RV Road-Bommasandra Metro Line: 5 ದಿನ ಮೊದಲೇ ಪ್ರಧಾನಿ ಮೋದಿಯಿಂದ ಹಳದಿ ಮಾರ್ಗ ಉದ್ಘಾಟನೆ
ಬೆಂಗಳೂರು, ಆಗಸ್ಟ್ 03: ಬೆಂಗಳೂರು ನಮ್ಮ ಮೆಟ್ರೋ ಹಳದಿ ಮಾರ್ಗವು (Metro Yellow Line) ಸತತ ಮೂರು ವರ್ಷಗಳ ವಿಳಂಬವಾದ ನಂತರ ವಾಣಿಜ್ಯ ಕಾರ್ಯಾಚರಣೆಗೆ ಮೊನ್ನೆಯಷ್ಟೇ ಅನುಮತಿ ಪಡೆದಿದೆ. ಇದರ ಬೆನ್ನಲ್ಲೆ ಮಾರ್ಗ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಲಿದ್ದಾರೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಮಾಹಿತಿ ನೀಡಿದ್ದಾರೆ.
ಆರ್‌ವಿ.ರಸ್ತೆ-ಬೊಮ್ಮಸಂದ್ರ (RV Road-Bommasandra Metro Line) ನಮ್ಮ ಮೆಟ್ರೋ ಹಳದಿ ಮಾರ್ಗವನ್ನು BMTRCL ತೆರೆಯಲು ನಿಶ್ಚಯಿಸಿದೆ. ಈ ಹಿಂದೆ ಆಗಸ್ಟ್ 15ರಂದು ಮಾರ್ಗ ಲೋಕಾರ್ಪಣೆ ಆಗಲಿದೆ ಎಂದು ಹೇಳಲಾಗಿತ್ತು. ಇದೀಗ ಐದು ದಿನ ಮೊದಲೇ ಅಂದರೆ ಆಗಸ್ಟ್ 10 ರಂದು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಳದಿ ಮಾರ್ಗದ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ. ಇದಲ್ಲದೇ ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗಳ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸಂಬಂಧ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ನಮ್ಮ ಕ್ಷೇತ್ರಕ್ಕೆ ಒಂದು ಹೆಗ್ಗುರುತಿನ ಕ್ಷಣವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ನೂರು ದಿನಗಳ ಆಡಳಿತಾವಧಿಯಲ್ಲಿ ಕೇಂದ್ರ ಸಚಿವ ಸಂಪುಟದಿಂದ ಈ ಮೆಟ್ರೋ ಮೂರನೇ ಹಂತದ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಇದೀಗ ಆ ಯೋಜನೆಯ ಕಾಮಗಾರಿ ಆರಂಭವು ಶುರುವಾಗಲಿದೆ. ಈ ಎರಡು ಯೋಜನೆಗಳಿಂದ ಭವಿಷ್ಯದಲ್ಲಿ ಬೆಂಗಳೂರು ದಕ್ಷಿಣದ ಸುಮಾರು 25 ಲಕ್ಷ ಜನರಿಗೆ ಪ್ರಯೋಜನವನ್ನು ನೀಡುತ್ತವೆ ಎಂದು ಅವರು ವಿವರಿಸಿದ್ದಾರೆ.
ಸುಮಾರು 20,000 ಕೋಟಿ ಮೌಲ್ಯದ ಮೆಟ್ರೋ ಮೂಲಸೌಕರ್ಯವನ್ನು ಈ ಪ್ರದೇಶಕ್ಕೆ ಮಾತ್ರ ಮೀಸಲಿಡಲಾಗಿದೆ. ಬೆಂಗಳೂರು ದಕ್ಷಿಣದ ಸಾರ್ವಜನಿಕ ಸಾರಿಗೆ ಮೂಲಸೌಕರ್ಯದ ಬಗ್ಗೆ ಪ್ರಧಾನಿ ಮೋದಿ ಅವರು ಆದ್ಯತೆ ವಹಿಸಿದ್ದಾರೆ. ಅವರ ಪ್ರೀತಿ ಮತ್ತು ಬದ್ಧತೆಗಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ ಎಂದಿದ್ದಾರೆ.
ಸೆಪ್ಟಂಬರ್ ಗೆ ನಾಲ್ಕನೇ ರೈಲು ಸಂಚಾರ ನಿರೀಕ್ಷೆ
ಬೆಂಗಳೂರು ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಇತ್ತೀಚೆಗೆ ನಾಲ್ಕು ದಿನಗಳ ತಪಾಸಣೆ ನಡೆಸಿತ್ತು. ಬಳಿಕ ವರದಿ ಸಲ್ಲಿಸಿ ಸಂಚಾರ ಸುರಕ್ಷತಾ ಅನುಮತಿ ನೀಡಿತು. 19 ಕಿಲೋ ಮೀಟರ್ ಉದ್ದದ ಈ ಹಳದಿ ಮಾರ್ಗದಲ್ಲಿ ಸದ್ಯ ಮೂರು ಡ್ರೈವರ್‌ಲೆಸ್ ರೈಲುಗಳು ಸಂಚಾರ ಮಾಡಲಿವೆ. ಆಗಸ್ಟ್ ಮೂರನೇ ವಾರದ ನಾಲ್ಕನೇ ಡ್ರೈವರ್‌ಲೆಸ್ ರೈಲು ಬೆಂಗಳೂರಿಗೆ ಬರಲಿದ್ದು, ನಂತರ ವಿವಿಧ ಪರೀಕ್ಷೆಗಳಿಗೆ ಒಳಪಡಲಿದೆ. ಆ ರೈಲು ಸೆಪ್ಟಂಬರ್ ಹೊತ್ತಿಗೆ ಕಾರ್ಯಾಚರಣೆ ಆರಂಭಿಸಲಿದೆ.












Click it and Unblock the Notifications