ನಿತಿನ್ ಗಡ್ಕರಿಗೆ ಬೆದರಿಕೆ ಕೇಸ್: ಭಯೋತ್ಪಾದಕನನ್ನು ವಶಕ್ಕೆ ಪಡೆದ ಎನ್ಐಎ
ಬೆಳಗಾವಿ, ಜುಲೈ 17: ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಗೆ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಜೀವ ಬೆದರಿಕೆ ಕರೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ ಭಯೋತ್ಪಾದಕ ಅಫ್ಸರ್ ಪಾಷಾನನ್ನು ಎನ್‌ಐಎ ವಶಕ್ಕೆ ಪಡೆದಿದೆ. ಬೆದರಿಕೆ ಕರೆಗೆ ಸಂಬಂಧಿಸಿದಂತೆ ಅದೇ ಜೈಲಿನಲ್ಲಿದ್ದ ಕೈದಿ ಜಯೇಶ್ ಪೂಜಾರಿಯನ್ನು ನಾಗಪುರ ಪೊಲೀಸರು ಕಳೆದ ಮಾರ್ಚ್‌ನಲ್ಲಿ ಬಂಧಿಸಿದ್ದರು.
ಮಂಗಳೂರಿನ ಜೋಡಿ ಹತ್ಯೆ ಮಾಡಿದ್ದ ಅಪರಾಧಿ ಹಾಗೂ ವಿವಿಧ ಪ್ರಕರಣಗಳ ಬಹುಮುಖ್ಯ ಆರೋಪಿ ಜಯೇಶ್ ಪೂಜಾರಿ ಅಲಿಯಾಸ್ ಜಯೇಶ್ ಕಾಂತ ಹಿಂಡಲಗಾ ಜೈಲಿನಲ್ಲಿದ್ದ. ಆತನೇ ಈ ವರ್ಷದ ಆರಂಭದಲ್ಲಿ ಮತ್ತು ಮಾರ್ಚ್ 21 ರಂದು ತಾನಿದ್ದ ಬೆಳಗಾವಿಯ ಕೇಂದ್ರ ಕಾರಾಗೃಹದಿಂದಲೇ ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ.

ಅದಷ್ಟೇ ಅಲ್ಲದೇ 10 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದ ಆತ, ಹಣ ನೀಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಪ್ರಕರಣದ ತನಿಖೆ ನಡೆಸಿದ ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಿ ಜಯೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.
ಭಯೋತ್ಪಾದಕನೆ ಫೋನ್ ಕರೆಗೆ ಪ್ರಚೋದಿಸಿದ್ದ
ತನಿಖಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸತ್ಯದ ಶೋಧ ನಡೆಸುತ್ತಿದ್ದರು. ಲಷ್ಕರ್-ಎ-ತೊಯ್‌ಬಾ ದೊಂದಿಗೆ ನಂಟು ಹೊಂದಿರುವ ಭಯೋತ್ಪಾದಕ ಪಾಷಾ ಬೆಳಗಾವಿ ಜೈಲಿನಲ್ಲಿದ್ದ. ಈತನೇ ಕೇಂದ್ರ ಸಚಿವರಿಗೆ ಕರೆ ಮಾಡಿ ಬೆದರಿಕೆ ಹಾಕುವಂತೆ ಜಯೇಶ್‌ಗೆ ಪ್ರಚೋದನೆ ನೀಡಿದ್ದಾನೆ ಎಂದು ಪೊಲೀಸರ ತಿಳಿದು ಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2005 ರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ (IISc) ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಷಾ ಶಿಕ್ಷೆಗೆ ಗುರಿಯಾಗಿದ್ದಾನೆ. ಗಡ್ಕರಿ ಪ್ರಕರಣ ಸಂಬಂಧ ಈಗ ಆತನನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ನಾಗಪುರ ಪೊಲೀಸರ ಮಾಹಿತಿ ಮೇರೆಗೆ ವಿಶೇಷ ತನಿಖಾ ತಂಡದ ಸದಸ್ಯರು ಎರಡು ದಿನಗಳ ಹಿಂದೆ ಬೆಳಗಾವಿಗೆ ಆಗಮಿಸಿದ್ದಾರೆ. ಕೆಲವು ಪ್ರಕ್ರಿಯೆ ಮುಗಿಸಿದ ಅವರು, ಶನಿವಾರ ಪಾಷಾನನ್ನು ಕಸ್ಟಡಿಗೆ ತೆಗೆದುಕೊಂಡದ್ದಾರೆ. ಪಾಷಾನನ್ನು ಶನಿವಾರ ಇಡೀ ದಿನ ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ ಎನ್‌ಐಎ ಅಧಿಕಾರಿಗಳು ಆತನನ್ನು ನಾಗಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಜೈಲಧಿಕಾರಿಗಳ ವಿರುದ್ಧ ತನಿಖಾಧಿಕಾರಿ ಅಸಮಾಧಾನ
ಹಿಂಡಲಗಾ ಜೈಲಿನಲ್ಲಿ ಅಪರಾಧಿಗಳು ಹೇಗೆ ಮೊಬೈಲ್ ಬಳಸಿ ಕರೆ ಮಾಡಲು ಸಾಧ್ಯ. ಅವರಿಗೆ ಇದೆಲ್ಲವು ಸಾಧ್ಯವಾಗಬೇಕಾದರೆ ಅಲ್ಲಿನ ಭದ್ರತೆ ಹೇಗಿದೆ ಎಂದು ಎನ್‌ಐಎ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಜೈಲಾಧಿಕಾರಿಗಳ ಮದ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಅಪರಾಧಿಗಳನ್ನು ಬಂಧಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಪೊಲೀಸರು ಜೈಲು ಅಧಿಕಾರಿಗಳಿಗೆ ತಿಳಿಸಿದರು. ಆದರೆ, ಜೈಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜೈಲಿನೊಳಗೆ ಮೊಬೈಲ್ ಫೋನ್‌ಗಳು, ಸಿಮ್, ಚಾರ್ಜರ್ ಬಳಕೆಗೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು. ಈ ಮಾತಿನಿಂದಾಗಿ ಕೆಲ ಕಾಲ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆಯತು ಎನ್ನಲಾಗಿದೆ.












Click it and Unblock the Notifications