ನ. 19 & 20 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ದೇಶೀಯ ತಳಿಗಳ ಡಾಗ್ ಶೋ
ಬೆಂಗಳೂರು, ನವೆಂಬರ್ 17: ಬೆಂಗಳೂರು ಕೆನಾಲ್ ಕ್ಲಬ್‌ನ 53 ಹಾಗೂ 54ನೇ ಚಾಂಪಿಯನ್ ಶಿಪ್ ಡಾಗ್ ಶೋ ಹಾಗೂ ಸಿಲಿಕಾನ್‌ಸಿಟಿ ಕೆನಾಲ್ ಕ್ಲಬ್‌ನ 125 ಹಾಗೂ 126ನೇ ಚಾಂಪಿಯನ್ ಶಿಪ್ ಡಾಗ್ ಶೋ ಜಂಟಿಯಾಗಿ ನವೆಂಬರ್ 19 ಹಾಗೂ 20ರಂದು ನಡೆಯಲಿದೆ ಎಂದು ಬೆಂಗಳೂರು ಕೆನಾಲ್ ಕ್ಲಬ್ ತಿಳಿಸಿದೆ.
ದೇವನಹಳ್ಳಿ ಬಳಿ ಇರುವ ಹೀರಾ ಹೀರಾ ಫಾರ್ಮ್ಸ್‌ನಲ್ಲಿ ಚಾಂಪಿಯನ್ ಶಿಪ್ ಡಾಗ್ ಶೋ ನಡೆಯಲಿದೆ ಎಂದು ಬೆಂಗಳೂರು ಕೆನಾಲ್ ಕ್ಲಬ್ ಕಾರ್ಯದರ್ಶಿ ಸಂತೋಶ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಶ್ವಾನಗಳ ತಳಿಯ ಕುರಿತಾಗಿ ಸ್ಪರ್ಧೆ ನಡೆಯುತ್ತಿರುವುದು ಈ ಚಾಂಪಿಯನ್ ಶಿಪ್‌ನ ವಿಶೇಷ. ಶ್ವಾನಗಳ ತಳಿ ಹಾಗೂ ಅದರ ಪರಿಶುದ್ಧತೆಯ ಆಧಾರದ ಮೇಲೆ ಜಪಾನ್, ನೆದರ್ಲ್ಯಾಂಡ್‌ನ ಮುಂತಾದ ದೇಶಗಳಿಂದ ಬಂದ ತೀರ್ಪುಗಾರರು ವಿಜೇತ ಶ್ವಾನವನ್ನು ಆಯ್ಕೆಮಾಡಲಿದ್ದಾರೆ" ಎಂದು ತಿಳಿಸಿದರು.

"ಭಾರತೀಯ ತಳಿಯ ಜನಪ್ರಿಯ ಶ್ವಾನ ಮುಧೋಳ ಈ ಚಾಂಪಿಯನ್ ಶಿಪ್‌ನ ಮುಖ್ಯ ಆಕರ್ಷಣೆ ಆಗಿರಲಿದೆ. ಭಾರತೀಯ ಸೇನೆ ಹಾಗೂ ಪ್ರಧಾನ ಮಂತ್ರಿಯವರ ರಕ್ಷಣಾ ತಂಡದಲ್ಲಿ ಮುಧೋಳ ತಳಿಯ ಶ್ವಾನವನ್ನು ಹೆಚ್ಚು ಬಳಸಲಾಗುತ್ತದೆ. ಈ ತಳಿಯ ಅಂದ ಚಂದ, ಮೈಕಟ್ಟು, ರೂಪ ಹೇಗಿರಬೇಕು..? ಯಾವ ವಯಸ್ಸಿಗೆ ಅದರ ಬೆಳವಣಿಗೆ ಎಷ್ಟಿರಬೇಕು..? ಎನ್ನುವ ಕುರಿತಾಗಿಯೂ ಈ ಕಾರ್ಯಕ್ರಮದಲ್ಲಿ ವಿಶ್ಲೇಷಿಸಲಾಗುವುದು. ಜೊತೆಗೆ ನಮ್ಮ ದೇಶದ ತಳಿಗಳನ್ನು ಗುರುತಿಸಿ, ಅವುಗಳನ್ನು ಸಾಕಾಣಿಕೆ ಮಾಡಲು ಪ್ರೇರೇಪಿಸುವುದು ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ," ಎಂದರು.
ಬೆಂಗಳೂರು ಕೆನಾಲ್ ಕ್ಲಬ್‌ನ ಅಮೃತ್ ಹಿರಣ್ಯ ಈ ಬಗ್ಗೆ ಮಾಹಿತಿ ನೀಡಿದ್ದು, "ಡಾಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿದ ಶ್ವಾನಗಳ ತಳಿ ಹಾಗೂ ಯಾವ ಶ್ವಾನ ತನ್ನ ಮೂಲ ತಳಿಯೊಂದಿಗೆ ಹೆಚ್ಚು ಹೊಂದುತ್ತದೆಯೋ ಅದಕ್ಕೆ ಬಹುಮಾನ ನೀಡಲಾಗುವುದು. ಈ ಮೂಲಕ ನೈತಿಕ ಸಂತಾನೋತ್ಪತ್ತಿ ಹಾಗೂ ದೇಶೀಯ ತಳಿಗಳಾದ ಮುಧೋಳ್, ರಾಜಪಾಳ್ಯಂ, ಕಣ್ಣಿ, ಕೊಂಬಾಯ್ ಮುಂತಾದ ತಳಿಯ ಶ್ವಾನ ಸಾಕಾಣಿಕೆಯನ್ನು ಪ್ರೋತ್ಸಾಹಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಚಾಂಪಿಯನ್ ಶಿಪ್ ಡಾಗ್ ಶೋ ಜೊತೆಗೆ ಭಾನುವಾರ (ನವೆಂಬರ್ 20) ರಂದು ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಜೊತೆಗೆ ಮಕ್ಕಳಲ್ಲಿ ಶ್ವಾನಗಳೆಡೆಗೆ ಪ್ರೀತಿ ಬೆಳೆಸುವ ದೃಷ್ಟಿಯಿಂದ ಅವುಗಳಿಗೆ ಬಾಚುವುದು, ಅವುಗಳ ಕಿವಿ-ಉಗುರಗಳನ್ನು ಶುದ್ಧಗೊಳಿಸುವುದು, ಅವುಗಳ ಬಗ್ಗೆ ಅರಿಯುವುದು ಮುಂತಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ" ಎಂದರು.
ವಿಶೇಷವಾದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಲವಾರು ತಳಿಯ ಶ್ವಾನಗಳ ಜೊತೆಗೆ ದೇಶೀಯ ತಳಿಯಾದ ಮುಧೋಳ ತಳಿಯ ಶ್ವಾನವನ್ನು ಕಂಡು ಸಂಭ್ರಮಿಸುವ ಅವಕಾಶ ಶ್ವಾನಪ್ರಿಯರಿಗೆ ದೊರಕಲಿದೆ. ಇನ್ನು ಮುಧೋಳದಿಂದ ಆಗಮಿಸಿದ್ದ ಮುಧೋಳ ತಳಿಗಳ ಬ್ರೀಡರ್‌ಗಳು ತಾವು ಸಾಕಿರುವ ಶ್ವಾನಗಳ ಜೊತೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು.












Click it and Unblock the Notifications