ಪಕ್ಷವನ್ನೇ ಸೇರಿಲ್ಲ ಆಗ್ಲೇ ನಿಲೇಕಣಿಗೆ ಕಾಂಗ್ರೆಸ್ ಟಿಕೆಟ್!
ಬೆಂಗಳೂರು, ಫೆ. 20- ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕರೇನೋ 'ಆಧಾರ್' ಸಾರಥಿ ನಂದನ್ ನಿಲೇಕಣಿ ದಾಕ್ಷಿಣ್ಯಕ್ಕೊಳಗಾಗಿ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿದ್ದಾರೆ. ಆದರೆ ಪಕ್ಷದ ನಿಷ್ಠಾವಂತರು ಇದರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದೂ ಆಯ್ತು. ಇದೀಗ ಕಾರ್ಯಕರ್ತರು ನಂದನ್ ನಿಲೇಕಣಿ ಬಗ್ಗೆ ಮತ್ತೊಂದು ಅಸಮಾಧಾನವನ್ನು ಹೊಂದಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವಂತೆ ಕಾಂಗ್ರೆಸ್ ಹೈಕಮಾಂಡ್ ಈಗಾಗಲೇ ನಿಲೇಕಣಿ ಸೂಚಿಸಿದೆ. ಅದಕ್ಕೆ ತಕ್ಕಂತೆ ನಿಲೇಕಣಿ ಸಹ ಕ್ಷೇತ್ರದಲ್ಲಿ ಚುನಾವಣಾ ತಯಾರಿ ನಡೆಸಿದ್ದಾರೆ. ಆದರೆ ಅಸಲಿಗೆ ಅವರು ಇನ್ನೂ ಕಾಂಗ್ರೆಸ್ ಸದಸ್ಯರೇ ಆಗಿಲ್ಲ. ಪಕ್ಷದ ಸದಸ್ಯತ್ವವನ್ನೇ ಪಡೆದಿಲ್ಲ. ಇದನ್ನು ಗಮನಿಸಿ ಪಕ್ಷದ ಕಾರ್ಯಕರ್ತರು ಕಿಡಿಕಾರತೊಡಗಿದ್ದಾರೆ.

ಇನ್ನೇನು ಮಾರ್ಚ್ ಮೊದಲ ವಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ನಂದನ್ ನಿಲೇಕಣಿ ಹೆಸರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಆರು ತಿಂಗಳಿಂದ ಚಾಲ್ತಿಯಲ್ಲಿದೆ. ಆದರೆ ಇದುವರೆಗೂ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನೇ ಪಡೆದಿಲ್ಲ ಎಂದು ಟಿಕೆಟ್ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ.
ಆದರೂ ಇನ್ನೂ ಕಾಲ ಮಿಂಚಿಲ್ಲ. ನಂದನ್ ನಿಲೇಕಣಿ ಅವರು ನೇರವಾಗಿ ಕಾಂಗ್ರೆಸ್ ಹೈಕಮಾಂಡಿನ ಚಾಯ್ಸ್ ಆಗಿರುವುದರಿಂದ ದಿಲ್ಲಿಯಲ್ಲೇ ಅವರು ಪಕ್ಷಕ್ಕೆ ಸೇರ್ಪಡೆಯಾಗಬಹುದು. ಆದರೆ ಅದಕ್ಕೂ ಮುನ್ನ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರದಲ್ಲಿ ತೊಡಗಿರುವುದು ಸ್ಥಳೀಯ ನಾಯಕರ ಕಣ್ಣು ಕೆಂಪಗಾಗಿಸಿದೆ.
ನಂದನ್ ನಿಲೇಕಣಿ ಅವರು ಕಳೆದ 5 ವರ್ಷಗಳಿಂದ ಕಾಂಗ್ರೆಸ್ ಮತ್ತು ಯುಪಿಎ ಸರಕಾರದ ಜತೆ ಗಾಢವಾಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೂ ಮೊದಲು ಕರ್ನಾಟಕದಲ್ಲಿ ಎಸ್ಎಂ ಕೃಷ್ಣ ಆಡಳಿತವಿದ್ದಾಗ ನಂದನ್ ನಿಲೇಕಣಿ ಅವರು ಮೊದಲ ಬಾರಿಗೆ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದರು. Bangalore Agenda Task Forceನಲ್ಲಿ ಕಾರ್ಯನಿರ್ವಹಿಸಿದ್ದರು.
UIDAI ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಯಾವಾಗ?
ತಾಜಾ ಮಾಹಿತಿಯ ಪ್ರಕಾರ ಮಾರ್ಚ್ ಅಂತ್ಯಕ್ಕೆ ಆಧಾರ್ ನೋಂದಣಿಯು 60 ಕೋಟಿ ಜನರನ್ನು ತಲುಪಲಿದೆ. ಆ ಗುರಿ ಸಾಧನೆಯಾಗುತ್ತಿದಂತೆ ನಂದನ್ ನಿಲೇಕಣಿ ಅವರು UIDAI ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಆ ನಂತರವೇ ಅವರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಗಮನಾರ್ಹವೆಂದರೆ ಆಧಾರ್ ಯೋಜನೆ ಸಾಕಷ್ಟು ವಿವಾದಕ್ಕೆ ಈಡಾಗಿದೆ. ಸಂಸತ್ತು ಮತ್ತು ಸುಪ್ರೀಂಕೋರ್ಟಿನಲ್ಲಿ ಆಧಾರ್ ಯೋಜನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಹಾಗಾಗಿ ನಂದನ್ ನಿಲೇಕಣಿ ಉಪಸ್ಥಿತಿ ಅಗತ್ಯವಾಗಿರುತ್ತದೆ. ಆದ್ದರಿಂದ ಲೋಕಸಭೆ ವಿಸರ್ಜನೆಯಾಗುತ್ತಿದ್ದಂತೆ ತಾವೂ ಸಹ UIDAI ಗೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.


Click it and Unblock the Notifications
