ಪಾರ್ಕಿಂಗ್ ಶುಲ್ಕ ಹೆಚ್ಚಳದ ಸುಳಿವು ಕೊಟ್ಟ ಬಿಬಿಎಂಪಿ
ಬೆಂಗಳೂರು, ಸೆ.18 : ಮಹಾನಗರ ಬೆಂಗಳೂರಿನಗೆ ನೂತನ ಸಾರಥಿ ಆಗಮಿಸುತ್ತಿದ್ದಂತೆ ಪಾರ್ಕಿಂಗ್ ಶುಲ್ಕ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ. ಈ ಕುರಿತ ಅಂತಿಮ ನಿರ್ಧಾರ ಸೆ.28ರ ಪಾಲಿಕೆ ಸಾಮಾನ್ಯ ಸಭೆಯ ನಂತರ ಹೊರಬೀಳುವ ಸಾಧ್ಯತೆ ಇದೆ.
ಬಿಬಿಎಂಪಿ ನಗರ ಯೋಜನಾ ನಿರ್ದೇಶನಾಲಯ ನೀಡಿರುವ ವರದಿಯನ್ನು ಜಾರಿಗೆ ತರುವ ಮೂಲಕ ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಿಸುವ ಕುರಿತು ಚಿಂತನೆ ನಡೆಸಿದೆ. ಪಾರ್ಕಿಂಗ್ ಶುಲ್ಕದ ಮೂಲಕವೇ ಪಾಲಿಕೆಗೆ ಅಧಿಕ ಬಂಡವಾಳ ತರಲು ಮುಂದಾಗಿದೆ.

ನಿರ್ದೇಶನಾಲಯದ ವರದಿಯಂತೆ ಬೆಂಗಳೂರಿನ ಪಾರ್ಕಿಂಗ್ ಪ್ರದೇಶಗಳನ್ನು ಎ,ಬಿ ಮತ್ತು ಸಿ ಎಂದು ವಿಂಗಡಿಸಲಾಗುತ್ತದೆ. ಎ ಮತ್ತು ಬಿ ಪಟ್ಟಿಯಲ್ಲಿರುವ ಸ್ಥಳಗಳಲ್ಲಿ ಪಾರ್ಕಿಂಗ್ ಹೆಚ್ಚು ಏರಿಕೆಯಾದರೆ, ಸಿ ಪಟ್ಟಿಯ ಸ್ಥಳದಲ್ಲಿ ಕಡಿಮೆ ಇರುತ್ತದೆ.
ಎ ಶ್ರೇಣಿಯಲ್ಲಿ ಕಾರುಗಳಿಗೆ ಗಂಟೆಗೆ 30 ರೂ. ಬೈಕ್ ಗಳಿಗೆ 15 ರೂ. ನಿಗದಿಗೊಳಿಸಲಾಗಿದೆ. ಬಿ ಶ್ರೇಣಿಯಲ್ಲಿ ಕಾರುಗಳಿಗೆ 20 ಮತ್ತು ಬೈಕ್ ಗಳಿಗೆ 10ರೂ. ದರ ನಿಗದಿ ಮಾಡಲಾಗಿದೆ. ಸಿ ಶ್ರೇಣಿಯಲ್ಲಿ ಕಾರುಗಳಿಗೆ 15 ಮತ್ತು ಬೈಕ್ ಗಳಿಗೆ 5 ರೂ.ದರ ವಿಧಿಸಲಾಗುತ್ತದೆ.
ಕೇವಲ ಅರ್ಧಗಂಟೆ ವಾಹನ ಪಾರ್ಕ್ ಮಾಡಿದರೆ, ನಿಗದಿಗೊಳಿಸಿದ ದರದ ಅರ್ಧದಷ್ಟನ್ನು ಕಟ್ಟಬೇಕು ಎಂದು ನಿರ್ದೇಶನಾಲಯ ವರದಿಯಲ್ಲಿ ತಿಳಿಸಿದೆ. ಆದರೆ, ಸೈಕಲ್ ಗಳಿಗೆ ಪಾರ್ಕಿಂಗ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಸೆ.28ರಂದು ನಡೆಯುವ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಗರ ಯೋಜನಾ ನಿರ್ದೇಶನಾಲಯದ ವರದಿ ಕುರಿತು ಚರ್ಚಿಸಿ ಪಾರ್ಕಿಂಗ್ ಶುಲ್ಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಿ ರಸ್ತೆಗೂ ಡಿಜಿಟಲ್ ಫಲಕಗಳನ್ನು ಅಳವಡಿಸಿ, ಪಾರ್ಕಿಂಗ್ ಶುಲ್ಕ, ಪಾರ್ಕಿಂಗ್ ಸ್ಥಳವಕಾಶ ಕುರಿತು ವಾಹನ ಸವಾರರಿಗೆ ಮಾಹಿತಿ ನೀಡಲಾಗುವುದು. ಬೆಳೆಯುತ್ತಿರುವ ವಾಹನ ಸಂಖ್ಯೆಗೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ಹೆಚ್ಚಿಸಲಿದ್ದೇವೆ ಎಂದು ಮೇಯರ್ ಹೇಳಿದ್ದಾರೆ.












Click it and Unblock the Notifications