Actor Darshan: ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳಿಸಿದ್ದು ದೃಢ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮುಕ್ತಾಯವಾಗಿದ್ದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ ಪೊಲೀಸರು ಎಲ್ಲಾ 17 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವುದು ಬಹುತೇಕ ಖಚಿತವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಮಹತ್ವದ ಸಾಕ್ಷಿ ಇದೀಗ ಪೊಲೀಸರ ಕೈಸೇರಿದೆ ಎಂದು ವರದಿಯಾಗಿದೆ. ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿದೆ ಎನ್ನುವ ಆರೋಪ ಇದೆಯೋ ಅದೀಗ ಪೊಲೀಸರ ಕೈಸೇರಿದೆ!
ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದೇ ಕೊಲೆಗೆ ಕಾರಣ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಶವವನ್ನು ಎಸೆದ ಬಳಿಕ ಆತನ ಮೊಬೈಲ್ ಅನ್ನು ಕೂಡ ರಾಜಕಾಲುವೆಗೆ ಎಸೆದಿದ್ದರು. ಪೊಲೀಸರು ಆ ಮೊಬೈಲ್‌ಗಾಗಿ ಎಷ್ಟು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ, ಬಳಿಕ ಪೊಲೀಸರು ರೇಣುಕಾಸ್ವಾಮಿ ಪವಿತ್ರಾಗೌಡಗೆ ಕಳುಹಿಸಿರುವ ಫೋಟೊಗಳ ಬಗ್ಗೆ ಮಾಹಿತಿ ಕೊಡುವಂತೆ ಮೆಟಾ ಸಂಸ್ಥೆಗೆ ಮನವಿ ಮಾಡಿದ್ದರು.

ಇದೀಗ ಇನ್‌ಸ್ಟಾಗ್ರಾಂನಲ್ಲಿ ರೇಣುಕಾಸ್ವಾಮಿ ಕೆಟ್ಟ ಮೆಸೇಜ್‌ಗಳು, ಅಶ್ಲೀಲ ಫೋಟೊಗಳನ್ನು ಪವಿತ್ರಾ ಗೌಡಗೆ ಕಳಿಸಿರುವುದು ನಿಜ ಎಂದು ಇನ್‌ಸ್ಟಾಗ್ರಾಂ ದೃಢಪಡಿಸಿದ್ದು, ಈ ಮಾಹಿತಿಯನ್ನು ಕೂಡ ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಿರುವುದಾಗಿ ವರದಿಯಾಗಿದೆ. ಇದು ಪ್ರಕರಣದಲ್ಲಿ ಮಹತ್ವದ ಸಾಕ್ಷಿ ಕೂಡ ಆಗಲಿದೆ.
ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ?
ಸದ್ಯ ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಯಾವೆಲ್ಲಾ ಸಾಕ್ಷಿಗಳನ್ನು ಕಲೆಹಾಕಿದ್ದಾರೆ, ಹತ್ಯೆಯ ಬಗ್ಗೆ ಯಾವೆಲ್ಲಾ ಸತ್ಯಗಳನ್ನು ಕಂಡುಕೊಂಡಿದ್ದಾರೆ ಎನ್ನುವ ಕುತೂಹಲ ಇದೆ. ಇದೊಂದು ಹೈಪ್ರೊಫೈಲ್ ಪ್ರಕರಣವಾಗಿರುವ ಕಾರಣ ಪೊಲೀಸರು ಎಲ್ಲಾ ಸಾಕ್ಷಿ, ಆಧಾರಗಳನ್ನು ಕೂಡ ಸಮರ್ಪಕವಾಗಿ ಕಲೆಹಾಕಿದ್ದಾರೆ ಎನ್ನಲಾಗಿದೆ. 100 ಕ್ಕೂ ಹೆಚ್ಚು ಜನರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ನಟ ಚಿಕಣ್ಣ ಅವರ ಹೇಳಿಕೆಯನ್ನು ಕೂಡ ದಾಖಲಿಸಿಕೊಳ್ಳಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು, ದರ್ಶನ್ ಬಟ್ಟೆ ಮೇಲಿನ ರಕ್ತದ ಕಲೆಗಳು, ಪವಿತ್ರಾ ಗೌಡ ಚಪ್ಪಲಿ ಮೇಲಿದ್ದ ರಕ್ತದ ಕಲೆಗಳು, ಆರೋಪಿಗಳ ಮೊಬೈಲ್ ಟವರ್ ಲೊಕೇಶನ್ ಮಾಹಿತಿ ಎಲ್ಲವನ್ನೂ ಕೂಡ ಪೊಲೀಸರು ಜಾಲಾಡಿದ್ದಾರೆ.
ಹೈದರಾಬಾದ್ ಎಫ್‌ಎಸ್‌ಎಲ್‌ನಿಂದ ಇನ್ನೂ ಹಲವು ಪರೀಕ್ಷಾ ವರದಿಗಳು ಪೊಲೀಸರ ಕೈ ಸೇರಬೇಕಿದೆ. ಬೆಂಗಳೂರಿನ ಎಫ್‌ಎಸ್‌ಎಲ್‌ನ ವರದಿಗಳು ಈಗಾಗಲೇ ಪೊಲೀಸರಿಗೆ ಸಿಕ್ಕಿದ್ದು, ಇವುಗಳನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದ್ದು, ಉಳಿದ ಪರೀಕ್ಷಾ ವರದಿಗಳನ್ನು ಸಲ್ಲಿಸಲು ಕಾಲಾವಕಾಶ ಕೇಳಲು ಪೊಲೀಸರು ನಿರ್ಧರಿಸಿದ್ದಾರೆ.
ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 17 ಜನರ ವಿರುದ್ಧ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಲು ಸಜ್ಜಾಗಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ, ಪೊಲೀಸರು ಘಟನೆಗೆ ಸಂಬಂಧಪಟ್ಟಂತೆ ಮತ್ತಷ್ಟು ಸ್ಫೋಟಕ ಅಂಶಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ.












Click it and Unblock the Notifications