ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕನಿಗೆ ನೀಡಿದ ವಡಾದಲ್ಲಿ ತುಕ್ಕು ಹಿಡಿದ ಬೋಲ್ಟ್ ಪತ್ತೆ
ಬೆಂಗಳೂರು: ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಪ್ರೀಮಿಯಂ ರೈಲುಗಳಲ್ಲಿ ಒಂದಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮತ್ತೊಮ್ಮೆ ಆಹಾರದ ಶುಚಿತ್ವದ ಬಗ್ಗೆ ಗಂಭೀರ ಪ್ರಶ್ನೆ ಎದ್ದಿದೆ. ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ವಡಾದಲ್ಲಿ ದೊಡ್ಡ ಗಾತ್ರದ ತುಕ್ಕು ಹಿಡಿದ ಕಬ್ಬಿಣದ ಬೋಲ್ಟ್ ಪತ್ತೆಯಾಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಂದೇ ಭಾರತ್ ಆಹಾರದ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ದೂರಿಗೆ ತಕ್ಷಣ ಸ್ಪಂದಿಸಿರುವ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ, ಸಂಬಂಧಪಟ್ಟ ಕ್ಯಾಟರಿಂಗ್ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ಅರ್ಧ ತಿಂದ ವಡಾದಲ್ಲಿ ಕಬ್ಬಿಣದ ಬೋಲ್ಟ್: ಪ್ರಯಾಣಿಕನ ಆಕ್ರೋಶ
ಬೆಂಗಳೂರು ಬೆಳಗಾವಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಮರ್ಥ್ ಕೊಡಿಯಾಲ್ ಎಂಬುವವರು ತಮಗಾದಈ ಕಹಿ ಅನುಭವವನ್ನ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ರೈಲಿನಲ್ಲಿ ನೀಡಲಾಗಿದ್ದ ಉಪಾಹಾರದ ತಟ್ಟೆಯಲ್ಲಿ ಅರ್ಧ ತಿಂದ ವಡಾ ಹಾಗೂ ಅದರ ಪಕ್ಕದಲ್ಲೇ ತುಕ್ಕು ಹಿಡಿದ ದೊಡ್ಡ ಬೋಲ್ಟ್ ಇರುವ ಫೋಟೋ ಮತ್ತು ವಿಡಿಯೋವನ್ನ ಅವರು ಪೋಸ್ಟ್ ಮಾಡಿದ್ದಾರೆ.
"ಇಂದು ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುವಾಗ ವಂದೇ ಭಾರತ್ ರೈಲಿನ ಊಟದಲ್ಲಿ ನೀಡಿದ ವಡಾದಲ್ಲಿ ದೊಡ್ಡ ಬೋಲ್ಟ್ ಪತ್ತೆಯಾಗಿದೆ. ಇದು ಆಹಾರದ ಗುಣಮಟ್ಟದಲ್ಲಿನ ಭಾರಿ ಲೋಪವಾಗಿದೆ" ಎಂದು ಸಮರ್ಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ನಿರ್ಲಕ್ಷ್ಯದ ಕುರಿತು ತಕ್ಷಣ ಗಮನ ಹರಿಸುವಂತೆ ಅವರು ಭಾರತೀಯ ರೈಲ್ವೆ ಹಾಗೂ ಐಆರ್‌ಸಿಟಿಸಿಯನ್ನು ಒತ್ತಾಯಿಸಿದ್ದಾರೆ.
ಕ್ಯಾಟರಿಂಗ್ ಸಂಸ್ಥೆ ವಿರುದ್ಧ ಐಆರ್‌ಸಿಟಿಸಿ ಕ್ರಮ: ಅಡುಗೆಮನೆ ತಪಾಸಣೆಗೆ ಸೂಚನೆ!
ಪ್ರಯಾಣಿಕನ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ, ತಕ್ಷಣವೇ ಕ್ರಮದ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಿದೆ. "ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಈ ಘಟನೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದ್ದು, ಸಂಬಂಧಪಟ್ಟ ಕ್ಯಾಟರಿಂಗ್ ಸಂಸ್ಥೆ ವಿರುದ್ಧ ಕಠಿಣ ದಂಡನಾತ್ಮಕ ಕ್ರಮ ಕೈಗೊಳ್ಳಲಾಗಿದೆ" ಎಂದು ಐಆರ್‌ಸಿಟಿಸಿ ಸ್ಪಷ್ಟಪಡಿಸಿದೆ.
ಇದರೊಂದಿಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಅಡುಗೆಮನೆ ಘಟಕದ ಸಿಬ್ಬಂದಿಗೆ ನಿಗದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನ (SOP) ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಅಲ್ಲದೆ, ಆಹಾರ ತಯಾರಿಕೆ ಆರಂಭಿಸುವ ಮುನ್ನ ಅಡುಗೆಮನೆಯ ಸಂಪೂರ್ಣ ತಪಾಸಣೆ ನಡೆಸಿ, ಎಲ್ಲಾ ಉಪಕರಣಗಳನ್ನು ಸರಿಯಾಗಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
ಮತ್ತೆ ಮುನ್ನೆಲೆಗೆ ಬಂದ ರೈಲು ಆಹಾರ ಸುರಕ್ಷತೆ: ಪ್ರಯಾಣಿಕರ ಆತಂಕವೇನು?
ವಂದೇ ಭಾರತ್‌ನಂತಹ ಪ್ರೀಮಿಯಂ ರೈಲುಗಳಲ್ಲಿ ಪ್ರಯಾಣಿಕರು ದುಬಾರಿ ಟಿಕೆಟ್ ದರದ ಜೊತೆಗೆ ಆಹಾರಕ್ಕಾಗಿಯೂ ಹೆಚ್ಚುವರಿ ಶುಲ್ಕ ಪಾವತಿಸುತ್ತಾರೆ. ಇಂತಹ ರೈಲುಗಳಲ್ಲಿ ನೀಡುವ ಆಹಾರದಲ್ಲಿ ತುಕ್ಕು ಹಿಡಿದ ಲೋಹದ ವಸ್ತುಗಳು ಪತ್ತೆಯಾಗುವುದು ರೈಲು ಆಹಾರ ಸುರಕ್ಷತೆಯ ಮೇಲಿನ ನಂಬಿಕೆಯನ್ನ ಕಡಿಮೆ ಮಾಡುತ್ತದೆ.
A large bolt found in Vada in the Vande Bharath meal while travelling from Bengaluru to Belagavi today. This is a huge lapse in food quality. Please look into this matter@RailMinIndia @RailwaySeva @RailMadad @IRCTCofficial @railcomplaint #IndianRailways #VandeBharat https://t.co/VQxoUhtXIv
— samarth kodial (@SamKodial) November 27, 2026
ಒಂದು ವೇಳೆ ಪ್ರಯಾಣಿಕರು ಗಮನಿಸದೆ ಅದನ್ನ ಜಗಿದಿದ್ದರೆ ಹಲ್ಲುಗಳಿಗೆ ಹಾನಿಯಾಗುವ ಅಥವಾ ಗಂಟಲಿನಲ್ಲಿ ಸಿಲುಕಿ ಪ್ರಾಣಾಪಾಯ ಸಂಭವಿಸುವ ಸಾಧ್ಯತೆಯೂ ಇತ್ತು. ಹೀಗಾಗಿ, ಕೇವಲ ದಂಡ ವಿಧಿಸುವುದಷ್ಟೇ ಅಲ್ಲದೆ, ಕ್ಯಾಟರಿಂಗ್ ಘಟಕಗಳಲ್ಲಿ ನಿರಂತರ ಹಾಗೂ ಅನಿರೀಕ್ಷಿತ ತಪಾಸಣೆ ನಡೆಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.




Click it and Unblock the Notifications
