Flyover: ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಹೊಸ ಮೇಲ್ಸೇತುವೆ: NHAI
ಬೆಂಗಳೂರು, ಡಿಸೆಂಬರ್ 11: ಸಂಚಾರ ದಟ್ಟಣೆಗೆ ಹೆಸರುವಾಸಿಯಾಗಿರುವ ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಸರ್ಕಾರ ಹೊಸ ಹೊಸ ಪ್ಲಾನ್ ಮಾಡುತ್ತಲೇ ಇರುತ್ತದೆ. ಮುಂದುವರಿದ ಭಾಗವಾಗಿ ಬೆಂಗಳೂರು-ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನೂತನ ಮೇಲ್ಸೇತುವೆ (Flyover) ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಟೆಂಡರ್ ಆಹ್ವಾನಿಸಲಿದೆ.
ಬೆಂಗಳೂರು ನಗರದಿಂದ ಹೆಬ್ಬಾಳ, ಯಲಹಂಕ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ತೆರುಳುವವರು ಈ ಒಂದು ಸಿಗ್ನಲ್‌ನಲ್ಲಿ ನಿಮಿಷಗಳ ಕಾಲ ನಿಲ್ಲುವಂತಾಗಿದೆ. ಯಲಹಂಕ ಮೇಲ್ಸೇತುವೆ ಮೂಲಕ ಸಾಗಿ ಬರುತ್ತಿದ್ದಂತೆ ಸಾದನಹಳ್ಳಿ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಕುರಿತು ಸಾಕಷ್ಟು ದೂರುಗಳು ಬಂದಿವೆ.

ಬೆಂಗಳೂರಿನಿಂದ ಹೆಬ್ಬಾಳ ಮೂಲಕ ಸಾಗಿ ಯಲಹಂಕ ಮೇಲ್ಸೇತುವೆ ಇಳಿಯುತ್ತಿದ್ದಂತೆ ಸಾದಹಳ್ಳಿ ಜಂಕ್ಷನ್‌ನಲ್ಲಿ ಸವೀರ್ಸ ರಸ್ತೆ ಅಡ್ಡವಾಗಿ ಓಡಾಡುವವರಿಗೆ ಅನುಕೂಲವಾಗಲೆಂದು ಸಿಗ್ನಲ್ ಹಾಕಲಾಗಿದೆ. ಇಲ್ಲಿ ಮೇಲ್ಸೇತುವೆ ನಿರ್ಮಾಣದ ಅಗತ್ಯತೆ ಇದ್ದು, ನಿರ್ಮಾಣ ಮಾಡಬೇಕೆಂದು ಕ್ಯಾಬ್, ಇತರ ಚಾಲಕ ಮನವಿಯನ್ನು ಪುರಸ್ಕರಿಸಲಾಗಿದೆ. ಈ ಸಾದನಹಳ್ಳಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗುವುದೆಂದು NHAI ಅಧಿಕೃತ ಮಾಹಿತಿ ನೀಡಿದೆ.
NHAI ಜೊತೆ ಕಂದಾಯ ಸಚಿವರ ಸಭೆ
ಈ ರಸ್ತೆಯು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದೆ. ಈ ಕ್ಷೇತ್ರದ ಶಾಸಕರು ಆದ ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ಸಭೆ ನಡೆಸಿದ್ದರು. ಅದರಲ್ಲಿ ಪಾಲ್ಗೊಂಡಿದ್ದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳು ಸಾದನಹಳ್ಳಿ ಜಂಕ್ಷನ್‌ನಲ್ಲಿ ಸಿಗ್ನಲ್ ಫ್ರೀ ಮೇಲ್ಸೇತುವೆ ನಿರ್ಮಿಸುವುದಾಗಿ ತಿಳಿಸಿದರು.
ಇದೇ ಸಭೆಯಲ್ಲಿ ಈ ಹೆದ್ದಾರಿಯಲ್ಲಿ ಉಂಟಾಗುವ ಟ್ರಾಫಿಕ್ ಸಮಸ್ಯೆಗೆ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು. ಜಕ್ಕೂರು ಏರೋಡ್ರೋಮ್ ಬಳಿ ಸಂಚಾರ ಸುಗಮಗೊಳಿಸಬೇಕು. ಯಲಹಂಕ ಬೈ ಪಾಸ್‌ನಲ್ಲಿ ಕಾಫಿ ಡೇ ಬಳಿ (ಹೆದ್ದಾರಿಯ ಎರಡೂ ಬದಿಗಳಲ್ಲಿ) ಹೆದ್ದಾರಿಗೆ ಪ್ರತ್ಯೇಕ ನಿರ್ಗಮನ ಮತ್ತು ಪ್ರವೇಶ ವ್ಯವಸ್ಥೆ ಮಾಡುವುದು ಸೇರಿದಂತೆ NHAI ಮತ್ತು ಬೆಂಗಳೂರು ಸಂಚಾರಿ ಪೊಲೀಸರಿಗೆ ಸಚಿವರು ಸೂಚಿಸಿದರು.
ಸಾದನಹಳ್ಳಿ ಸಿಗ್ನಲ್‌ನಿಂದ ಟ್ರಾಫಿಕ್ ಸಮಸ್ಯೆ
NHAI ರಾಷ್ಟ್ರೀಯ ಹೆದ್ದಾರಿಯು ಹೆಬ್ಬಾಳದಿಂದ ಆರಂಭವಾಗುತ್ತದೆ. ಮೇಲ್ಸೇತುವೆ ಮೂಲಕ ಸಾದನಹಳ್ಳಿ ತಲುಪುತ್ತಿದ್ದಂತೆ ಅಲ್ಲಿ ಸಂಚಾರ ದಟ್ಟಣೆ ಎದುರಾಗುತ್ತದೆ. ಇಲ್ಲಿಂದ ಮುಂದೆ ಟೋಲ್ ಪ್ಲಾಜಾ ಮಾರ್ಗವಾಗಿ ದೇವನಹಳ್ಳಿ ವಿಮಾನ ನಿಲ್ದಾಣ ತಲುಪಲಾಗುತ್ತದೆ. ಈ ಸಾದನಹಳ್ಳಿ ಜಂಕ್ಷನ್ ಟ್ರಾಫಿಕ್‌ನಿಂದಾಗಿ ತ್ವರಿತ ವಾಹನಗಳಿಗೆ ತೊಂದರೆ ಆಗುತ್ತಿದೆ. ಕೆಲವು ಬಾರಿ ಸಮಯ ಸಾಕಷ್ಟು ವಿಳಂಬವಾಗುತ್ತಿದೆ.
ಟೆಂಡರ್ ಆಹ್ವಾನ, ಕಾಮಗಾರಿ ಆರಂಭ ಯಾವಾಗ?
ನಗರ ಪ್ರವೇಶಿಸುವವರಿಗೆ, ಏರ್‌ಪೋರ್ಟ್ ಕಡೆಗೆ ಹೋಗುವವರಿಗೆ ಅನುಕೂಲವಾಗುವಂತೆ ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕು ಎಂಬ ಬೇಡಿಕೆ ಇತ್ತು. ಅದೀಗ ಈಡೇರುವ ಕಾಲ ಸನ್ನಿಹಿತವಾಗಿದೆ. ಶೀಘ್ರವೇ ಮೇಲ್ಸೇತುವೆ ಕಾಮಗಾರಿ ಆರಂಭಿಸಲಾಗುವುದು. ಶೀಘ್ರವೇ ಟೆಂಡರ್ ಕರೆದು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಚಿವರಿಗೆ ಹೇಳಿದರು.
ನಗರದಿಂದ ಹೆಬ್ಬಾಳವರೆಗೆ ಸಂಚಾರ ದಟ್ಟಣೆಯಲ್ಲಿ ಬರುವ ವಾಹನಗಳು ಮುಂದೆ ವೇಗವಾಗಿ ಚಲಿಸುತ್ತವೆ. ನೋಡು ನೋಸುತ್ತಿದ್ದಂತೆ ನಿಧಾನವಾಗುವ ವಾಹನಗಳು ಸಾದನಹಳ್ಳಿಯಲ್ಲಿ ದಟ್ಟಣೆಯಲ್ಲಿ ನಿಲ್ಲಬೇಕಾಗುತ್ತದೆ. ಈ ಸಮಸ್ಯೆ ನಿವಾರಿಸಲು ಸರ್ಕಾರ, ಹೆದ್ದಾರಿ ಪ್ರಾಧಿಕಾರದ ಮೇಲ್ಸೇತುವೆ ಕ್ರಮ ಸ್ವಾಗತಾರ್ಹವೆಂದು ಕ್ಯಾಬ್ ಚಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications