ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ?
ಬೆಂಗಳೂರು, ಮೇ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿ ಮಾಡುವ ಜನರಿಗೆ ಶೇ 5ರಷ್ಟು ರಿಯಾಯಿತಿಯನ್ನು ನೀಡಿದೆ. ಮೇ 31ರ ತನಕ ಆಸ್ತಿ ತೆರಿಗೆ ಪಾವತಿ ಮಾಡುವವರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.
Recommended Video
ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಜನರ ಸಂಚಾರಕ್ಕೆ ಹಲವಾರು ನಿರ್ಬಂಧಗಳನ್ನು ಹಾಕಲಾಗಿದೆ. ಆದ್ದರಿಂದ, ಜನರು ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಲು ಬಿಬಿಎಂಪಿ ಅವಕಾಶ ನೀಡಿದೆ.
2020-21ನೇ ಸಾಲಿನ ಆಸ್ತಿ ತೆರಿಗೆಯನ್ನು ಮೇ 31ರೊಳಗೆ ಸಂಪೂರ್ಣವಾಗಿ ಪಾವತಿ ಮಾಡಿ ಶೇ 5ರಷ್ಟು ರಿಯಾಯಿತಿ ಪಡೆಯಿರಿ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ತಿ ತೆರಿಗೆಯನ್ನು ಸಕಾಲದಲ್ಲಿ ಪಾವತಿ ಮಾಡಿ, ಬೆಂಗಳೂರು ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಬಿಬಿಎಂಪಿ ಜನರಲ್ಲಿ ಮನವಿ ಮಾಡಿದೆ.
ಆಸ್ತಿ ತೆರಿಗೆ ಪಾವತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಆಸ್ತಿ ತೆರಿಗೆ ಪಾವತಿ ಬಗ್ಗೆ ಯಾವುದೇ ಗೊಂದಲಗಳು ಇದ್ದರೂ 080-22660000 ಸಹಾಯವಾಣಿಗೆ ಜನರು ಕರೆ ಮಾಡಬಹುದಾಗಿದೆ.

ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ?
2020-21ನೇ ಸಾಲಿನ ಆರ್ಥಿಕ ವರ್ಷವು ದಿನಾಂಕ 1/4/2020 ರಿಂದ ಆರಂಭಗೊಂಡಿದ್ದು, ಆಸ್ತಿ ತೆರಿಗೆಯನ್ನು ಆನ್‌ಲೈನ್ ಅಥವ ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಚಲನ್ ಪಡೆದು ಪಾವತಿ ಮಾಡಬಹುದಾಗಿದೆ. ಆನ್‌ಲೈನ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿ ಮಾಡಲು bbmptax.karnataka.gov.in ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಯಾವುದೇ ಶುಲ್ಕ ವಿಧಿಸುವುದಿಲ್ಲ
ಡೆಬಿಟ್ ಕಾರ್ಡ್ ಮತ್ತು ಯುಪಿಐ ಪಾವತಿಗಳ ಮೂಲಕ ಆನ್‌ಲೈನ್‌ನಲ್ಲಿ ಆಸ್ತಿ ತೆರಿಗೆ ಪಾವತಿಸುವ ತೆರಿಗೆದಾರರಿಗೆ ಯಾವುದೇ ಅಧಿಕ ಶುಲ್ಕವನ್ನು ವಿಧಿಸುವುದಿಲ್ಲ.
2020-21ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು 31/5/2020ರೊಳಗೆ ಪಾವತಿಸಿದಲ್ಲಿ ಶೇ 5 ರಷ್ಟು ರಿಯಾಯಿತಿ ಪಡೆಯಬಹುದಾಗಿದೆ.

ಯಾವ-ಯಾವ ಬ್ಯಾಂಕ್ ಮೂಲಕ ಪಾವತಿ?
ಆಸ್ತಿ ತೆರಿಗೆಯನ್ನು ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳ ಆಯ್ದ ಶಾಖೆಗಳಲ್ಲಿ ಪಾವತಿಸಬಹುದಾಗಿದೆ. (ಆಯ್ದ ಬ್ಯಾಂಕ್ ಶಾಖೆಗಳ ವಿವರಗಳನ್ನು ಪಾಲಿಕೆಯ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ).

ಸ್ವಯಂ ಘೋಷಣೆ ಆಸ್ತಿ ತೆರಿಗೆ
ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿ ಅಡಿಯಲ್ಲಿ ಇದುವರೆಗೂ ಆಸ್ತಿ ತೆರಿಗೆ ಪಾವತಿಸದೇ ಇರುವ ತೆರಿಗೆದಾರರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಬಿಬಿಬಿಎಂಪಿ ವೆಬ್ ಸೈಟ್‌ನಲ್ಲಿ ಸಹಾಯಕ ಕಂದಾಯ ಅಧಿಕಾರಿಗಳ ವಿವರ ಮತ್ತು ದೂರವಾಣಿ ಸಂಖ್ಯೆಯನ್ನು ಪ್ರಕಟಿಸಲಾಗಿದೆ.












Click it and Unblock the Notifications