ಬೆಂಗಳೂರಿನಲ್ಲಿ ನಾಯಿಗಳ ಕಂಟ್ರೋಲ್‌ಗೆ ಪ್ಲ್ಯಾನ್, ಲಸಿಕೆಗೆ 5 ಕೋಟಿ ರೂ.!
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ಬೀದಿ ನಾಯಿಗಳಿಗೆ ವಿವಿಧ ಆರೋಗ್ಯ ಸಮಸ್ಯೆ ಕಾಡುತ್ತಿದ್ದು. ಈ ರೀತಿ ಆರೋಗ್ಯ ಸಮಸ್ಯೆ ಇರುವ ನಾಯಿಗಳು ಮನುಷ್ಯರನ್ನು ಕಚ್ಚಿದಾಗ ಆರೋಗ್ಯ ಸಮಸ್ಯೆ ಆಗುತ್ತಿದೆ. ಹೀಗಾಗಿ, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಇದೀಗ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ / ಐದು ಮಾದರಿ ಇಂಜೆಕ್ಷನ್ ಕೊಡುವ ಬೃಹತ್ ಅಭಿಯಾನಕ್ಕ ಚಾಲನೆ ನೀಡಲಾಗಿದೆ.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತವಾಗಿವೆ. ಅಲ್ಲದೆ ಕೆಲವು ನಾಯಿಗಳು ಆರೋಗ್ಯ ಸಮಸ್ಯೆಗಳನ್ನು ಸಹ ಎದುರಿಸುತ್ತಿವೆ. ಹೀಗಾಗಿ, ನಾಯಿಗಳ ಸಮಸ್ಯೆಯನ್ನು ತಪ್ಪಿಸಲು ಪಾಲಿಕೆ ನಿರ್ಧರಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ ಮಲ್ಟಿ ಇಂಜೆಕ್ಷನ್ ಹಾಕುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದ್ದಾರೆ.

ಲಸಿಕೆಗೆ 5 ಕೋಟಿ ರೂ: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಮಲ್ಟಿ ಇಂಜೆಕ್ಷನ್ (Combined Vaccine) ಅಳವಡಿಸುವ ಕಾರ್ಯಕ್ರಮಕ್ಕೆ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಗಿದೆ. ಇಡೀ ದೇಶದಲ್ಲಿಯೇ ಮೊದಲಬಾರಿಗೆ ಪಾಲಿಕೆ ವತಿಯಿಂದ ಸಂಯುಕ್ತ ಲಸಿಕೆ /ಮಲ್ಟಿ ಇಂಜೆಕ್ಷನ್ ಕೊಡಲಾಗುತ್ತಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ 1.84 ಲಕ್ಷ ಬೀದಿ ನಾಯಿಗಳಿಗೆ ಮಲ್ಟಿ ಇಂಜೆಕ್ಷನ್ ಹಾಕುವ ಗುರಿ ಹೊಂದಲಾಗಿದೆ. ವ್ಯಾಕ್ಸಿನ್ ಮತ್ತು ಕೋಲ್ಡ್ ಸ್ಟೋರೇಜ್ ಮಾಡುವುದಕ್ಕೆ 4.98 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದಿದ್ದಾರೆ.
ಬಿಬಿಎಂಪಿಯ ಪಶುಪಾಲನಾ ವಿಭಾಗ ವತಿಯಿಂದ ಇದೀಗ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ನಾಯಿಗಳಲ್ಲಿ ಸಂತಾನಹರಣ ಶಸ್ತ್ರ(ABC) ಚಿಕಿತ್ಸೆ ಹಾಗೂ ರೇಬೀಸ್ ರೋಗ ನಿರೋಧಕ ಲಸಿಕೆಯನ್ನು(ARV) ಯಶಸ್ವಿಯಾಗಿ ಹಾಗೂ ನಿಯಮಾನುಸಾರ ಕೊಡುತ್ತಿರುವುದಾಗಿಯೂ ಅವರು ಹೇಳಿದ್ದಾರೆ.

ರೇಬೀಸ್ ಲಸಿಕೆ ಹೊರತು ಪಡಿಸಿ ಬೀದಿನಾಯಿಗಳಲ್ಲಿ ಹಲವು ಮಾರಾಣಾಂತಿಕ ಸಾಂಕ್ರಾಮಿಕ ರೋಗಗಳನ್ನು ಹಾಗೂ ಮನುಷ್ಯರಿಗೆ ನಾಯಿಗಳಿಂದ ಹರಡಬಹುದಾದ ರೋಗಗಳನ್ನು ತಡೆಗಟ್ಟಲು ಮಲ್ಟಿ ಇಂಜೆಕ್ಷನ್ ಕೊಡುವ ಕಾರ್ಯಕ್ರಮವನ್ನು ನಡೆಸುವುದು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
ಬೀದಿ ನಾಯಿಗಳಿಗೆ ಮಾರಕವಾಗಿರುವ ರೋಗಗಳಲ್ಲಿ ಐದು ರೋಗಗಳು ತುಂಬಾ ಮಾರಕವಾಗಿರುತ್ತದೆ. ಈ ರೋಗಗಳಿಂದ ಬೀದಿ ನಾಯಿಗಳನ್ನು ರಕ್ಷಿಸಲು ಹಾಗೂ ನಾಯಿಗಳಿಂದ ಮಾನವನಿಗೆ ಹರಡಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು 5 ರೋಗಗಳಿಗೆ ಈ ಸಂಯುಕ್ತ ಲಸಿಕೆಯು ಅತ್ಯವಶ್ಯಕವಾಗಿರುತ್ತದೆ ಎಂದು ಹೇಳಲಾಗಿದೆ.

ಪಾಲಿಕೆ ವ್ಯಾಪ್ತಿಯಲ್ಲಿರುವ ಜನರ ಆರೋಗ್ಯ ಕಾಪಾಡುವುದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಆದ್ಯ ಕರ್ತವ್ಯವಾಗಿರುತ್ತದೆ. ಇದೇ ರೀತಿ ಪಾಲಿಕೆ ವ್ಯಾಪ್ತಿಯ ಬೀದಿನಾಯಿಗಳ ಆರೋಗ್ಯ ಕಾಪಾಡವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಬೀದಿನಾಯಿಗಳಲ್ಲಿ ಕಾಣಿಸಿಕೊಳ್ಳುವಂತಹ ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕುವುದರಿಂದ ಈ ಮಾರಕ ರೋಗಗಳ ಹರಡುವಿಕೆ ಹಾಗೂ ತಡೆಗಟ್ಟುವಲ್ಲಿ ಸಂಯುಕ್ತ ಲಸಿಕೆ ಕಾರ್ಯಕ್ರಮವು ಉಪಯುಕ್ತವಾಗಲಿದೆ ಎಂದು ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಇನ್ನು ಬೆಂಗಳೂರಿನಲ್ಲಿ 2023ನೇ ಸಾಲಿನ ಬೀದಿ ನಾಯಿ ಸಮೀಕ್ಷೆಯ ಪ್ರಕಾರ, 2.79 ಲಕ್ಷ ಬೀದಿನಾಯಿಗಳಲ್ಲಿ ಶೇ. 50ಕ್ಕೂ ಹೆಚ್ಚು ಬೀದಿನಾಯಿಗಳಿಗೆ ಪ್ರಸಕ್ತ ಸಾಲಿನಲ್ಲಿ ಸಂಯುಕ್ತ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.
ನಾಯಿಗಳಿಗೆ ಮಾರಕವಾಗಿರುವ ಐದು ರೋಗಗಳ ವಿವರ:
1. ಕೆನೈನ್ ಡಿಸ್ಟೆಂಪರ್(Canine Distemper)
2. ಕೆನೈನ್ ಹೆಪಟೈಟಿಸ್(Canine hepatitis)
3. ಕೆನೈನ್ ಪಾರ್ವವೈರಸ್(Canine Parvovirus)
4. ಕ್ಯಾನೈನ್ ಪ್ಯಾರಾ ಇನ್ಫ್ಲುಯೆನ್ಸ(Canine para influenza)
5. ನಾಯಿಗಳಲ್ಲಿ ಲೆಪ್ಟೊಸ್ಪೈರೋಸಿಸ್(Canine Leptospirosis)-(2 ಸ್ಟೈನ್) (ನಾಯಿಗಳಿಂದ ಮನುಷ್ಯರಿಗೆ ಹರಡಬಹುದಾದ ರೋಗ)
ಇವೆ ಎಂದು ಹೇಳಲಾಗಿದೆ.












Click it and Unblock the Notifications