ನಟ ಧ್ರುವ ಸರ್ಜಾ ಮ್ಯಾನೆಜರ್ ಬಂಧನದ ಬಗ್ಗೆ ಪೊಲೀಸ್ ಕಮಿಷನರ್ ಬಿ. ದಯಾನಂದ ಮಾಹಿತಿ
ಮಾರ್ಟಿನ್ ಸಿನಿಮಾ ಬಿಡುಗಡೆಯ ಖುಷಿಯಲ್ಲಿದ್ದ ನಟ ಧ್ರುವ ಸರ್ಜಾಗೆ ಆಘಾತ ಎದುರಾಗಿದೆ. ಧ್ರುವ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ವಿನ್ ಬಂಧನ ಪ್ರಕರಣದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧ್ರುವ ಸರ್ಜಾ ಮ್ಯಾನೇಜರ್ ಅಶ್ವಿನ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಧ್ರುವ ಸರ್ಜಾ ಅವರಿಗೆ ಹತ್ತಿರ ಆಗಬೇಕು ಎನ್ನುವ ಉದ್ದೇಶದಿಂದ ಇಂತಹ ಘಟನೆ ನಡೆದಿದೆ. ವೈಯಕ್ತಿಕ ಕಾರಣಗಳಿಂದ ಹಲ್ಲೆ ಮಾಡಿದ್ದು ಈವರೆಗೂ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆ ಮಾಡಲಾಗುತ್ತಿದ್ದು, ಇನ್ನೂ ಯಾರಾದರೂ ಶಾಮೀಲಾಗಿದ್ದರೆ ಅವನ್ನು ಕೂಡ ಬಂಧಿಸಲಾಗುವುದು ಎಂದು ಹೇಳಿದರು.

ಮ್ಯಾನೇಜರ್ ಮತ್ತು ಡ್ರೈವರ್ ಸೇರಿಕೊಂಡು ಹುಡುಗರನ್ನು ಕರೆಸಿ ಜಿಮ್ ಟ್ರೈನರ್ ಮೇಲೆ ಹಲ್ಲೆ ಮಾಡಿಸಿದ್ದಾರೆ ಎಂದು ಹೇಳಿದರು. ಜಿಮ್ ಟ್ರೈನರ್ ಜೊತೆ ಧ್ರುವ ಸರ್ಜಾ ಸ್ನೇಹ ಮಾಡಿದ್ದನ್ನು ಸಹಿಸಲಾಗದೆ ಅಶ್ವಿನ್ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ.
ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ
ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಆಗಿದ್ದ ಪ್ರಶಾಂತ್ ಪೂಜಾರಿ ಎನ್ನುವವರ ಮೇಲೆ ಮೇ 26ರಂದು ಹಲ್ಲೆ ನಡೆದಿತ್ತು. ಪ್ರಶಾಂತ್ ಪೂಜಾರಿ ಮೇಲೆ ಹರ್ಷ ಮತ್ತು ಸುಭಾಷ್ ಎನ್ನುವರು ಹಲ್ಲೆ ಮಾಡಿದ್ದರು. ವೈಯಕ್ತಿಕ ಕಾರಣಗಳಿಂದ ನಾಗೇಂದ್ರ ಎನ್ನುವಾತ ಹರ್ಷ ಮತ್ತು ಸುಭಾಷ್‌ಗೆ ಹೇಳಿ ಪೂಜಾರಿ ಮೇಲೆ ಹಲ್ಲೆ ಮಾಡಿಸಿದ್ದ ಎನ್ನಲಾಗಿತ್ತು. ನಾಗೇಂದ್ರ ಕೂಡ ಧ್ರುವ ಸರ್ಜಾ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿದ್ದ ಎನ್ನುವ ಮಾಹಿತಿ ಇದೆ. ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಲು ಧ್ರುವ ಮ್ಯಾನೇಜರ್ ಅಶ್ವಿನ್ ಕೂಡ ಬೆಂಬಲ ಕೊಟ್ಟಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದ್ದು, ಅವರನ್ನು ಇಂದು ಬಂಧಿಸಲಾಗಿದೆ.
ಟ್ರೊಲ್ ಮಾಡುತ್ತಿರುವ ದರ್ಶನ್ ಫ್ಯಾನ್ಸ್
ಧ್ರುವ ಸರ್ಜಾ ಮ್ಯಾನೇಜರ್ ಬಂಧನವಾಗುತ್ತಿದ್ದಂತೆ ದರ್ಶನ್ ತೂಗುದೀಪ ಅಭಿಮಾನಿಗಳು ಧ್ರುವ ಸರ್ಜಾರನ್ನು ಟ್ರೋಲ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವಾಗ ಧ್ರುವ ಸರ್ಜಾ, ದರ್ಶನ್ ತೂಗುದೀಪ ಪ್ರಕರಣದ ಬಗ್ಗೆ ಮಾತನಾಡಿದ್ದರು, ನಮ್ಮ ಸುತ್ತ ಮುತ್ತ ಒಳ್ಳೆಯವರು ಇರಬೇಕು ಎಂದು ಹೇಳಿದ್ದರು. ಇದನ್ನೇ ಇಟ್ಟುಕೊಂಡು ಧ್ರುವ ಸರ್ಜಾ ಅವರಿಗೆ ದರ್ಶನ್ ಅಭಿಮಾನಿಗಳು ಈಗ ಪ್ರಶ್ನೆ ಮಾಡುತ್ತಿದ್ದು, ಒಳ್ಳೆಯವರು ಎಂದರೆ ಹೀಗಾ ಎಂದು ಕೇಳುತ್ತಿದ್ದಾರೆ.
ಈ ವಿಚಾರದಲ್ಲಿ ದರ್ಶನ್ ಮತ್ತು ಧ್ರುವ ಸರ್ಜಾ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಮಾರ್ಟಿನ್ ಸಿನಿಮಾ ನೋಡಲ್ಲ ಎಂದು ಕೆಲವು ದರ್ಶನ್ ಅಭಿಮಾನಿಗಳು ಹೇಳಿದ್ದು, ಇದಕ್ಕೆ ಧ್ರುವ ಸರ್ಜಾ ಅಭಿಮಾನಿಗಳು ಕೂಡ ತಿರುಗೇಟು ಕೊಡುತ್ತಿದ್ದಾರೆ.












Click it and Unblock the Notifications