ಮಲ್ಲೇಶ್ವರದಲ್ಲಿ ಮೇಕೆದಾಟು ಪಾದಯಾತ್ರೆಗೆ ಜನರ ಹಿಡಿಹಿಡಿ ಶಾಪ
ಬೆಂಗಳೂರು, ಮಾರ್ಚ್ 3: ಒಂದು ಕಡೆ ಕೆಪಿಸಿಸಿ ಪ್ರಾಯೋಜಿತ ಮೇಕೆದಾಟು ಎರಡನೇ ಚರಣದ ಪಾದಯಾತ್ರೆಗೆ ಜನರ ಸ್ಪಂದನೆ ಉತ್ತಮ ಸಿಗುತ್ತಿದ್ದರೆ, ಮತ್ತೊಂದು ಕಡೆ ಸಾರ್ವಜನಿಕರಿಂದ ಅದೇ ಯಾತ್ರೆಗೆ ಹಿಡಿಶಾಪವೂ ಬೀಳುತ್ತಿದೆ. ಎರಡನೇ ಹಂತದ ಪಾದಯಾತ್ರೆಯಿಂದಾಗಿ ಟ್ರಾಫಿಕ್ ಜಾಮ್‌ನಿಂದ ಜನರು ಹೈರಾಣರಾಗಿದ್ದಾರೆ.
ಪಾದಯಾತ್ರೆ ಕೊನೆಯ ದಿನವಾದ ಗುರುವಾರ (ಮಾ 3) ಅರಮನೆ ಮೈದಾನದಿಂದ ಹೊರಟಿದೆ. ಮೇಖ್ರಿ ವೃತ್ತದಿಂದ ಹೊರಟಿರುವ ಪಾದಯಾತ್ರೆ ಬಳ್ಳಾರಿ ರಸ್ತೆ, ಕಾವೇರಿ ಚಿತ್ರಮಂದಿರ, ಭಾಷ್ಯಂ ಸರ್ಕಲ್, ಮಲ್ಲೇಶ್ವರಂ ಹದಿನಂಟನೇ ಕ್ರಾಸ್, ಸಂಪಿಗೆ ರಸ್ತೆ, ಶಾಂತಲಾ ಜಂಕ್ಷನ್,ಕಾಟನ್ ಪೇಟೆ ಮುಖ್ಯರಸ್ತೆ, ಚಾಮರಾಜಪೇಟೆಯ ಮೂಲಕ, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ಬಂದು ಸೇರಲಿದೆ.
ಮೇಕೆದಾಟು ಪಾದಯಾತ್ರೆಯ ಮೊದಲ ರೂಟ್ ಮ್ಯಾಪಿನಲ್ಲಿ ಮಲ್ಲೇಶ್ವರ ಕ್ಷೇತ್ರದಿಂದ ಹಾದುಹೋಗುವ ಪ್ಲ್ಯಾನ್ ಇರಲಿಲ್ಲ. ರಾಮನಗರದ ಕಾರ್ಯಕ್ರಮವೊಂದರಲ್ಲಿ ಸಚಿವ ಡಾ.ಅಶ್ವಥ್ ನಾರಾಯಣ್ ಮತ್ತು ಸಂಸದ ಡಿ.ಕೆ.ಸುರೇಶ್ ನಡುವೆ ವೇದಿಕೆಯಲ್ಲೇ ಗಂಡಸ್ತನದ ಜಗಳ ನಡೆದಿದ್ದರಿಂದ, ಉದ್ದೇಶಪೂರ್ವಕವಾಗಿಯೇ ರೂಟ್ ಮ್ಯಾಪ್ ಬದಲಾವಣೆ ಮಾಡಲಾಗಿತ್ತು ಎನ್ನುವ ಮಾತು ಚಾಲ್ತಿಯಲ್ಲಿದೆ.

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ಸವಾರರಿಗೆ ರಸ್ತೆ ಬಂದ್ ಮಾಡಲಾಗಿತ್ತು. ಈ ವಿಚಾರದಲ್ಲಿ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಕಿಲೋಮೀಟರ್ ಗಟ್ಟರೆ ಟ್ರಾಫಿಕ್ ಜಾಮ್ ಆಗಿದ್ದು ಗರ್ಭಿಣಿಯೊಬ್ಬರು ಸಿಕ್ಕಿಹಾಕಿಕೊಂಡ ಘಟನೆಯೂ ವರದಿಯಾಗಿದೆ.
ರಸ್ತೆ ಬಂದ್ ಮಾಡಿದ್ದರಿಂದ ಜನರು ಪೊಲೀಸರೊಂದಿಗೆ ವಾಗ್ಯುದ್ದಕ್ಕೆ ಇಳಿದಿದ್ದು, ಜನರ ಆಕ್ರೋಶವನ್ನು ನೋಡಿ ಪೊಲೀಸರು ಏನೂ ಮರು ಮಾತನಾಡದೆ ಸುಮ್ಮನಾಗಿದ್ದಾರೆ. ಮೊದಲೇ ರಸ್ತೆ ಬಂದ್ ಮಾಡುವುದಕ್ಕೆ ಮಾಹಿತಿ ಕೊಟ್ಟಿದ್ದರೆ, ಶಾಲಾ, ಕಾಲೇಜಿಗೆ ರಜೆ ಕೊಡಲು ಮನವಿ ಮಾಡುತ್ತಿದ್ದೆವು. ನಮ್ಮ ಕೆಲಸಕ್ಕೆ ತೊಂದರೆಯಾದರೆ ಈ ರಾಜಕೀಯದವರು ಕೊಡುತ್ತಾರಾ ಎಂದು ಪಾದಯಾತ್ರೆಗೆ ಜನರು ಹಿಡಿಶಾಪ ಹಾಕುತ್ತಿದ್ದ ದೃಶ್ಯಗಳು ವರದಿಯಾಗುತ್ತಿದೆ.
ಶಾಲೆಗೆ ಹೋಗಲಾಗದೇ ವಿದ್ಯಾರ್ಥಿನಿಯೊಬ್ಬಳು ಕಣ್ಣೀರು ಹಾಕುತ್ತಿರುವುದು, ಯಾವ ಪುರುಷಾರ್ಥಕ್ಕಾಗಿ ಇವರ ಪಾದಯಾತ್ರೆ, ಸರಕಾರಕ್ಕೆ ಧಿಕ್ಕಾರ, ಇವರೆಲ್ಲಾ ಜನರ ಸೇವೆಗೆ ಇರುವವರು, ತೊಂದರೆ ಕೊಡುವುದಕ್ಕೆ ಅಲ್ಲ ಎನ್ನುವ ಆಕ್ರೋಶದ ಮಾತುಗಳು ಪುಂಖಾನುಪುಂಖವಾಗಿ ಕೇಳಿ ಬರುತ್ತಿದೆ.












Click it and Unblock the Notifications