NICE Road Toll Collection: “ಟೋಲ್ ಕಟ್ಟಬೇಡಿ” – ನೈಸ್‌ ರಸ್ತೆ ವಿರುದ್ಧ ಜನರಿಗೆ ಎಚ್‌.ಡಿ. ಕುಮಾರಸ್ವಾಮಿ ಕರೆ

ಬೆಂಗಳೂರು: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯ 'ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ' ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹೀಗಾಗಿ ಕೂಡಲೇ ನೈಸ್ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನಪಡಿಸಿಕೊಳ್ಳಬೇಕು ಹಾಗೂ ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯಿಸಿದರು.

ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಹೈಕೋರ್ಟ್ ತೀರ್ಪಿನಂತೆ ನೈಸ್ ಕಂಪನಿ ಟೋಲ್ ಸಂಗ್ರಹ ಮಾಡುವುದನ್ನು ನಿಲ್ಲಿಸಬೇಕು. ವಾಹನ ಸವಾರರು ಟೋಲ್ ಕಟ್ಟಬಾರದು ಎಂದು ಕರೆ ನೀಡಿದರು. ನೈಸ್ ಕಂಪನಿಯ ಅಕ್ರಮಗಳ ಬಗ್ಗೆ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಿಂದ ಇನ್ನಾದರೂ ರಾಜ್ಯ ಸರಕಾರ ಕಣ್ತೆರೆಯಬೇಕು.

NICE Road Don t Pay Toll on NICE Road H D Kumaraswamy Appeals to Public Cites High Court Order

ಯೋಜನೆಯಲ್ಲಿ ಅಕ್ರಮಗಳು ನಡೆದಿವೆ ಹಾಗೂ ವಾಹನ ಸವಾರರಿಂದ ಅಕ್ರಮವಾಗಿ ಟೋಲ್ ಸುಲಿಗೆ ಮಾಡಲಾಗುತ್ತಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಕಂಪನಿ ತಕ್ಷಣವೇ ಟೋಲ್ ಸಂಗ್ರಹ ನಿಲ್ಲಿಸಬೇಕು. ರಾಜ್ಯ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನೈಸ್ ಕಂಪನಿ ಟೋಲ್ ಸಂಗ್ರಹ ಮಾಡಿದಂತೆ ತಡೆಯಬೇಕು. ಇಲ್ಲವಾದರೆ ಜನರೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಟೋಲ್ ಸಂಗ್ರಹ ನಿಲ್ಲಿಸಲು ಎರಡು ವಾರ ಗಡುವು ನೀಡುತ್ತೇನೆ ಎಂದು ಸ್ಪಷ್ಟ ಮಾತುಗಳಲ್ಲಿ ತಿಳಿಸಿದ ಸಚಿವ ಕುಮಾರಸ್ವಾಮಿ ಅವರು, ಅಷ್ಟರೊಳಗೆ ರಾಜ್ಯ ಸರಕಾರ ಆ ಕಂಪನಿಯಿಂದ ಟೋಲ್ ಸಂಗ್ರಹಕ್ಕೆ ತಡೆ ಒಡ್ಡದಿದ್ದರೆ ನಮ್ಮ ಪಕ್ಷದ ವತಿಯಿಂದ ಉಗ್ರ ಹೋರಾಟ ನಡೆಸುತ್ತೇವೆ. ಜುಲೈ 29ರಂದು ನೈಸ್ ಯೋಜನೆ ಅಕ್ರಮಗಳ ಕುರಿತಂತೆ ಹೈಕೋರ್ಟ್ ದ್ವಿಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ.‌ ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ಯೋಜನೆಯು 'ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣುತ್ತಿದೆ' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

