Bengaluru Tunnel Project: ಸುರಂಗ ರಸ್ತೆ ಯೋಜನೆಗಳಿಗೆ ಹಣ ಪೋಲು, ಮೊದಲ ಇದನ್ನು ಮಾಡಿ: ಪಿಸಿ ಮೋಹನ್
ಬೆಂಗಳೂರು, ಜನವರಿ 28: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕಾಗಿ ಬೃಹತ್ ಸುರಂಗ ರಸ್ತೆ ಯೋಜನೆಗೆ ಕೈ ಹಾಕಿತು. ಇದು ಕಾರ್ಯಸಾಧುವಿಲ್ಲ ಎಂದು ವಿರೋಧ ಕೇಳಿ ಬಂದರೂ ಸಹಿತ ಸರ್ಕಾರ ಅನುಮೋದನೆ ನೀಡಿತು. ಇದರ ಬೆನ್ನಲ್ಲೆ ನಾಯಂಡಹಳ್ಳಿ-ಕೆ.ಆರ್.ಪುರಂ ಸುರಂಗ ರಸ್ತೆ ಯೋಜನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ಸಂಸದ ಖಂಡಿಸಿದ್ದಾರೆ. ಜನರ ತೆರಿಗೆ ಹಣ ಪೋಲು ಮಾಡುವ ಬದಲು ಮೊದಲು ಈ ಕೆಲಸ ಮಾಡಿ ಎಂದು ಒತ್ತಾಯಿಸಿದ್ದಾರೆ.
ಸರ್ಕಾರದ ಸುರಂಗ ರಸ್ತೆ ಯೋಜನೆ ಕುರಿತು ಮಂಗಳವಾರ ಟ್ವೀಟ್ ಮೂಲಕ ಬಿಜೆಪಿ ಸಂಸದ ಪಿ.ಸಿ.ಮೋಹನ್ ಅವರು ಪ್ರತಿಕ್ರಿಯಿಸಿದ್ದಾರೆ. ಹೆಬ್ಬಾಳ-ಸಿಲ್ಕ್‌ಬೋರ್ಡ್ ಸುರಂಗಕ್ಕಾಗಿ ಡಿಪಿಆರ್ ತಯಾರಿಸಲು ಹಳೆಯ ಯೋಜನೆ ಪ್ಲಾನ್ ಅನ್ನು ಕಾಪಿ ಪೇಸ್ಟ್ ಮಾಡಲಾಗಿದೆ. ಅದಕ್ಕಾಗಿ ಬಿಬಿಎಂಪಿ ₹14.2 ಕೋಟಿ ವ್ಯರ್ಥ ಮಾಡಿದೆ ಎಂದು ದೂರಿದ್ದಾರೆ.

ಡಿಪಿಆರ್ ಸಿದ್ಧಪಡಿಸಲು ₹25 ಕೋಟಿ
ಇದೀಗ ನಮ್ಮ ಮೆಟ್ರೋ ಪರ್ಪಲ್ ಲೈನ್ ಮತ್ತು ಬೆಂಗಳೂರು ಉಪನಗರ ರೈಲಿನ ಉದ್ದಕ್ಕೂ ಕೆಆರ್ ಪುರ-ನಾಯಂಡಹಳ್ಳಿ ಸುರಂಗಕ್ಕಾಗಿ ಮತ್ತೊಂದು ಯೋಜನೆಗೆ ಕೈ ಹಾಕಿದೆ. ಅದಕ್ಕಾಗಿ ₹25 ಕೋಟಿ ಡಿಪಿಆರ್ ಸಿದ್ಧಪಡಿಸಲು ಯೋಜಿಸಿದೆ. ಈಗಾಗಲೇ ಟೆಂಡರ್ ಕರೆದಿದೆ.
ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡಿ
ಈ ಮೂಲಕ ರಾಜ್ಯ ಸರ್ಕಾರ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡುತ್ತಿದೆ. ಸರ್ಕಾರ ಇದೆಲ್ಲ ಬಿಟ್ಟು ಮೊದಲು ರಸ್ತೆ ಗುಂಡಿಗಳನ್ನು ಮುಚ್ಚಬೇಕು. ವ್ಯವಸ್ಥಿತ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ನಗರದ ಮೂಲಭೂತ ವಿಷಯಗಳ ಮೇಲೆ ಗಮನಹರಿಸಬೇಕು. ಜನರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಹತ್ತು ನಿಮಿಷದ ಮಳೆಗೆ ಜನರು ಪರಿತಪಿಸುತ್ತಾರೆ. ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ನೀರು ನಿಂತುಕೊಂಡು ಜಲಾವೃತವಾಗುತ್ತದೆ. ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುವ ವಿಡಿಯೋವೊಂದನ್ನು ಪಿಸಿ. ಮೋಹನ್ ಅವರು ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ನೆನ್ನೆಯಷ್ಟೇ ಕೆ.ಆರ್.ಪುರಂ-ನಾಯಂಡಹಳ್ಳಿವರೆಗಿನ ಸುರಂಗ ರಸ್ತೆ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಿ ಟೆಂಡರ್ ಆಹ್ವಾನಿಸಿದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಣ ಪೋಲು ಮಾಡುವುದು ಸರಿಯಲ್ಲ. ಈ ಯೋಜನೆ ಕಾರ್ಯ ಸಾಧುವಲ್ಲ ಎಂದಿದ್ದಾರೆ.
18 ಕಿಲೋ ಮೀಟರ್ ಉದ್ದದ ಹೆಬ್ಬಾಳ ಎಸ್ಟಿಮ್ ಮಾಲ್- ಸಿಲ್‌ಬೋರ್ಡ್ ಜಂಕ್ಷನ್‌ವರೆಗೆ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಸರ್ಕಾರ ಅನುಮೋದಿಸಿದೆ. ಈ ಯೋಜನೆಗೆ ವಿವಿಧ ಬ್ಯಾಂಕ್‌ಗಳು 19000 ಕೋಟಿ ರೂಪಾಯಿ ಸಾಲ ನೀಡಲು ಮುಂದೆ ಬಂದಿವೆ.
ಇದೇ ರೀತಿ ನಮ್ಮ ಮೆಟ್ರೋ ನೇರಳೆ ಮಾರ್ಗ ಇರುವ ಕೆ.ಆರ್.ಪುರಂ-ನಾಯಂಡಹಳ್ಳಿವರೆಗೆ ಸುರಂಗ ರಸ್ತೆ ಯೋಜನೆಗೆ ಸರ್ಕಾರ ಕೈ ಹಾಕಿದೆ. ಇದು ಸರಿಯಲ್ಲ ಎಂದು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.











Click it and Unblock the Notifications