ಬೆಂಗಳೂರು: ಅ.12ರಿಂದ ಓಲಾ, ಉಬರ್ ಆಟೋ ಸೇವೆ ಸ್ಥಗಿತ, ಅಕ್ರಮ ರಸ್ತೆಗಿಳಿದರೆ 5000 ದಂಡ
ಬೆಂಗಳೂರು, ಅ.11: ಓಲಾ, ಉಬರ್ ಮತ್ತು ರಾಪಿಡೊ ಸೇವೆಗಳನ್ನು ಅಕ್ಟೋಬರ್ 12 ರ ಬುಧವಾರದಿಂದ ಸ್ಥಗಿತಗೊಳಿಸುವಂತೆ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕರ್ನಾಟಕ ಸಾರಿಗೆ ಇಲಾಖೆಯ ಟಿಎಚ್‌ಎಂ ಕುಮಾರ್ ತಿಳಿಸಿದ್ದಾರೆ.
ಓಲಾ, ಉಬರ್ ಮತ್ತು ರಾಪಿಡೊ ಪ್ರತಿನಿಧಿಗಳ ಜೊತೆಗೆ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಆಯುಕ್ತ ಟಿಎಚ್‌ಎಂ ಕುಮಾರ್, "ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯೊಂದಿಗೆ ಸರ್ಕಾರದಿಂದ ಅನುಮೋದಿತ ದರವನ್ನು ಸಂಗ್ರಹಿಸಲು ಇಲ್ಲಿನ ರೈಡ್ ಅಗ್ರಿಗೇಟರ್‌ಗಳು ಪ್ರಸ್ತಾಪಿಸಿದ್ದಾರೆ. ಅಗ್ರಿಗೇಟರ್‌ಗಳ ಪ್ರಸ್ತಾವನೆಯನ್ನು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗುವುದು" ಎಂದು ಹೇಳಿದರು.
ಸರ್ಕಾರದ ನಿಯಮಗಳ ಪ್ರಕಾರ, ಎರಡು ಕಿಲೋಮೀಟರ್‌ಗಳಿಗೆ ಆಟೋರಿಕ್ಷಾಗಳಿಗೆ 30 ರೂಪಾಯಿ ಮೂಲ ದರವನ್ನು ನಿಗದಿಪಡಿಸಲಾಗಿದೆ, ನಂತರ ಪ್ರತಿ ಕಿಲೋಮೀಟರ್‌ಗೆ ರೂ 15 ಶುಲ್ಕ ವಿಧಿಸಲಾಗುತ್ತದೆ.

ಬುಧವಾರದಿಂದ ಓಲಾ, ಉಬರ್ ಆಟೋ ಸೇವೆಯಿಲ್ಲ!
"ಪ್ರಸ್ತುತ ಅಗ್ರಿಗೇಟರ್ ನಿಯಮಗಳ ಅಡಿಯಲ್ಲಿ (ಕರ್ನಾಟಕ ಆನ್-ಡಿಮಾಂಡ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ (ಕೊಟ್ಟಾರ್), 2016) ತ್ರಿಚಕ್ರ ವಾಹನಗಳನ್ನು ಓಡಿಸಲು ಅನುಮತಿಸಲಾಗುವುದಿಲ್ಲ ಎಂದು ಅವರಿಗೆ ತಿಳಿಸಿದ ನಂತರ ಬುಧವಾರ ಹೊಸ ಅರ್ಜಿಯನ್ನು ಸಲ್ಲಿಸುವುದಾಗಿ ಅಗ್ರಿಗೇಟರ್‌ಗಳು ತಿಳಿಸಿದ್ದಾರೆ" ಎಂದು ಮಾಹಿತಿ ನೀಡಿದರು.
ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಆಟೋರಿಕ್ಷಾಗಳನ್ನು ಓಡಿಸುವುದನ್ನು ನಿಲ್ಲಿಸುವಂತೆ ಇಲಾಖೆಯು ಅಗ್ರಿಗೇಟರ್‌ಗಳಿಗೆ ಸೂಚನೆ ನೀಡಿದೆ.
"ಅನುಕೂಲಕರ ಶುಲ್ಕದ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಾವು ಅವರಿಗೆ ತಿಳಿಸಿದ್ದೇವೆ. ನಾವು ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಸಾರಿಗೆ ಆಯುಕ್ತರು ತಿಳಿಸಿರು.

