀಲ ಮಾರ್ಗದರ್ಶನದಲ್ಲಿ, ಕಬ್ಬನ್ ಪಾರ್ಕ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಶೋಭಾರಾಣಿ ನೇತೃತ್ವದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಹಾಗೂ ಸಿಬ್ಬಂದಿ ಪ್ರಕರಣದ ತನಿಖೆ ನಡೆಸಿದ್ದರು. [ಶಿಕ್ಷಕರಿಗೆ ಮನೆಯೇ ಆಸ್ಪತ್ರೆ]

ವಂಚನೆಯಾಗಿದ್ದರೆ ಇಲ್ಲಿಗೆ ಕರೆ ಮಾಡಿ: ಜನರು ಈ ರೀತಿಯ ವಂಚನೆಗೆ ಒಳಗಾಗಿದ್ದಲ್ಲಿ ಅಥವಾ ಸಹಾಯ ಬೇಕಾದಲ್ಲಿ ಡಿಸಿಪಿ ಕೇಂದ್ರ ವಿಭಾಗದ ಕಚೇರಿ ದೂರವಾಣಿ ಸಂಖ್ಯೆ 080-22942344 ಅಥವಾ 080-22942591 ಸಂಪರ್ಕಿಸಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.












Click it and Unblock the Notifications