Breaking; ಶುಭ ಸುದ್ದಿ, ಸಂಜೆಯೇ ಪೀಣ್ಯ ಫ್ಲೈ ಓವರ್ ಓಪನ್
ಬೆಂಗಳೂರು, ಫೆಬ್ರವರಿ 16; ಪೀಣ್ಯ ಭಾಗದಲ್ಲಿ ಸಂಚಾರ ನಡೆಸುವ ಜನರಿಗೆ ಸಿಹಿಸುದ್ದಿ. ಡಾ. ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ ಲಘು ವಾಹನಗಳ ಸಂಚಾರಕ್ಕೆ ಬುಧವಾರ ಸಂಜೆಯೇ ಮುಕ್ತವಾಗಲಿದೆ.
ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಕುರಿತು ಮಾಹಿತಿ ನೀಡಿದೆ ದುರಸ್ತಿ ಕೆಲಸಗಳಿಗಾಗಿ ಡಿಸೆಂಬರ್ 26 ರಿಂದಲೇ ಫ್ಲೈ ಓವರ್ ಮೇಲೆ ಎರಡೂ ಕಡೆ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಪೀಣ್ಯ ಎಲಿವೇಡೆಡ್ ಮೇಲ್ಸೆತುವೆಯ 102 ಮತ್ತು 103ನೇ ಕಂಬಗಳ ನಡುವೆ ತಾಂತ್ರಿಕ ದೋಷವಿದೆ ಎಂದು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಎನ್‌ಎಚ್‌ಎಐ ದುರಸ್ತಿ ಕಾರ್ಯವನ್ನು ಕೈಗೊಂಡಿತ್ತು. ಈಗ 56 ದಿನಗಳ ಬಳಿಕ ವಾಹನ ಸಂಚಾರ ಆರಂಭವಾಗುತ್ತಿದೆ.

ಪೀಣ್ಯ ಫ್ಲೈ ಓವರ್ ಮೇಲೆ ವಾಹನ ಸಂಚಾರ ಬಂದ್ ಆಗಿರುವುದರಿಂದ ಹೊರ ಜಿಲ್ಲೆಗಳಿಂದ ಬೆಂಗಳೂರು ನಗರಕ್ಕೆ ಬರುವ ಮತ್ತು ನಗರದಿಂದ ಹೋಗುವ ವಾಹನಗಳಿಗೆ ತೊಂದರೆಯಾಗುತ್ತಿತ್ತು. ಪ್ರತಿದಿನ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದವು.
ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಮಂಜುನಾಥ್ ಫ್ಲೈ ಓವರ್ ದುರಸ್ತಿ ವಿಚಾರದ ಬಗ್ಗೆ ಮಾತನಾಡಿದ್ದರು. ವಾಹನ ಸವಾರರಿಗೆ ಆಗುವ ತೊಂದರೆಗಳ ಕುರಿತು ವಿಷಯ ಪ್ರಸ್ತಾಪ ಮಾಡಿದ್ದರು.
ಸದನದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಮಾಹಿತಿ ನೀಡಿದ್ದರು. "ಮೇಲ್ಸೆತುವೆ ಭಾರೀ ವಾಹನಗಳ ಸಂಚಾರಕ್ಕೆ ಸುರಕ್ಷಿತವಲ್ಲ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವರದಿ ನೀಡಿದೆ. ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದರು.
ಪೀಣ್ಯ ಫ್ಲೈ ಓವರ್ ಮೇಲೆ ಐಐಎಸ್‌ಸಿ ನಡೆಸಿದ ಭಾರದ ಪರೀಕ್ಷೆ ವರದಿ ಬಗ್ಗೆ ಮಾತನಾಡಿದ್ದ ಮುಖ್ಯಮಂತ್ರಿಗಳು, "ಮೇಲ್ಸೆತುವೆ ನಿರ್ಮಾಣ ಮಾಡುವಾಗ ಗುಣಮಟ್ಟ ಪಾಲನೆ ಮಾಡಿಲ್ಲ. ಕಳಪೆ ಕಾಮಗಾರಿಯಿಂದ ಈಗ ಸಮಸ್ಯೆ ಉಂಟಾಗಿದೆ. ಭಾರೀ ವಾಹನಗಳು ಸಂಚಾರ ನಡೆಸಿದಾಗ ಕಂಬಗಳ ಒಳಗಿನ ಕೇಬಲ್ ಬಾಗುತ್ತದೆ. ಆದ್ದರಿಂದ ಭಾರೀ ವಾಹನಗಳ ಸಂಚಾರಕ್ಕೆ ಫ್ಲೈ ಓವರ್ ಸುರಕ್ಷಿತವಲ್ಲ ಎಂಬ ವರದಿ ಬಂದಿದೆ" ಎಂದು ತಿಳಿಸಿದ್ದರು.












Click it and Unblock the Notifications