ಬೆಂಗಳೂರಲ್ಲಿ ಉಗ್ರ ಸಂಚು ಪ್ರಕರಣ: ಶಂಕಿತ ಜುನೈದ್ ಅಹ್ಮದ್ ಬಂಧನಕ್ಕೆ 5 ಲಕ್ಷ ರೂ.ನಗದು ಬಹುಮಾನ ಘೋಷಿಸಿದ ಎನ್‌ಐಎ
ಬೆಂಗಳೂರು: ನಗರದಲ್ಲಿ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದಾನೆ ಎನ್ನಲಾದ ಜುನೈದ್ ಅಹ್ಮದ್‌ಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದೆ. ಲಷ್ಕರ್-ಇ-ತೈಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆ ಇರುವ ಜುನೈದ್ ಅಹ್ಮದ್ ಬಗ್ಗೆ ಮಾಹಿತಿ ನೀಡಿದವರಿಗೆ ₹5 ಲಕ್ಷ ನಗದು ಬಹುಮಾನ ಘೋಷಿಸಲಾಗಿದೆ.
2023ರ ಜುಲೈ ತಿಂಗಳಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಸಿಸಿಬಿ ಪೊಲೀಸರು ಮಹತ್ವದ ಉಗ್ರ ಘಟಕವೊಂದನ್ನು ಭೇದಿಸಿದ್ದರು. ಕಾರ್ಯಾಚರಣೆಯ ವೇಳೆ ಐವರನ್ನು ಬಂಧಿಸಿ, ಭಾರಿ ಪ್ರಮಾಣದ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡ ವಸ್ತುಗಳಲ್ಲಿ 4 ಜೀವಂತ ಗ್ರೆನೇಡ್‌ಗಳು, 7 ಪಿಸ್ತೂಲ್‌ಗಳು, 45 ಜೀವಂತ ಗುಂಡುಗಳು, ವಾಕಿ-ಟಾಕಿಗಳು ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಸಾಧನಗಳು ಸಹ ಸೇರಿದ್ದವು. ಬಂಧಿತರು ಹೆಬ್ಬಾಳ, ಆರ್.ಟಿ.ನಗರ ಮತ್ತು ಕೊಡಿಗೇಹಳ್ಳಿಯ ನಿವಾಸಿಗಳಾಗಿದ್ದು, ಜುನೈದ್ ನೇತೃತ್ವದಲ್ಲಿ ನಗರದಲ್ಲಿ ಸರಣಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.

2017ರ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾಗ ಜುನೈದ್‌ನ ಉಗ್ರ ಚಟುವಟಿಕೆಗಳಲ್ಲಿ ಮುಂದುವರಿದಿದ್ದಾಗಿ ತನಿಖೆ ವೇಳೆ ಎಂದು ತಿಳಿದುಬಂದಿತ್ತು. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಸಂದರ್ಭದಲ್ಲಿ 2008ರ ಬೆಂಗಳೂರು ಸರಣಿ ಸ್ಫೋಟದ ಪ್ರಮುಖ ಆರೋಪಿ ಟಿ. ನಾಸೀರ್ ಜೊತೆ ಸಂಪರ್ಕ ಬೆಳೆದಿದ್ದು, ನಂತರ ಇತರೆ ಕೃತ್ಯಗಳಿಗೂ ಸಂಚು ರೂಪಿಸಿದ ಆರೋಪವೂ ಇದೆ. ಬಳಿಕ ಜೈಲಿನಿಂದ ಬಿಡುಗಡೆಯಾದ ನಂತರ ಲಷ್ಕರ್-ಇ-ತೈಬಾ ಸಂಘಟನೆಯ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ, ದೊಡ್ಡ ಮಟ್ಟದ ದಾಳಿಗೆ ಸಿದ್ಧತೆ ನಡೆಸಿದ್ದಾನೆ ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.
ಬೇರೆ ಬೇರೆ ಹೆಸರು ಬಳಕೆ
ಸುಮಾರು ನಾಲ್ಕು ವರ್ಷಗಳಿಂದ ಕಾನೂನು ಜಾರಿಗೆ ತಪ್ಪಿಸಿಕೊಂಡಿರುವ ಜುನೈದ್ ಕನಿಷ್ಠ ಒಂಬತ್ತು ಬೇರೇ ಬೇರೆ ಹೆಸರುಗಳನ್ನು ಬಳಸಿ ಅಡಗಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿ ರಾಜ್ಯ ಪೊಲೀಸರಿಂದ ಈ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು. ಇದೀಗ ಎನ್‌ಐಎ ಸಾರ್ವಜನಿಕರ ಸಹಕಾರಕ್ಕಾಗಿ ಜಾಗೃತಿ ಅಭಿಯಾನ ಆರಂಭಿಸಿದ್ದು, ಪ್ರಮುಖ ಸ್ಥಳಗಳಲ್ಲಿ ಜುನೈದ್‌ನ ಫೋಟೋಗಳಿರುವ ಪೋಸ್ಟರ್‌ಗಳನ್ನು ಅಂಟಿಸಿದೆ. ಆತನ ಪತ್ತೆಗೆ ಸಂಬಂಧಿಸಿದ ವಿಶ್ವಾಸಾರ್ಹ ಮಾಹಿತಿ ನೀಡುವವರ ವಿವರಗಳನ್ನು ಸಂಪೂರ್ಣ ರಹಸ್ಯವಾಗಿರಿಸಲಾಗುತ್ತದೆ ಎಂದು ಎನ್‌ಐಎ ಭರವಸೆ ನೀಡಿದೆ.
ತನಿಖೆ ವಿಸ್ತರಿಸಿದಂತೆ 2024ರ ಮಾರ್ಚ್‌ನಲ್ಲಿ ಕರ್ನಾಟಕ ಸೇರಿದಂತೆ ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಎನ್‌ಐಎ ಮತ್ತಷ್ಟು ಶೋಧ ಕಾರ್ಯಾಚರಣೆ ನಡೆಸಿತ್ತು. ದೇಶವ್ಯಾಪಿ ಉಗ್ರ ಜಾಲದ ಸಂಪರ್ಕಗಳ ಕುರಿತಾಗಿ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಶೋಧಗಳು ನಡೆದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯಿಂದ ತಿಳಿದುಬಂದಂತೆ, ಜುನೈದ್ ಅಹ್ಮದ್ ಜೈಲಿನಿಂದ ಬಿಡುಗಡೆ ಆದ ಬಳಿಕ ಉಗ್ರ ಸಂಘಟನೆಗಳ ಸಂಪರ್ಕದಲ್ಲಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಎನ್‌ಐಎ ಈಗ ಸಾರ್ವಜನಿಕರಿಂದ ಸಹಕಾರ ಕೋರಿದ್ದು, ಜುನೈದ್ ಅಹ್ಮದ್ ಬಂಧನಕ್ಕೆ ನೆರವಾಗುವ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದೆ.












Click it and Unblock the Notifications