ಕೊಲೆ ಬಳಿಕ ಪಾರ್ಲರ್‌ನಲ್ಲಿ ಪವಿತ್ರಾ ಗೌಡ ಫುಲ್ ರಿಲ್ಯಾಕ್ಸ್: ಮೆಡಿಕ್ಯೂರ್ ಮಾಡಿಸಿಕೊಂಡಿದ್ದೇಕೆ?
ಬೆಂಗಳೂರು, ಜೂನ್ 12: ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪ್ರಕರಣ ಸಂಬಂಧ ಈಗಾಗಲೇ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ಬಗ್ಗೆ ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ.
ರೇಣುಕಾಸ್ವಾಮಿ ನಾಪತ್ತೆಯಾದ ದಿನದಿಂದ ಪ್ರಕರಣ ಬೆಳಕಿಗೆ ಬಂದು ಆರೋಪಿಗಳ ಬಂಧನ ತನಕ ಆರೋಪಿಗಳು ಎಲ್ಲಿ ಹೋಗಿದ್ದರು, ಏನು ಮಾಡಿದ್ದರು ಎನ್ನುವ ಎಲ್ಲಾ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಜೀವ ಹೋದ ನಂತರ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಸಲೂನ್‌ಗೆ ಹೋಗಿ ರಿಲ್ಯಾಕ್ಸ್ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಶನಿವಾರ ಸಂಜೆ ಅಥವಾ ಮಧ್ಯರಾತ್ರಿ ನಡುವಿನ ಸಮಯದಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿದೆ ಎನ್ನಲಾಗುತ್ತಿದ್ದು, ಭಾನುವಾರ ರಾಜಕಾಲುವೆ ಬಳಿ ಶವ ಪತ್ತೆಯಾಗಿತ್ತು. ಅತ್ತ ಪೊಲೀಸರು ರೇಣುಕಾಸ್ವಾಮಿ ಮೃತದೇಹದ ಬಗ್ಗೆ ತನಿಖೆ ಆರಂಭಿಸಿದ್ದರೆ, ಇತ್ತ ಕೋರಮಂಗದಲ್ಲಿರುವ ಸಲೂನ್‌ಗೆ ಭೇಟಿ ನೀಡಿದ್ದ ಪವಿತ್ರಾ ಗೌಡ ಪೆಡಿಕ್ಯೂರ್, ಮೆಡಿಕ್ಯೂರ್ ಅಂತಾ ಸೋಮವಾರ ಮಧ್ಯಾಹ್ನ 2 ರಿಂದ 3 ಗಂಟೆಗಳ ಕಾಲ ಸಲೂನ್‌ನಲ್ಲೇ ರಿಲ್ಯಾಕ್ಸ್ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಮಂಗಳವಾರ ಪವಿತ್ರಾ ಗೌಡ ಬಂಧನವಾಗಿದ್ದು, ಪ್ರಕರಣದ ಎ1 ಆರೋಪಿಯಾಗಿದ್ದಾರೆ. ಪ್ರಕರಣ ಸಂಬಂಧ ದರ್ಶನ್ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳು ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿದ್ದು, ಕೇಸ್‌ನ ಎ-1 ಆರೋಪಿ ಪವಿತ್ರ ಗೌಡ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದಾರೆ. ಇದೀಗ ಪೊಲೀಸರ ಕಸ್ಟಡಿಯಲ್ಲಿರುವ ಪವಿತ್ರಾ ಗೌಡಗೆ ಪಶ್ಚಾತ್ತಾಪ ಕಾಡುತ್ತಿದೆಯಂತೆ.

ಪವಿತ್ರಾ ಗೌಡಗೆ ಪಶ್ಚಾತ್ತಾಪ
ಪೊಲೀಸರ ವಿಚಾರಣೆ ವೇಳೆ ಪವಿತ್ರಾ ಗೌಡ, 'ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ದರ್ಶನ್ ಹೇಳಿ ತಪ್ಪು ಮಾಡಿದೆ ಎಂದು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಕೊಲೆಯಾದ ರೇಣುಕಾಸ್ವಾಮಿ ನನಗೆ ಕಳುಹಿಸುತ್ತಿದ್ದ ಮೆಸೇಜ್‌ಗಳ ಬಗ್ಗೆ ದರ್ಶನ್‌ಗೆ ಹೇಳಿ ತಪ್ಪು ಮಾಡಿದೆ. ಅಶ್ಲೀಲ ಮೆಸೇಜ್ ತೋರಿಸಿ, ಹೇಳಿದ್ದಕ್ಕೆ ಇಷ್ಟೆಲ್ಲಾ ಆಯ್ತು' ಎಂದು ಹೇಳಿದ್ದಾರೆ ಎನ್ನಲಾಗಿದೆ.
'ನಾನೇ ಈ ಬಗ್ಗೆ ಪೊಲೀಸರಿಗೆ ದೂರು ಕೊಡಬಹುದಿತ್ತು. ಅಶ್ಲೀಲ ಮೆಸೇಜ್ ಬಗ್ಗೆ ದೂರು ಕೊಟ್ಟಿದ್ದರೆ ಕಾನೂನು ಕ್ರಮ ಆಗುತ್ತಿತ್ತು. ಅದನ್ನು ಬಿಟ್ಟು ಪ್ರತಿಯೊಂದು ಮೆಸೇಜ್ ತೋರಿಸಿ ಹೇಳಿದ್ದು ತಪ್ಪಾಯಿತು. ಅಶ್ಲೀಲ ಮೆಸೇಜ್‌ಗಳನ್ನು ಅವರಿಗೆ ತೋರಿಸಿ ಹೇಳಬಾರದಿತ್ತು. ಇದು ಕೊಲೆಯಾಗುವ ಹಂತಕ್ಕೆ ಹೋಗುತ್ತದೆ ಅಂತಾ ಅಂದುಕೊಂಡಿರಲಿಲ್ಲ' ಎಂದು ಪೊಲೀಸರ ಮುಂದೆ ನಟಿ ಪವಿತ್ರ ಗೌಡ ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ.












Click it and Unblock the Notifications