ಅಲ್ಲದೆ ನೈಸ್ ಕಂಪನಿಯ ವಂಚನೆ ಮತ್ತು ಇನ್ನಿತರ ಅಪರಾಧಗಳ ಆರೋಪಗಳ ಕುರಿತು ತಜ್ಞರ ವಿಶೇಷ ತಂಡದಿಂದ ಸ್ವತಂತ್ರ ತನಿಖೆ ಮತ್ತು ಯೋಜನೆಯ ಲೆಕ್ಕಪತ್ರಗಳ ಬಗ್ಗೆ ಫೊರೆನ್ಸಿಕ್ ಆಡಿಟ್ ನಡೆಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಹೇಳಿತ್ತು. ಅಲ್ಲಿಗೆ ಈ ಯೋಜನೆಯ ಹಣೆಬರಹ ಯಾವ ರೀತಿ ಇದೆ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ನೈಸ್ ಕಂಪನಿ ವಿರುದ್ಧ ಅನೇಕ ಗುರುತರ ಅಂಶಗಳನ್ನು ನ್ಯಾಯಾಲಯ ಪ್ರಸ್ತಾಪ ಮಾಡಿದ್ದು, ನೈಸ್ ಕಂಪನಿ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರ ನೈಸ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಸರ್ಕಾರ ತೀರ್ಮಾನ ಕೈಗೊಳ್ಳದೇ ಇದ್ದರೆ ನಾವು ಹೋರಾಟ ಮಾಡಲಿದ್ದೇವೆ.‌ ಜನರ ರಕ್ಷಣೆ ಮಾಡಬೇಕಾದ ಸರಕಾರ ಖಾಸಗಿ ಸಂಸ್ಥೆಯೊಂದು ಈ ರೀತಿ ಲೂಟಿ ಮಾಡುವಾಗಲೂ ಏಕೆ ಸುಮ್ಮನಿದೆ? ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ರಾಜ್ಯ ಸರ್ಕಾರ ಏಕೆ ಸುಮ್ಮನಿದೆ? ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಹೈಕೋರ್ಟ್ ತನ್ನ ತೀರ್ಪಿನಲ್ಲಿ ನೈಸ್ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರ ನೈಸ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಹೆಚ್.ಡಿ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಪ್ರಾಥಮಿಕ ಒಪ್ಪಂದ ಆಗಿತ್ತು.‌ ಬಳಿಕ ದೇವೇಗೌಡರು ಪ್ರಧಾನಿಯಾದರು. ಅದಾದ ಬಳಿಕ ಈ ವಿಚಾರವಾಗಿ ಹಲವು ನಾಟಕೀಯ ಬೆಳವಣಿಗೆಗಳು ನಡೆದವು.‌ ನೈಸ್ ಕಂಪನಿಗೆ ಮನಸೋಇಚ್ಚೆ ಸರಕಾರ ಮತ್ತು ಅಧಿಕಾರಿಗಳು ರೈತರ ಭೂಮಿ ಲೂಟಿ ಹೊಡೆಯಲು ಅವಕಾಶ ಮಾಡಿಕೊಟ್ಟರು.

ನೈಸ್ ರಸ್ತೆ ಹೆಸರಲ್ಲಿ ಐದು ಟೌನ್ ಶಿಪ್, ಪೆರಿಫರೆಲ್ ರಿಂಗ್ ರಸ್ತೆಗಳು ಇತ್ಯಾದಿಗಳ ನೆಪದಲ್ಲಿ ಭೂಮಿಯನ್ನು ಕಸಿದುಕೊಳ್ಳಲಾಯಿತು. ಇದರ ವಿರುದ್ಧವಾಗಿ 150ಕ್ಕೂ ಹೆಚ್ಚು ದೂರುಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದ್ದವು. ಆದರೆ, ನೈಸ್ ಸಂಸ್ಥೆ ಇಡೀ ವ್ಯವಸ್ಥೆಯ ದಾರಿ ತಪ್ಪಿಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಗಳಿಂದ ಪಾರಾಗಿತ್ತು ಎಂದು ಸಚಿವ ಕುಮಾರಸ್ವಾಮಿ ತಿಳಿಸಿದರು.

ನೈಸ್ ಕಂಪನಿ ಎಲ್ಲಾ ನಿಯಮಗಳನ್ನು ಮತ್ತು ಕಾನೂನುಗಳನ್ನು ಗಾಳಿಗೆ ತೂರಿದೆ. ಫ್ರೇಮ್ ವರ್ಕ್ ಒಪ್ಪಂದ ಪ್ರಕಾರವೇ ಕೆಲಸ ಮಾಡಬೇಕು ಎಂದು ಷರತ್ತು ಇತ್ತು. ಆದರೆ ನೈಸ್ ಕಂಪನಿ ಅದಾವುದನ್ನು ಪಾಲನೆ ಮಾಡಿಲ್ಲ ಎಂದು ದೂರಿದ ಸಚಿವರು, ಇದು ಕರ್ನಾಟಕದ ಇತಿಹಾಸದಲ್ಲಿ ದೊಡ್ಡ ಹಗರಣ ಎಂದು ಕೋರ್ಟ್ ಹೇಳಿದೆ.‌ ಯೋಜನೆಯನ್ನು ತನ್ನ ಸ್ವಾಧೀನತೆ ತೆಗೆದುಕೊಳ್ಳಲು ಸರ್ಕಾರಕ್ಕೆ ಇದಕ್ಕಿಂತ ಕಾರಣ ಇನ್ನೇನು ಬೇಕಿದೆ ಎಂದು ಕುಮಾರಸ್ವಾಮಿ ಅವರು ಕೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+