ಮತದಾನದ ದಿನ ಉಚಿತ ಪ್ರಯಾಣ ಘೋಷಣೆ ಮಾಡಿದ ಓಲಾ
ಬೆಂಗಳೂರು, ಏಪ್ರಿಲ್ 03 : ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಓಲಾ ಉಚಿತ ಪ್ರಯಾಣವನ್ನು ಘೋಷಣೆ ಮಾಡಿದೆ. ವಿಕಲಚೇತನರು ಯಾವುದೇ ಶುಲ್ಕ ಪಾವತಿ ಮಾಡದೆ ಮತಗಟ್ಟೆಗೆ ತೆರಳಿ, ಮನೆಗೆ ವಾಪಸ್ ಆಗಬಹುದಾಗಿದೆ.
ಬೆಂಗಳೂರು ನಗರದಲ್ಲಿ ಮತದಾನದ ದಿನ ವಿಕಲಚೇತನರಿಗೆ ಉಚಿತ ಪ್ರಯಾಣ ನೀಡುವುದಾಗಿ ಓಲಾ ಹೇಳಿದೆ. ಈ ಕುರಿತು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಬೆಂಗಳೂರಿನಲ್ಲಿ ಏಪ್ರಿಲ್ 18ರಂದು ಮತದಾನ ನಡೆಯಲಿದೆ.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. 'ಓಲಾ ಉಚಿತ ಪ್ರಯಾಣದ ಪ್ರಸ್ತಾವನೆ ಸಲ್ಲಿಸಿದೆ. ವಿಕಲಚೇತನರು ಓಲಾಗೆ ಕರೆ ಮಾಡಲು ಕೂಪನ್‌ಗಳನ್ನು ವಿತರಣೆ ಮಾಡಲಾಗುತ್ತದೆ' ಎಂದು ಹೇಳಿದರು.

ಚುನಾವಣಾ ಆಯೋಗವು ಸಹ ವಿಕಲಚೇತನರಿಗೆ ನೆರವಾಗಲು ಮತಗಟ್ಟೆಗಳಲ್ಲಿ ವೀಲ್ ಚೇರ್ ವ್ಯವಸ್ಥೆಯನ್ನು ಮಾಡಿದೆ. ಅಂಗವಿಕಲರು ಬಂದು ತಮ್ಮ ಮತವನ್ನು ಚಲಾವಣೆ ಮಾಡಬೇಕು ಎಂದು ಆಯೋಗ ಮನವಿ ಮಾಡಿದೆ.
ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಮತ್ತು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರಗಳಿವೆ. ಏಪ್ರಿಲ್ 18ರಂದು ಮತದಾನ ನಡೆಯಲಿದ್ದು, ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications