ನಕಲಿ ಜಾತಿ ಪ್ರಮಾಣಪತ್ರ ಪ್ರಶ್ನಿಸಲು ಕಾಲಮಿತಿ ಇಲ್ಲ: ಹೈಕೋರ್ಟ್ ಆದೇಶ
ಬೆಂಗಳೂರು, ಏಪ್ರಿಲ್ 14: ನಕಲಿ ಜಾತಿ ಪ್ರಮಾಣಪತ್ರದಿಂದ ಪಡೆದಿರುವ ಪ್ರಯೋಜನಗಳನ್ನು ಪ್ರಶ್ನಿಸಲು ಯಾವುದೇ ಕಾಲಮಿತಿಯ ಇಲ್ಲ ಇರುವುದಿಲ್ಲ, ಯಾವಾಗ ಬೇಕಾದರೂ ಪ್ರಶ್ನಿಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.
ಹಾಗಾಗಿ ಇನ್ನು ಮುಂದೆ ನಕಲಿ ಕ್ಯಾಸ್ಟ್ ಸರ್ಟಿಫಿಕೇಟ್ ಗಳನ್ನು ಇಂತಿಷ್ಟೇ ಸಮಯದಲ್ಲಿ ಪ್ರಶ್ನಿಸಬೇಕೆಂದು ಹೇಳುವಂತಿಲ್ಲ. ಅದರಿಂದ ಪ್ರಯೋಜನ ಪಡೆದವರ ವಿರುದ್ಧ ಯಾವ ಹಂತದಲ್ಲಾದರೂ ಪ್ರಶ್ನೆ ಮಾಡಿ ಅದನ್ನು ರದ್ದುಗೊಳಿಸಲು ಕೋರಬಹುದಾಗಿದೆ.

ಡಾ.ಗುಡ್ಡದೇವ್ ಗೊಲ್ಲಪ್ಪ ಯಡ್ರಾಮಿ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಪೀಠದಲ್ಲಿ ಆಲಿಸಿದ ನ್ಯಾ. ವಿ.ಶ್ರೀಷಾನಂದ ಅವರಿದ್ದ ಏಕಸದಸ್ಯಪೀಠ ನಕಲಿ ಜಾತಿ ಪ್ರಮಾಣಪತ್ರ ಪಡೆದು ಆಯುಷ್ ವೈದ್ಯಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡು ಸೇವೆ ಸಲ್ಲಿಸುತ್ತಿದ್ದ ವಜಾ ಆದೇಶವನ್ನು ಎತ್ತಿಹಿಡಿದಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ವಿಜಯಪುರದಲ್ಲಿ ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ್ದ ನಮೂನೆಯಲ್ಲಿ ಅರ್ಜಿದಾರರು ತಾನು ಹಿಂದೂ(ಕುರುಬ), ಹಿಂದುಳಿದ ವರ್ಗದಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ. ಆದರೆ ಉದ್ಯೋಗದ ವೇಳೆಗೆ ಅವರು ಹೇಗೆ ಗೂಂಡಾ ಜಾತಿಗೆ ಸೇರಿದವರು ಪರಿಶಿಷ್ಟ ಪಂಗಡದವರು ಎಂದು ಬದಲಾಗಲು ಸಾಧ್ಯ ಎಂದು ಕೇಳಿದೆ.
ಅಲ್ಲದೆ, ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ಅರ್ಜಿದಾರರು ನಿಜವಾಗಿಯೂ ಎಸ್.ಟಿ ವರ್ಗಕ್ಕೆ ಸೇರಿದ್ದರೆ ಅವರು 1975ರಲ್ಲಿ ಕಾಲೇಜಿಗೆ ಸೇರುವಾಗ ಕುರುಬ ಜಾತಿ ಎಂದು ಉಲ್ಲೇಖಿಸುತ್ತಿರಲಿಲ್ಲ. ಹಾಗಾಗಿ ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೊರೆ ಹೋಗಿಲ್ಲ, ತಮ್ಮ ಪರವಾಗಿ ಆದೇಶವನ್ನು ಪಡೆಯಲು ಅವರು ಹಲವು ಸಂಗತಿಗಳನ್ನು ಮುಚ್ಚಿಟ್ಟಿದ್ಸಾರೇಂದು ನ್ಯಾಯಾಲಯ ಹೇಳಿದೆ.
ಜತೆಗೆ ಅವರು ನೇಮಕ ಪ್ರಾಧಿಕಾರದ ಮುಂದೆ ನಕಲಿ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಅದರಿಂದ ಉದ್ಯೋಗ ಪಡೆದು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಹಾಗಾಗಿ ಅವರ ಅರ್ಜಿಯನ್ನು ವಜಾಗೊಳಿಸುತ್ತಿರುವುದಾಗಿ ನ್ಯಾಯುಪೀಠ ಹೇಳಿದೆ.
ಅರ್ಜಿದಾರರು, ಕಲಬುರಗಿ ಜಿಲ್ಲೆಯಲ್ಲಿ ಕುರುಬ ಮತ್ತು ಗೊಂಡಾ ಸಮುದಾಯ ಒಂದೇ ಎಂದು ಕರೆಯಲಾಗುತ್ತಿದೆ. ಎರಡೂ ಒಂದೇ ಅರ್ಥವನ್ನು ನೀಡುತ್ತವೆ. 1993ರಲ್ಲಿ ಎರಡೂ ಒಂದೇ ಸಮುದಾಯಗಳೆಂಬ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. 1997ರಲ್ಲಿ ಸರಕಾರ ಕಲಬುರಗಿ ಜಿಲ್ಲೆಯಲ್ಲಿನ ಗೂಂಡಾ ಸಮುದಾಯವನ್ನು ಎಸ್ ಟಿ ಪಟ್ಟಿಯಲ್ಲಿ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ ಏನು..?
ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಆಯುಷ್ ಇಲಾಖೆ ಆಯುಷ್ ವೈದ್ಯಾಧಿಕಾರಿ ಹುದ್ದೆಗೆ 1995ರ ಏ.9ರಂದು ನೇಮಕಗೊಂಡಿದ್ದರು. ಅದಕ್ಕಾಗಿ ಅವರು ಪರಿಶಿಷ್ಟ ಪಂಗಡ ಸಮುದಾಯದಡಿ ಬರುವ ಗೊಂಡಾ ಜಾತಿಯ ಪ್ರಮಾಣ ಪತ್ರವನ್ನು ಪಡೆದಿದ್ದರು. ಜಾತಿ ಪ್ರಮಾಣ ಪತ್ರದ ಆಧಾರದಲ್ಲಿ ಅವರ ಸೇವೆ ಕಾಯಂ ಆಗಿ ಅವರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು.
ಆದರೆ ಕೃಷ್ಣಮೂರ್ತಿ ನಾಯಕ್ ಮತ್ತು ನಂಜರಾಜು ಅವರು ಅರ್ಜಿದಾರರು ನಕಲಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆಂದು ದೂರು ನೀಡಿದ್ದರು. ಅದನ್ನು ಆಧರಿಸಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಪರಿಶೀಲನೆ ನಡೆಸಿದಾಗ ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆಂದು ಸಾಬೀತಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿದಾರರು ತಮ್ಮ ಜಾತಿ ಪ್ರಮಾಣಪತ್ರ ರದ್ದುಗೊಳಿಸಿರುವ ಆದೇಶ ಅನೂರ್ಜಿತಗೊಳಿಸಬೇಕು ಮತ್ತು ಪುನಃ ಸೇವೆಗೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಕೇಳಿದ್ದರು.











Click it and Unblock the Notifications