ಬೆಂಗಳೂರಲ್ಲಿ ಆಂಧ್ರ ನಿಯಮ ಹೇರಿಕೆ? ಪಿಜಿ ಸಂಘದಿಂದ 3 ದಿನ ಕಡ್ಡಾಯ ರಜೆ ಆದೇಶ, ವಿರೋಧ
ಬೆಂಗಳೂರು: ಮಕರ ಸಂಕ್ರಾಂತಿ ಪ್ರಯುಕ್ತ ಬೆಂಗಳೂರಿನಲ್ಲಿ ಪಿಜಿಗಳು ಕಡ್ಡಾಯವಾಗಿ ಮೂರು ದಿನ ರಜೆ ಹಾಕಬೇಕು. ಮೂರು ದಿನವು ಒಲೆ ಉರಿಯುವಂತಿಲ್ಲ. ಸಂಕ್ರಾಂತಿ ಹಬ್ಬ ಆಚರಣೆ ಮಾಡುವಂತೆ 'ಪೇಯಿಂಗ್ ಗೆಸ್ಟ್ ವಸತಿ ಕಲ್ಯಾಣ ಸಂಘ ಬೆಂಗಳೂರು' ತಿಳಿಸಿದೆ. ನಿಯಮ ಉಲ್ಲಂಘಿಸಿದರೆ ಭಾರೀ ಮೊತ್ತದ ದಂಡ ಹಾಕುವುದಾಗಿ ಸಂಘ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಪಿಜಿ ನಡೆಸುತ್ತಿರುವವರು ಬಹುತೇಕರು ಆಂಧ್ರ ಪ್ರದೇಶದವರೇ ಆಗಿದ್ದಾರೆ. ಇದು ಆಂಧ್ರ ನಿಯಮವನ್ನು ಬೆಂಗಳೂರಿನ ಮೇಲೆ ಹೇರಿದಂತಲ್ಲವೇ?. ಇದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಗಳು ಶುರುವಾಗಿವೆ.
ಬೆಂಗಳೂರಿನಾದ್ಯಂತ ಸಾಕಷ್ಟು ಜೆಂಟ್ಸ್, ಗರ್ಲ್ಸ್ ಪಿಜಿಗಳನ್ನು ನೀವು ನೋಡಬಹುದು. ರಾಜ್ಯದ ಬೇರೆ ಬೇರೆ ಭಾಗಗಳಿಂದ ನಗರಕ್ಕೆ ಬರುವ ಸಾವಿರಾರು ಜನರು ಪಿಜಿಗಳಲ್ಲಿ ವಾಸಿಸುತ್ತಿದ್ದಾರೆ. ಈ ರಜೆ ನಿರ್ಧಾರಿದಂದ ಅವರಿಗೆಲ್ಲ ಮೂರು ದಿನ ಪಿಜಿ ಊಟ ಸಿಗುವುದಿಲ್ಲ. ಅದಕ್ಕಾಗಿ ಮತ್ತೆ ಹೋಟೆಲ್ ತಿಂಡಿ, ಊಟಕ್ಕೆ ಹಣ ವ್ಯಯಿಸಬೇಕಿದೆ. ಏಕೆಂದರೆ ಸಂಘದ ಸೂಚನೆಯಂತೆ ಬೆಂಗಳೂರು ಪಿಜಿಗಳು ಜನವರಿ 14, 15 ಮತ್ತು 16 ರಂದು ಮೂರು ದಿನ ರಜೆ ಘೋಷಿಸಿವೆ.

ರಜೆ ಮಾಡದಿದ್ದರೆ 20,000 ರೂ. ದಂಡ
ಈ ಮೂರು ದಿನ ಪಿಜಿಯಲ್ಲಿ ಇರಲು ತೊಂದರೆ ಇಲ್ಲ. ಆದರೆ ಅಡುಗೆ ಕೋಣೆ ಸಂಪೂರ್ಣ ಬಂದ್ ಆಗಿರಲಿದೆ. ಆಂಧ್ರ ಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈ ಮಕರ ಸಂಕ್ರಾಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಕಾರಣಕ್ಕೆ 'ಪೇಯಿಂಗ್ ಗೆಸ್ಟ್ ವಸತಿ ಕಲ್ಯಾಣ ಸಂಘ ಬೆಂಗಳೂರು' ಇಲ್ಲಿನ ಪಿಜಿಗಳಿಗೆ ಕಡ್ಡಾಯ ಮೂರು ದಿನ ರಜೆ ಘೋಷಿಸಿದೆ. ರಜೆ ಮಾಡದೇ ಎಂದಿನಂತೆ ಹಬ್ಬದ ದಿನವೂ ಅಡುಗೆ ಮಾಡಿ ಸಂಘದ ನಿಯಮ ಉಲ್ಲಂಘಿಸಿದಲ್ಲಿ ಬರೋಬ್ಬರಿ 20000 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಲಾಗಿದೆ. ಈ ಕಾರಣದಿಂದ ಪಿಜಿ ಮಾಲೀಕರು ರಜೆ ಮಾಡಿ ಆಂಧ್ರಗೆ ತೆರಳುತ್ತಿದ್ದಾರೆ.
ಆಂಧ್ರಪ್ರದೇಶದಲ್ಲಿ ವಿಜೃಂಭಣೆಯಿಂದ ನಡೆಸುವ ಹಬ್ಬಕ್ಕೆ ಬೆಂಗಳೂರಿನ ಪಿಜಿಗಳಿಗೆ ರಜೆ ನೀಡಿದರೆ ಹೇಗೆ?, ಇಲ್ಲಿ ವಾಸಿಸುವವರು ಮೂರು ದಿನ ಹೊರಗಿನ ಊಟಕ್ಕೆ ಹೆಚ್ಚುವರಿ ಹಣ ವ್ಯಯಿಸಬೇಕಾಗುತ್ತದೆ. ಬೆಂಗಳೂರಿನಲ್ಲಿ ಬಹುತೇಕ ಪಿಜಿಗಳನ್ನು ಆಂಧ್ರ ಪ್ರದೇಶದ ಜನರೇ ನಡೆಸುತ್ತಿದ್ದಾರೆ. ಅವರ ಆಚರಣೆಗಾಗಿ ಪರ್ಯಾಯ ವ್ಯವಸ್ಥೆ ಮಾಡದೇ ಮೂರು ರಜೆ ಘೋಷಿಸಿದ್ದ ಕ್ರಮ ಸರಿಯಲ್ಲ ಎಂದು ಕೆಲವರು ದೂರಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಆಂಧ್ರ ಪ್ರದೇಶದವರು ಹೊರತಾಗಿ ಒಂದಷ್ಟು ಮಂದಿ ಪಿಜಿ ನಡೆಸುವವರು ಇದ್ದಾರೆ. ಅವರು ಸಹ ಸಂಘದ ಸೂಚನೆ ಅನ್ವಯ ಮೂರು ದಿನ ರಜೆ ಮಾಡಬೇಕಿದೆ. ಇಲ್ಲವಾದರೆ 20000 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಈ ನಿಯಮ ಬೆಂಗಳೂರಿನ ಮಂದಿಗೇಕೆ ಅನ್ವಯವಾಗುತ್ತದೆ. ಬೇರೆ ರಾಜ್ಯದ ಆಚರಣೆಗೆ ಬೆಂಗಳೂರಿನ ಮೇಲೆ ಹೇರುವುದು, ಕಡ್ಡಾಯ ದಂಡದ ಎಚ್ಚರಿಕೆ ನೀಡುವುದು ಎಷ್ಟು ಸರಿ? ಎಂಬ ಪ್ರಶ್ನೆ ಉದ್ಭವಿಸಿದೆ. ಕೆಲವರು ಈ ವಿಚಾರವನ್ನು ಪ್ರಶ್ನೆ ಮಾಡಿ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದಾರೆ.












Click it and Unblock the Notifications