ಅ. 28ರಂದು ನಾಟ್ಯ ಪರಂಪರ ದಶಮಾನೋತ್ಸವ -2023: ವಿಶೇಷ ಕಾರ್ಯಕ್ರಮಗಳ ವಿವರ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 19: ಭಾರತ ನೃತ್ಯೋತ್ಸವದ ಪ್ರತೀಕವಾದ 'ನಾಟ್ಯ ಪರಂಪರ ಉತ್ಸವ'ವು ಭಾರತ ಮಾತ್ರವಲ್ಲದೆ, ಯುಎಸ್, ರಷ್ಯಾ, ತೈವಾನ್, ಕೆನಡಾ ಮುಂತಾದೆಡೆಗಳ ಕುಚಿಪುಡಿ ಮತ್ತು ಇನ್ನಿತರ ನೃತ್ಯಶೈಲಿಗಳ ಖ್ಯಾತ ಕಲಾವಿದರ ನೃತ್ಯ ಪ್ರದರ್ಶನಗಳನ್ನು ನಡೆಸುತ್ತಾ ಬಂದಿದೆ.
ಕೋವಿಡ್‌ನಂತಹ ದುಸ್ತರ ಪರಿಸ್ಥಿತಿಯಲ್ಲೂ ಅಂತರ್ಜಾಲದ ಮೂಲಕ ಕಲೆಯನ್ನು ಜೀವಂತವಾಗಿಡಲು ಸಂಸ್ಥೆ ಪರಿಶ್ರಮಿಸಿದೆ. ಈ ನೃತ್ಯೋತ್ಸವವು, ಕಲಾರಸಿಕರ ಬೆಂಬಲ-ಸಹಾಯದ ಜೊತೆಗೆ, ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಮತ್ತು ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂತಾದ ಸರ್ಕಾರಿ ಸಂಸ್ಥೆಗಳ ಆಶ್ರಯ-ಪ್ರೋತ್ಸಾಹಗಳನ್ನು ಪಡೆದುಕೊಂಡಿದೆ.

ಇದೀಗ 'ನಾಟ್ಯ ಪರಂಪರ ದಶಮಾನೋತ್ಸವ -2023' ರ ಸಂಭ್ರಮಾಚರಣೆ ಇದೇ ಅಕ್ಟೋಬರ್ 28 ಶನಿವಾರ ಸಂಜೆ 6 ಗಂಟೆಗೆ ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ವೈವಿಧ್ಯಪೂರ್ಣ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸಮಾರಂಭದಲ್ಲಿ ರಾಜಮುಂಡ್ರಿಯ ಉತ್ತಮ ನಾಟ್ಯಾಚಾರ್ಯರಾದ ಹಿರಿಯ ಗುರು ಶ್ರೀ ಭಗವತುಲ ಮೋಹನ ರಾವ್ ಅವರ ಕಲಾಸೇವೆಯನ್ನು ಗುರುತಿಸಿ ಗೌರವಾರ್ಪಣೆ ಮತ್ತು ಕಥಕ್ ನೃತ್ಯ ದಂಪತಿಗಳಾದ ಖ್ಯಾತ ಕಲಾವಿದರಾದ ಹರಿ ಮತ್ತು ಚೇತನ ಅವರನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ವಾರ್ಷಿಕೋತ್ಸವ ಕಾರ್ಯಕ್ರಮದ ವಿಶೇಷ ಆಕರ್ಷಣೆ - 17 ನೇ ಶತಮಾನದ ಖ್ಯಾತ ಕವಿ ಶ್ರೀ ಮುನೆಪಲ್ಲಿ ಸುಬ್ರಮಣ್ಯ ಕವಿ ವಿರಚಿತ 'ಭವ ನುತ' - ಸಂಪೂರ್ಣ ಆಧ್ಯಾತ್ಮ ರಾಮಾಯಣದ ಕಥೆಯ ಸುತ್ತ ಹೆಣೆಯಲಾದ ಕುಚಿಪುಡಿ ನಾಟ್ಯದ ನೃತ್ಯರೂಪಕ ಪ್ರದರ್ಶನ ಏರ್ಪಡಿಸಲಾಗಿದೆ. ಈ ವಿಶಿಷ್ಟ ನೃತ್ಯರೂಪಕದ ಪರಿಕಲ್ಪನೆ-ನಿರ್ಮಾಣ ಮತ್ತು ನೃತ್ಯ ಸಂಯೋಜನೆ ಆಚಾರ್ಯ ದೀಪಾ ನಾರಾಯಣನ್ ಸಶೀಂದ್ರನ್ ಅವರದಾಗಿದ್ದು, ಸಂಗೀತ ಸಂಯೋಜನೆ- ಗುರುಮೂರ್ತಿ ನಡೆಸಲಿದ್ದಾರೆ.

ನಾಲ್ಕು ದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಸುಮಾರು ಐದುನೂರು ವರ್ಷಗಳ ಇತಿಹಾಸವುಳ್ಳ ಕೂಚಿಪುಡಿ ನೃತ್ಯಶೈಲಿಯ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಎರಡನೆಯ ಪರಂಪರೆಗೆ ಸೇರಿದವರು. ತಮ್ಮ ಅಸಂಖ್ಯಾ ನೃತ್ಯ ಪ್ರದರ್ಶನಗಳಿಂದ ಖ್ಯಾತರಾದವರು.
ತಮ್ಮ ಕೂಚಿಪುಡಿ ಪರಂಪರಾ ಫೌಂಡೆಶನ್ ' ಮೂಲಕ ನೃತ್ಯಾಭಿವೃದ್ಧಿಯ ಸಾಧನೆಯಲ್ಲಿ ನಿರತರಾದ ದೀಪಾ, ಪರಿಣಿತ ಅಭಿನಯ- ಮನೋಜ್ಞ ನೃತ್ಯಪ್ರಸ್ತುತಿಗಳಿಂದ ಕಲಾರಸಿಕರ ಗಮನ ಸೆಳೆದಿದ್ದಾರೆ. ಶಂಕರಾಭರಣ ಚಲನಚಿತ್ರ ಖ್ಯಾತಿಯ ಮಂಜುಭಾರ್ಗವಿ ಅವರ ಪ್ರಧಾನಶಿಷ್ಯರಾಗಿ ಅವರಲ್ಲಿ ಸತತ ಇಪ್ಪತ್ತೈದು ವರುಷಗಳು ನಾಟ್ಯಶಿಕ್ಷಣ ಪಡೆದು ಗುರುಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಖ್ಯಾತ ಕೂಚಿಪುಡಿ ನಾಟ್ಯಗುರು-ನೃತ್ಯ ಕಲಾವಿದೆ, ಸಂಯೋಜಕಿಯಾದ ಇವರು, 'ಕೂಚಿಪುಡಿ ಪರಂಪರ ಫೌಂಡೆಶನ್ ಟ್ರಸ್ಟ್'ನ ಲೈಫ್ ಟ್ರಸ್ಟಿಯಾಗಿ ವರ್ಷಪೂರ್ತಿ ನಿರಂತರ ಒಂದಲ್ಲ ಒಂದು ನೃತ್ಯ ಚಟುವಟಿಕೆಗಳಲ್ಲಿ ಕಾರ್ಯನಿರತರಾಗಿದ್ದಾರೆ.












Click it and Unblock the Notifications