ಮಾಸ್ಕ್ ಹಾಕದಿರುವುದನ್ನು ಪ್ರಶ್ನಿಸಿದ ಪೊಲೀಸರಿಗೆ ಹಿಗ್ಗಾ ಮುಗ್ಗಾ ಥಳಿತ ವಿಡಿಯೋ ವೈರಲ್
ಬೆಂಗಳೂರು, ಡಿ. 07: ವಾಟರ್ ಟ್ಯಾಂಕರ್ ಹರಿದು ಬೈಕ್ ಸವಾರ ಸಾವು. ಐಶರಾಮಿ ಕಾರು ಮತ್ತು ಆಟೋ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಇಂದಿರಾನಗರ ಸಮೀಪ ಸರಣಿ ಅಪಘಾತ, ಓರ್ವ ಸಾವು, ಮತ್ತೊಬ್ಬ ಸಾವು ಬದುಕಿನ ನಡುವೆ ಹೋರಾಟ. ಮಾಸ್ಕ್ ಹಾಕದಿರುವುದನ್ನು ಪ್ರಶ್ನಿಸಿದ ಪೊಲೀಸರಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಪುಂಡರ ವಿಡಿಯೋ ವೈರಲ್. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.
ಮಾಸ್ಕ್ ಧರಿಸದಿದ್ದನ್ನು ಪ್ರಶ್ನಿಸಿದ ಪೊಲೀಸರನ್ನು ಪುಂಡರ ಗ್ಯಾಂಗ್ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.#Bengaluru #BengaluruNews #Viral #ViralVideo #Mask pic.twitter.com/cAsOVbk9zL
— oneindiakannada (@OneindiaKannada) December 7, 2021
ಪೊಲೀಸರ ಮೇಲೆ ಪುಂಡರ ದಾಳಿ:
ಮಾಸ್ಕ್ ಹಾಕಿಲ್ಲ ಎಂಬುದನ್ನು ಪ್ರಶ್ನಸಿದ ಪೊಲೀಸರ ಮೇಲೆ ಪುಂಡರ ಗುಂಪು ದಾಳಿ ಮಾಡಿದೆ. ಪೊಲೀಸರನ್ನು ಹಿಡಿದು ಕೆಳಗೆ ಹಾಕಿಕೊಂಡು ಥಳಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಯಲಹಂಕ ನ್ಯೂಟೌನ್ ಚಿಕ್ಕಬೆಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಹಲವು ಪುಂಡರ ವಿರುದ್ಧ ಎಫ್ಐಆರ್ ದಾಖಲಿಸಿರುವ ಯಲಹಂಕ ನ್ಯೂಟೌನ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ವಿಡಿಯೋ ಬೇರೆಯದ್ದೇ ಕಥೆ:
ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಬೇರೆಯದ್ದೇ ಕಥೆ ಹೇಳುತ್ತದೆ. ಯುವಕನೊಬ್ಬ ಪೊಲೀಸ್ ಕಾನ್‌ಸ್ಟೇಬಲ್ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಇದಕ್ಕೆ ಯಾವುದೇ ಪ್ರತಿರೋಧ ತೊರದೇ ವಶಕ್ಕೆ ಪಡೆಯುವ ಪೊಲೀಸ್ ಸಿಬ್ಬಂದಿ ಹಲ್ಲೆಗೆ ಒಳಗಾಗುತ್ತಾರೆ. ವೇಳೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್ಐ ಮೇಲೆ ಸಹ ಹಲ್ಲೆ ನಡೆದಿದೆ. ಇದಾದ ಬಳಿಕ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪೊಲೀಸ್ ಅಧಿಕಾರಿಗಳು ಯಾವುದೇ ಅಭಿಪ್ರಾಯ ಹಂಚಿಕೊಂಡಿಲ್ಲ. ಗಲಾಟೆ ವೇಳೆ ಮಹಿಳೆಯರು ಕಿರುಚುತ್ತಿರುವ ಸದ್ದು ವಿಡಿಯೋದಲ್ಲಿ ಕೇಳಿಸುತ್ತಿದ್ದು, ಮಾಸ್ಕ್ ವಿಚಾರವಾಗಿ ಜಗಳ ನಡೆಯಿತೇ ಇಲ್ಲವೇ ಬೇರೆಯದ್ದೇ ಕಾರಣದಿಂದ ನಡೆಯಿತಾ ಎಂಬ ಅನುಮಾನ ವ್ಯಕ್ತವಾಗಿದೆ.

ಬೈಕ್ ಸವಾರ ಸಾವು:
ಎಚ್‌ಎಸ್ಆರ್ ಬಡಾವಣೆಯಲ್ಲಿ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ್ದಾನೆ. ನೀರಿನ ಟ್ಯಾಂಕರ್ ಮುಂದೆ ಚಲಿಸುತ್ತಿದ್ದ ಬೈಕ್ ಸವಾರನಿಗೆ ರಸ್ತೆ ಗಂಡಿ ಎದುರಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ತಿರುವು ಪಡೆದ ಸವಾರನ ಮೇಲೆ ನೀರಿನ ಟ್ಯಾಂಕರ್ ಹರಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಎಚ್‌ಎಸ್‌ಆರ್ ಬಡಾವಣೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸರಣಿ ವಾಹನ ಅಪಘಾತ:
ಬೆಂಜ್ ಐಶರಾಮಿ ಕಾರು ಮತ್ತು ಎರಡು ಆಟೋ ಮತ್ತು ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಇಂದಿರಾನಗರದ 80 ಅಡಿ ರಸ್ತೆಯಲ್ಲಿ ವೇಗವಾಗಿ ಬಂದ ಬೆಂಜ್ ಕಾರು ಎರಡು ಆಟೋಗಳಿಗೆ ಅಪ್ಪಳಿಸಿದೆ. ಈ ವೇಳೆ ಮಿನಿ ಲಾರಿ ಸೇರಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತ ನಡೆದಿದೆ. ಈ ವೇಳೆ ಆಟೋ ಚಾಲಕ ಸಾವನ್ನಪ್ಪಿದ್ದು ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಲಸೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಸಿಬಿ ಪೊಲೀಸರಿಂದ ಡ್ರಗ್ ಪೆಡ್ಲರ್ಸ್ ಸೆರೆ:
ವಿದ್ಯಾರ್ಥಿಗಳಿಗೆ ಮತ್ತು ಐಟಿ ಉದ್ಯೋಗಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಐವರು ಡ್ರಗ್ ಪೆಡ್ಲರ್ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಕ್ರಿಸ್ಟಲ್ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಹತ್ತು ಲಕ್ಷ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಐವರನ್ನು ಬಂಧಿಸಿದ್ದು, ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications