ನವೆಂಬರ್ 11ರಂದು ಮೋದಿ ಬೆಂಗಳೂರು ಭೇಟಿ, ಕಾರ್ಯಕ್ರಮಗಳು
ಬೆಂಗಳೂರು, ಅಕ್ಟೋಬರ್ 17; ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಭೇಟಿಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನವೆಂಬರ್ 11ರ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಎರಡೂ ಕಾರ್ಯಕ್ರಮಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿವೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೇ ವಿಮಾನ ನಿಲ್ದಾಣದ ಅವರಣದಲ್ಲಿ ನಿರ್ಮಾಣವಾಗಿರುವ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ನಳಿನ್ ಕುಮಾರ್ ಕಟೀಲ್ ಸಭೆ; ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ನಳಿನ್ ಕುಮಾರ್ ಕಟೀಲ್ ಸಭೆ ನಡೆಸಿದರು.
ಈ ಸಭೆಯಲ್ಲಿ ಸಚಿವರಾದ ಡಾ. ಅಶ್ವಥ್ ನಾರಾಯಣ, ಮಾಜಿ ಸಚಿವರಾದ ಡಿ. ವಿ. ಸದಾನಂದ ಗೌಡ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರಾಜೇಶ್ ಜಿ. ವಿ., ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವತ್ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

2ನೇ ಟರ್ಮಿನಲ್ ನಿರ್ಮಾಣ; ದೇಶದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣವೂ ಒಂದು. ಪ್ರತಿದಿನ ಲಕ್ಷಾಂತರ ಜನರು ಆಗಮಿಸಿದರೂ ವಿಮಾನ ನಿಲ್ದಾಣದಲ್ಲಿ ಒಂದೇ ಟರ್ಮಿನಲ್ ಇತ್ತು.
2019ರಲ್ಲಿ 2ನೇ ಟರ್ಮಿನಲ್ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಯಿತು. ಸುಮಾರು 13 ಸಾವಿರ ಕೋಟಿ ವೆಚ್ಚದಲ್ಲಿ ಈ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. 2.54 ಲಕ್ಷ ಚದರ ಮೀಟರ್ ಪ್ರದೇಶದಲ್ಲಿ ಎರಡು ಹಂತದಲ್ಲಿ 2ನೇ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ವಿಮಾನ ನಿಲ್ದಾಣದ 1.6 ಕೋಟಿ ಪ್ರಯಾಣಿಕರ ಹೊರೆ ತಗ್ಗಿಸಲು ಟರ್ಮಿನಲ್ 2 ನಿರ್ಮಾಣ ಮಾಡಲಾಗಿದೆ. ಟರ್ಮಿನಲ್ ಉದ್ಘಾಟನೆ ಬಳಿಕ ಪ್ರತಿ ಗಂಟೆಗೆ 90 ವಿಮಾನಗಳ ಸಂಚಾರಕ್ಕೆ ಅನುಕೂಲವಾಗಲಿದೆ. 2008ರಲ್ಲಿ ಉದ್ಘಾಟನೆಯಾದ ಮೊದಲ ಟರ್ಮಿನಲ್‌ನಲ್ಲಿ ವಾರ್ಷಿಕ 2 ಕೋಟಿ ಪ್ರಯಾಣಿಕರ ಸಂಚಾರಕ್ಕೆ ವ್ಯವಸ್ಥೆ ಇದೆ.
ಕೆಐಎನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತಿದೆ. ಚೆಕ್‌ಇನ್, ಇಮಿಗ್ರೇಶನ್, ಭದ್ರತಾ ತಪಾಸಣೆ, ಬ್ಯಾಗೇಜ್ ಹೀಗೆ ನಾನಾ ಪ್ರಕ್ರಿಯೆಗಳಿಂದ ವಿಳಂಬವಾಗುತ್ತಿದೆ. ಇದಕ್ಕೆಲ್ಲಾ ಪರಿಹಾರ ಎಂಬಂತೆ 2ನೇ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಈ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುತ್ತಿದ್ದಾರೆ.
2005ರಲ್ಲಿ ದೇವನಹಳ್ಳಿಗೆ ವಿಮಾನ ನಿಲ್ದಾಣವನ್ನು ಎಚ್‌ಎಎಲ್‌ನಿಂದ ಸ್ಥಳಾಂತರ ಮಾಡುವಾಗಲೇ ಟರ್ಮಿನಲ್ 2 ಪರಿಕಲ್ಪನೆಯನ್ನು ಹೊಂದಲಾಗಿತ್ತು. ಸಂಚಾರ ದಟ್ಟಣೆ, ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಈಗ ಟರ್ಮಿನಲ್ 2 ನಿರ್ಮಾಣಗೊಂಡಿದೆ.
2ನೇ ಟರ್ಮಿನಲ್ ಉದ್ಘಾಟನೆಯಾದ ನಂತರ ಕೆಂಪೇಗೌಡ ವಿಮಾನ ನಿಲ್ದಾಣದ ವಾರ್ಷಿಕ ಸಾಮರ್ಥ್ಯ 2.5 ಕೋಟಿ ಪ್ರಯಾಣಿಕರ ನಿರ್ವಹಣೆಗೆ ಏರಿಕೆಯಾಗಲಿದೆ. ವಿಮಾನ ನಿಲ್ದಾಣದ ರನ್ ವೇ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿಯೂ ಕಾರ್ಯ ನಿರ್ವಹಣೆ ಮಾಡುವ ವಿಶೇಷತೆ ಹೊಂದಿದೆ.
ಟರ್ಮಿನಲ್ ನಿರ್ಮಾಣದ ಗುತ್ತಿಗೆಯನ್ನು ಲಾರ್ಸೇನ್ ಆಂಡ್ ಟೌಬ್ರೋ ಕಂಪನಿಗೆ ನೀಡಲಾಗಿದೆ. ಯೋಜನೆ ವಾಸ್ತು ವಿನ್ಯಾಸವನ್ನು ಸ್ಕಿಡ್ ಮೋರ್, ಓವಿಂಗ್ಸ್ ಮತ್ತು ಮೆರಿಲ್ ಮಾಡಿದ್ದಾರೆ. ಯೋಜನೆಯ ಪ್ರಮುಖವಾಗಿ ಟರ್ಮಿನಲ್‌ನೊಳಗೆ ಉದ್ಯಾನ, ಪರಿಸರ ನಿರ್ವಹಣೆ ಮತ್ತು ಕರ್ನಾಟಕದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಒಳಗೊಂಡಿದೆ. ಟರ್ಮಿನಲ್‌ನೊಳಗೆ ಮಲ್ಪಿ ಲೆವೆಲ್ ಕಾರ್ ಪಾರ್ಕಿಂಗ್ ಸೌಲಭ್ಯ ಸಹ ಇದೆ.












Click it and Unblock the Notifications