ಆರ್. ಆರ್. ನಗರಕ್ಕೆ ಸದ್ಯಕ್ಕಿಲ್ಲ ಚುನಾವಣೆ; ಮುನಿರತ್ನಗೆ ಚಿಂತೆ!
ಬೆಂಗಳೂರು, ಡಿಸೆಂಬರ್ 19 : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ 2020ರ ಫೆಬ್ರವರಿ ತನಕ ನಡೆಯುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಮುನಿರತ್ನಗೆ ಇದರಿಂದಾಗಿ ಚಿಂತೆ ಆರಂಭವಾಗಿದೆ.
ಆರ್. ಆರ್. ನಗರ ಕ್ಷೇತ್ರದ ಚುನಾವಣೆ ವಿಚಾರದ ಬಗ್ಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯ ಬುಧವಾರ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿದೆ.
ಅರ್ಜಿಯ ವಿಚಾರಣೆ ಅಂತ್ಯಗೊಂಡು ಆದೇಶ ಬರುವ ತನಕ ಚುನಾವಣಾ ಆಯೋಗ ಉಪ ಚುನಾವಣೆಯನ್ನು ನಡೆಸುವಂತಿಲ್ಲ. ಇದರಿಂದಾಗಿ ಅನರ್ಹ ಶಾಸಕ ಮುನಿರತ್ನ ಬಿ. ಎಸ್. ಯಡಿಯೂರಪ್ಪ ಸಂಪುಟ ಸೇರುವ ಕನಸು ಸದ್ಯಕ್ಕೆ ನನಸಾಗುವುದಿಲ್ಲ.
2018ರ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿನಗರದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಮನಿರತ್ನ ಗೆಲುವು ಸಾಧಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು. ಸುಪ್ರೀಂಕೋರ್ಟ್ ಆದೇಶದ ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಶಾಸಕರ ಆಯ್ಕೆ ಅಸಿಂಧುಗೊಳಿಸಿ
ರಾಜರಾಜೇಶ್ವರಿನಗರ ಚುನಾವಣೆಯಲ್ಲಿ ಶಾಸಕರಾಗಿ ಮುನಿರತ್ನ ಆಯ್ಕೆಯಾಗಿದ್ದಾರೆ. ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ. ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ ಮೊದಲ ವಾರಕ್ಕೆ ಮುಂದೂಡಿದೆ. ಆದ್ದರಿಂದ, ಆರ್. ಆರ್. ನಗರ ಕ್ಷೇತ್ರಕ್ಕೆ ಸದ್ಯಕ್ಕೆ ಉಪ ಚುನಾವಣೆ ನಡೆಯುವುದಿಲ್ಲ.

ಮುನಿರಾಜು ಗೌಡ ಸಲ್ಲಿಸಿರುವ ಅರ್ಜಿ
ಆರ್. ಆರ್. ನಗರ ಚುನಾವಣೆಯಲ್ಲಿ ಸೋತ ಬಿಜೆಪಿಯ ಮುನಿರಾಜು ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ತುರ್ತು ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ಪೀಠ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಫೆಬ್ರವರಿಗೆ ಮುಂದೂಡಿದೆ.

ಅರ್ಜಿಯನ್ನು ಇತ್ಯರ್ಥಗೊಳಿಸಲು ಮನವಿ
ಮುನಿರತ್ನ ಪರವಾಗಿ ವಾದ ಮಂಡನೆ ಮಾಡಿದ ವಕೀಲ ಅಶೋಕ್ ಹಾರನಹಳ್ಳಿ, "ಚುನಾವಣಾ ಅಕ್ರಮ ಆರೋಪದ ಹಿನ್ನಲೆಯಲ್ಲಿ ಆಯ್ಕೆಯನ್ನು ಅಸಿಂಧುಗೊಳಿಸಿ ಅವರ ಬದಲು ತಮ್ಮನ್ನು ಆಯ್ಕೆ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು. ಈ ಅರ್ಜಿಯನ್ನು ಬೇಗ ಇತ್ಯರ್ಥಗೊಳಿಸಬೇಕು ಇಲ್ಲವಾದಲ್ಲಿ ಉಪ ಚುನಾವಣೆಗೆ ಅಡ್ಡಿಯಾಗಲಿದೆ" ಎಂದು ವಾದ ಮಂಡನೆ ಮಾಡಿದರು.

ಉಪ ಚುನಾವಣೆ ಸದ್ಯಕ್ಕಿಲ್ಲ
ಕಾಂಗ್ರೆಸ್ ಪಕ್ಷದಲ್ಲಿದ್ದ ಮುನಿರತ್ನ ಈಗ ಬಿಜೆಪಿ ಸೇರಿದ್ದಾರೆ. ಸುಪ್ರೀಂಕೋರ್ಟ್ ಆದೇಶದಂತೆ ಅವರು ಉಪ ಚುನಾವಣೆಗೆ ಸ್ಪರ್ಧಿಸಬಹುದು. ಆದರೆ, ನ್ಯಾಯಾಲಯದಲ್ಲಿ ಅರ್ಜಿ ಯಾವಾಗ ಇತ್ಯರ್ಥವಾಗಲಿದೆ. ಉಪ ಚುನಾವಣೆ ಯಾವಾಗ ನಡೆಯಲಿದೆ? ಎಂದು ಅನರ್ಹ ಶಾಸಕ ಮನಿರತ್ನ ಕಾದು ಕುಳಿತಿದ್ದಾರೆ.












Click it and Unblock the Notifications