ಅಕ್ರಮ ಆಟೋ ಓಡಿಸಿದರೆ 5,000 ರೂ ದಂಡ!
ರಾಜ್ಯ ಸರ್ಕಾರವು ಪ್ರಸ್ತುತ ನಿಯಮಗಳನ್ನು ಮಾರ್ಪಡಿಸುವವರೆಗೆ ಅಗ್ರಿಗೇಟರ್‌ಗಳು ಆಟೋರಿಕ್ಷಾಗಳನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಆಯುಕ್ತರು ಹೇಳಿದರು. ಅಕ್ರಮವಾಗಿ ಆಟೋರಿಕ್ಷಾಗಳನ್ನು ಓಡಿಸಿದರೆ ಅವರಿಗೆ ಪ್ರತಿ ವಾಹನಕ್ಕೆ 5,000 ರೂ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
"ಆಟೋರಿಕ್ಷಾ ಸೇವೆಗಳನ್ನು ನಿಲ್ಲಿಸಲು ಇಲಾಖೆಯು ಸೈಬರ್ ವಿಭಾಗಕ್ಕೆ ಪತ್ರ ಬರೆಯುತ್ತದೆ. ಏಕೆಂದರೆ ನಮಗೆ ಪರಿಣಿತಿ ಇಲ್ಲದಿರುವುದರಿಂದ ನಾವು ಅದನ್ನು ನೇರವಾಗಿ ಮಾಡಲು ಸಾಧ್ಯವಿಲ್ಲ. ನಾವು ಓಲಾ ಮತ್ತು ಉಬರ್ (ಟ್ಯಾಕ್ಸಿ ಅಗ್ರಿಗೇಟರ್‌ಗಳು) ಮೇಲೆ ಮಾತ್ರ ಕ್ರಮ ತೆಗೆದುಕೊಳ್ಳುತ್ತೇವೆ. ನಾವು ಪ್ರತಿ ವಾಹನಕ್ಕೆ 5,000 ರೂಪಾಯಿ ದಂಡ ವಿಧಿಸುತ್ತೇವೆ. ನಾವು ಕಂಪನಿಗಳಿಗೆ ದಂಡ ವಿಧಿಸುತ್ತೇವೆ ಆಟೋರಿಕ್ಷಾ ಚಾಲಕರಿಗೆ ದಂಡ ವಿಧಿಸಲಾಗುವುದಿಲ್ಲ," ಎಂದು ಕುಮಾರ್ ಹೇಳಿದರು.

ಆಟೋ ಸೇವೆ ನಿಲ್ಲಿಸುವಂತೆ ಅಗ್ರಿಗೇಟರ್‌ಗಳಿಗೆ ನೋಟಿಸ್
ಆಟೋರಿಕ್ಷಾಗಳ ಕನಿಷ್ಠ ದರ ಏರಿಕೆ ಕುರಿತು ಬೆಂಗಳೂರಿನಲ್ಲಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಕಮಿಷನರ್ ಸೇರಿದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ಮಧ್ಯಾಹ್ನ ಓಲಾ, ಉಬರ್ ಮತ್ತು ರಾಪಿಡೋ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಭೆ ನಡೆಸಿದರು.
ಎರಡು ಕಿಲೋಮೀಟರ್‌ಗಿಂತ ಕಡಿಮೆ ದೂರವಿದ್ದರೂ ಸಹ, ಆಟೊರಿಕ್ಷಾಗಳನ್ನು ನಿರ್ವಹಿಸುವ ಅಗ್ರಿಗೇಟರ್‌ಗಳು ಕನಿಷ್ಠ 100 ರೂಗಳನ್ನು ವಿಧಿಸುತ್ತಿದ್ದಾರೆ ಎಂದು ಆರೋಪಗಳು ಬಂದ ಹಿನ್ನೆಲೆ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಅಹವಾಲು ಮತ್ತು ದೂರುಗಳ ನಂತರ, ಸಾರಿಗೆ ಇಲಾಖೆಯು ರೈಡ್ ಅಗ್ರಿಗೇಟರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಕ್ಷಣವೇ ಆಟೋರಿಕ್ಷಾ ಸೇವೆಗಳನ್ನು ನಿಲ್ಲಿಸುವಂತೆ ಮತ್ತು ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದೆ.

ಕಂಪನಿಗಳಿಂದ ಚಾಲಕರು, ಗ್ರಾಹಕರು ಇಬ್ಬರ ಜೇಬಿಗೆ ಕತ್ತರಿ!
ಆಟೋ ಸೇವೆಗೆ ಅಗ್ರಿಗೇಟರ್(ಮಧ್ಯಸ್ಥಗಾರರು) ಆಗಿರುವ ಓಲಾ ಹಾಗೂ ಉಬರ್ ಸಂಸ್ಥೆಗಳು ವೆಬ್‌ಸೈಟ್ ಹೆಸರಲ್ಲಿ ಗ್ರಾಹಕರ ಬಳಿ ಸುಲಿಗೆ ಮಾಡುತ್ತಿವೆ. ಕನಿಷ್ಠ ದರವನ್ನು 100 ರೂ.ನಿಂದ ಕಡಿತಗೊಳಿಸಿ, ಸರಕಾರ ನಿಗದಿಪಡಿಸಿದ ಮೂಲ ದರವನ್ನು ಅಗ್ರಿಗೇಟರ್‌ಗಳು ವಸೂಲಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಮೊತ್ತವು ಸರ್ಕಾರವು ಪ್ರಸ್ತಾಪಿಸಿದ್ದಕ್ಕಿಂತ ಹೆಚ್ಚಾಗಿತ್ತು.
ಪರವಾನಗಿ ಅವಧಿ ಮುಗಿದಿದ್ದರೂ ಅಗ್ರಿಗೇಟರ್‌ಗಳಿಗೆ ಏಕೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಸಾರಿಗೆ ಆಯುಕ್ತರು, "ಕರ್ನಾಟಕ ಹೈಕೋರ್ಟ್‌ನಿಂದ ರಿಟ್ ಮೇಲ್ಮನವಿಯ ಮೇಲೆ ಮಧ್ಯಂತರ ಆದೇಶವಿದೆ. ರಿಟ್ ಮೇಲ್ಮನವಿ ಇತ್ಯರ್ಥವಾಗುವವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು. ಇಂದು ನಡೆದ ಸಭೆಯ ನಡಾವಳಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು" ಎಂದು ಮಾಹಿತಿ ನೀಡಿದರು.












Click it and Unblock the Notifications