ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಜಯನಗರದ ಹೆಬ್ಬಾಗಿಲು ನಿರ್ಮಾಣ
ಬೆಂಗಳೂರು, ಜುಲೈ 06 : ಉದ್ಯಾನ ನಗರಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿಜಯನಗರದ ಹೆಬ್ಬಾಗಿಲು ನಿರ್ಮಾಣವಾಗಲಿದೆ. ಹಲವು ಕನ್ನಡ ಸಂಘಟನೆಗಳು ಹೆಬ್ಬಾಗಿಲು ನಿರ್ಮಿಸುವಂತೆ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ ಅವರು ಇಂದು 'ವಿಜಯನಗರದ ಹೆಬ್ಬಾಗಿಲು' ನಿರ್ಮಾಣ ಮಾಡಲು ಶಂಕುಸ್ಥಾಪನೆ ಮಾಡಿದರು. ಬಿಬಿಎಂಪಿ ಮೇಯರ್ ಸಂಪತ್ ರಾಜ್, ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಟಾಳ್ ನಾಗರಾಜ್ ಅವರು ಹಲವು ಬಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಹೆಬ್ಬಾಗಿಲು ನಿರ್ಮಿಸುವಂತೆ ಮನವಿ ಮಾಡಿದ್ದರು. ವಾಟಾಳ್ ನಾಗರಾಜ್ ಇದೇ ಸ್ಥಳದಲ್ಲಿ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾರೆ.

'ಈ ವೃತ್ತ ಕನ್ನಡ ಪರ ಹೋರಾಟ, ಚಳವಳಿಗೆಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ರಾಜ್ಯದ ಇತಿಹಾಸ, ಸಂಸ್ಕೃತಿ ಪರಂಪರೆ ಸಾರುವ ವಿಜಯನಗರದ ಹೆಬ್ಬಾಗಿಲನ್ನು ಕಾಯಂ ಆಗಿ ನಿರ್ಮಿಸುತ್ತೇವೆ' ಎಂದು ಬಿಬಿಎಂಪಿ ಮೇಯರ್ ಸಂಪತ್ ರಾಕ್ ಹೇಳಿದರು.
'1963ರಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ತಾತ್ಕಾಲಿಕವಾಗಿ ವಿಜಯನಗರದ ಹೆಬ್ಬಾಗಿಲನ್ನು ನಿರ್ಮಿಸಲಾಗಿತ್ತು. ಇಲ್ಲಿ ಕನ್ನಡ, ನೆಲ, ಭಾಷೆ, ಜಲ ಹೀಗೆ ವಿವಿಧ ಹೋರಾಟಗಳು ನಡೆದಿವೆ. ಆದ್ದರಿಂದ ಕಾಯಂ ಆಗಿ ಹೆಬ್ಬಾಗಿಲು ನಿರ್ಮಿಸಲು ಮನವಿ ಮಾಡಲಾಗಿತ್ತು' ಎಂದು ವಾಟಾಳ್ ನಾಗರಾಜ್ ಹೇಳಿದರು.

ಡಾ.ಜಿ.ಪರಮೇಶ್ವರ, ವಾಟಾಳ್ ನಾಗರಾಜ್ ಮತ್ತು ಮೇಯರ್ ಸಂಪತ್ ರಾಜ್ ಇಂದು ವಿಜಯನಗರದ ಹೆಬ್ಬಾಗಿಲು ನಿರ್ಮಾಣದ ವಿನ್ಯಾಸವನ್ನು ವೀಕ್ಷಣೆ ಮಾಡಿದರು. ಅಕ್ಟೋಬರ್ ಅಂತ್ಯದ ವೇಳೆಗೆ ಹೆಬ್ಬಾಗಿಲು ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.
ನಮ್ಮ ಬೆಂಗಳೂರಿನ ಅಂದವನ್ನು ಇನ್ನಷ್ಟು ಹೆಚ್ಚಿಸಲು ಕಾವೇರಿ ಭವನದ ಸಮೀಪ ಬೃಹದಾಕಾರದಲ್ಲಿ ವಿಜಯನಗರ ಹೆಬ್ಬಾಗಿಲು ನಿರ್ಮಾಣಗೊಳ್ಳುತ್ತಿದೆ. ಇದರ ಶಂಕು ಸ್ಥಾಪನೆಯನ್ನು ಇಂದು ನೆರವೇರಿಸಿದೆ. ಇನ್ನು ಆರು ತಿಂಗಳೊಳಗಾಗಿ ವಿಜಯನಗರ ಹೆಬ್ಬಾಗಿಲಿನ ಕೆಲಸ ಪೂರ್ಣಗೊಳ್ಳಲಿದೆ. pic.twitter.com/nwyzPT2yiV
— Dr. G Parameshwara (@DrParameshwara) July 6, 2018












Click it and Unblock the Notifications