ಕಾಂಗ್ರೆಸ್ ಆಡಳಿತದಲ್ಲಿ ಜಾತಿ ನಿಂದನೆ ವಿರುದ್ಧ ದಲಿತರ ದಿಟ್ಟತನ: ಪರಂ
ಬೆಂಗಳೂರು, ಮೇ 11: ''ಕಾಂಗ್ರೆಸ್ ಆಡಳಿತದಲ್ಲಿ ದಲಿತರು ತಮ್ಮ ವಿರುದ್ಧದ ನಿಂದನೆಗಳ ಬಗ್ಗೆ ಧೈರ್ಯವಾಗಿ ದೂರು ದಾಖಲಿಸಲು ಮುಂದಾಗುತ್ತಿರುವುದರಿಂದಲೇ ಹೆಚ್ಚಿನ ಮಟ್ಟದಲ್ಲಿ ದಲಿತ ವಿರೋಧಿ ದೂರುಗಳು ದಾಖಲಾಗುತ್ತಿವೆ'' ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
2013ರಲ್ಲಿ ಕೊನೆಗೊಂಡ ಬಿಜೆಪಿ ಸರ್ಕಾರದ ಕಾಲದಲ್ಲಿ ದಾಖಲಾಗುತ್ತಿದ್ದ ಜಾತಿ ನಿಂದನೆ ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಾತಿ ನಿಂದನೆ ಪ್ರಕರಣಗಳು ದಾಖಲಾಗುತ್ತಿವೆ ಎಂಬುದನ್ನು ಅಂಕಿ-ಅಂಶಗಳು ಸಾಬೀತುಪಡಿಸಿವೆ.

ಈ ಹಿನ್ನೆಲೆಯಲ್ಲೇ ಪರಮೇಶ್ವರ್, ಕಾಂಗ್ರೆಸ್ ಸರ್ಕಾರದಲ್ಲಿ ದಲಿತರು ನಿರ್ಭಯವಾಗಿ ದೂರು ದಾಖಲಿಸುತ್ತಿದ್ದಾರೆಂದು ಹೇಳಿದ್ದಾರೆ.
ಸಿದ್ದರಾಮಯ್ಯ ಸರ್ಕಾರಕ್ಕೂ ಹಿಂದಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತರಿಂದ ದಾಖಲಾದ ಜಾತಿ ನಿಂದನೆ ಕೇಸುಗಳ ಸಂಖ್ಯೆ 1,531. ಈಗ, ಇವುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕೆಲವಾರು ಅಂಕಿ ಅಂಶಗಳು ಹೇಳುತ್ತಿವೆ.
2012ರಲ್ಲಿ, ಅಂದರೆ, ಬಿಜೆಪಿ ಆಡಳಿತದ ಕೊನೆಯ ವರ್ಷದಲ್ಲಿ 1,531 ದಲಿತರ ಜಾತಿನಿಂದನೆ ಕೇಸುಗಳು ದಾಖಲಾಗಿದ್ದವು. 2013ರಲ್ಲಿ ಅಂದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ವರ್ಷದಲ್ಲಿ 1,758 ದೂರುಗಳು ದಾಖಲಾಗಿವೆ. 2014ರಲ್ಲಿ 1,857 ದೂರುಗಳು ದಾಖಲಾಗಿವೆ. 2015ರಲ್ಲಿ 1,825 ಕೇಸುಗಳು ದಾಖಲಾಗಿವೆ. ಇನ್ನು, ಕಳೆದ ವರ್ಷ 1,765 ಕೇಸುಗಳು ದಾಖಲಾಗಿವೆ.












Click it and Unblock the Notifications