ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಗೆ ಸಿಎಂ ಸಿದ್ದರಾಮಯ್ಯ ಬರಬಾರದು: ಸಂಘಟನೆಗಳ ಎಚ್ಚರಿಕೆ
ಬೆಂಗಳೂರು, ಜೂನ್ 28: ಬಕ್ರೀದ್ ಆಚರಣೆಗೆ ಮುನ್ನವೇ ಈದ್ಗಾ ಮೈದಾನ ವಿವಾದ ಮುನ್ನಲೆಗೆ ಬಂದಿದೆ. ನಗರದ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬರುತ್ತಿರುವುದಕ್ಕೆ ಸರ್ವ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿವೆ.
ಈವರೆಗೂ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ, ಗಣೇಶ ಹಬ್ಬ ಆಚರಣೆಗೆ ಅನುಮತಿ ಕೊಟ್ಟಿಲ್ಲ, ಆದರೆ ಜೂನ್ 29ರಂದು ನಡೆಯಲಿರುವ ಬಕ್ರೀದ್ ಹಬ್ಬದ ಆಚರಣೆಯಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಬರುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ಈದ್ಗಾ ಮೈದಾನಕ್ಕೆ ಬರಲು ಅವಕಾಶ ನೀಡಬಾರದು ಎಂದು ಸರ್ವ ಸಂಘಟನೆಗಳ ಒಕ್ಕೂಟ ನಗರ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿ, ಮನವಿ ಮಾಡಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯ ಬಕ್ರೀದ್ ಹಬ್ಬದ ಆಚರಣೆಗೆ ಇಲ್ಲಿಗೆ ಬಂದರೆ ಪ್ರತಿಭಟನೆ ನಡೆಸುವುದಾಗಿ ಸರ್ವ ಸಂಘಟನೆಗಳ ಒಕ್ಕೂಟ ಎಚ್ಚರಿಕೆಯನ್ನೂ ನೀಡಿದೆ.
ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರ ಆಹ್ವಾನದ ಮೇರೆಗೆ ಸಿಎಂ ಸಿದ್ದರಾಮಯ್ಯ ಬಕ್ರೀದ್ ಆಚರಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಇದು ವಿವಾದಿತ ಸ್ಥಳವಾಗಿರುವುದರಿಂದ ಸಿಎಂ ಈ ಆಚರಣೆಯಲ್ಲಿ ಭಾಗಿಯಾಗಬಾರದು ಎನ್ನುವುದು ಸಂಘಟನೆಗಳ ವಾದವಾಗಿದೆ.
ತಪ್ಪು ಸಂದೇಶ ನೀಡಿದಂತಾಗುತ್ತದೆ
"ಮೊದಲು ಇದನ್ನು ಈದ್ಗಾ ಮೈದಾನ ಎಂದು ಕರೆಯಲಾಗುತ್ತಿತ್ತು, ಈಗ ಆಟದ ಮೈದಾನ ಎಂದು ಕರೆಯಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಇಲ್ಲಿಗೆ ಬಕ್ರೀದ್ ಹಬ್ಬದ ಆಚರಣೆಗೆ ಬರುತ್ತಿದ್ದಾರೆ. ಇದೊಂದು ವಿವಾದಿತ ಸ್ಥಳವಾಗಿದ್ದು, ಸಿಎಂ ಯಾವುದೇ ಕಾರಣಕ್ಕೂ ಇಲ್ಲಿಗೆ ಬಂದು ಆಚರಣೆಯಲ್ಲಿ ಪಾಲ್ಗೊಳ್ಳಬಾರದು, ಅವರು ಏನಾದರು ಬಂದರೆ ಒಂದು ಸಮುದಾಯಕ್ಕೆ ಮಾತ್ರ ಬೆಂಬಲ ಕೊಟ್ಟಂತಾಗುತ್ತದೆ. ಅವರು ಬಂದರೆ ಅವರ ಜಾತ್ಯಾತೀತ ನಾಯಕ ಎನ್ನುವ ಹೆಸರಿಗೆ ಕಪ್ಪುಚುಕ್ಕೆಯಾಗುತ್ತದೆ." ಎಂದು ಸರ್ವ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಶಿವಕುಮಾರ್ ನಾಯ್ಕ ಒತ್ತಾಯಿಸಿದ್ದಾರೆ.
ಬಕ್ರೀದ್ ಆಚರಣೆಗೆ ಸಕಲ ಸಿದ್ಧತೆ
ಬಕ್ರೀದ್ ಹಬ್ಬದ ಆಚರಣೆ ಹಿನ್ನಲೆಯಲ್ಲಿ ಈದ್ಗಾ ಮೈದಾನವನ್ನು ಸ್ವಚ್ಛಗೊಳಿಸಲಾಗುತ್ತಿದೆ. ನೂರಾರು ಮುಸ್ಲಿಂ ಯುವಕರು ಮೈದಾನದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಹಬ್ಬದ ದಿನ ಇಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.
ಬಕ್ರೀದ್ ಹಬ್ಬ ಆಚರಣೆ ಮಾಡಲು ನಾವು ವಿರೋಧ ಮಾಡುತ್ತಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಈದ್ಗಾ ಮೈದಾನದಲ್ಲಿ ಬಕ್ರೀದ್ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ವಿರೋಧವಿದೆ ಎಂದು ಸರ್ವ ಸಂಘಟನೆಗಳ ಒಕ್ಕೂಟ ಸ್ಪಷ್ಟವಾಗಿ ಹೇಳಿದೆ. ಬಿಬಿಎಂಪಿ ಇಲಾಖೆ ಅಧಿಕಾರಿಗಳಿಗೂ ಪತ್ರ ಬರೆಯಲೂ ಒಕ್ಕೂಟ ನಿರ್ಧರಿಸಿದೆ.












Click it and Unblock the Notifications