ಇಂದಿರಾ ಜನ್ಮ ದಿನಾಚರಣೆಯಲ್ಲಿ ನಮೋ ಮಂತ್ರ!
ಬೆಂಗಳೂರು, ನ. 20 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಕಾಂಗ್ರೆಸ್ ನಾಯಕರು ಸೂಕ್ತ ತಿರುಗೇಟು ನೀಡಿದ್ದಾರೆ. ಇಂದಿರಾಗಾಂಧಿ ಜನ್ಮ ದಿನಾಚರಣೆ ಹೆಸರಿನಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ಒಟ್ಟಾಗಿ ಮೋದಿ ಮಂತ್ರ ಜಪಿಸಿದರು. ನರೇಂದ್ರ ಮೋದಿ ದೇಶದ ಪ್ರಧಾನಿಯಾದರೆ ರಕ್ತಪಾತವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ಕಾಂಗ್ರೆಸ್ ಇಂದಿರಾಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ ಮೋದಿ ಬೆಂಗಳೂರಿನಲ್ಲಿ ಮಾಡಿದ ಆರೋಪಗಳಿಗೆ ತಿರುಗೇಟು ನೀಡಿದರು.

ಸಮಾರಂಭದಲ್ಲಿ ಮತನಾಡಿದ ಸಿಎಂ ಸಿದ್ದರಾಮಯ್ಯ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ ದೇಶದಲ್ಲಿ ರಕ್ತಪಾತ ನಡೆಯುತ್ತದೆ. ಮೋದಿ ಒಬ್ಬ ಕೋಮುವಾದಿ. ಅವರು ಮುಖ್ಯಮಂತ್ರಿಯಾದ ಬಳಿಕ ಗುಜರಾತ್‌ನಲ್ಲಿ ನರಮೇಧ ನಡೆದಿದೆ. ಮೋದಿ ದೇಶದ ಪ್ರಧಾನಿಯಾದರೆ ಜಾತಿ, ಧರ್ಮಗಳ ನಡುವೆ ಭೇದ ಹುಟ್ಟಿಸುವ ಸರ್ಕಾರ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಮೋದಿ ಮಾಡಿದ ಭಾಷಣದಲ್ಲಿ ದೂರದೃಷ್ಟಿಯ ಅಂಶಗಳು ಇರಲಿಲ್ಲ. ಕಾಂಗ್ರೆಸ್ ನಾಯಕರನ್ನು ಬೈಯುವುದನ್ನೇ ಮೋದಿ ಭಾಷಣ ಎಂದು ಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿ ತಮ್ಮ ಪಕ್ಷದ ಹಿಂದಿನ ಸರ್ಕಾರ ಕರ್ನಾಟಕದಲ್ಲಿ ಮಾಡಿದ ಭ್ರಷ್ಟಾಚಾರದ ಕುರಿತು ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.(ಮೋದಿ ಭಾಷಣದಲ್ಲಿ ಹೇಳಿದ್ದೇನು)
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮಾತನಾಡಿ, ನರೇಂದ್ರ ಮೋದಿ ಸಮಾವೇಶಕ್ಕೆ 3 ಲಕ್ಷ ಜನ ಬಂದಿದ್ದರು ಎಂದು ಬಿಜೆಪಿಯವರು ಸುಳ್ಳು ಹೇಳಿದ್ದಾರೆ. ವಾಸ್ತವದಲ್ಲಿ ಸಮಾವೇಶಕ್ಕೆ 80 ಸಾವಿರ ಕುರ್ಚಿ ಹಾಕಲಾಗಿತ್ತು. ಸಮಾವೇಶಕ್ಕೆ 10 ರೂ. ಟಿಕೆಟ್ ಕೊಟ್ಟು ಒಂದು ಲಕ್ಷ ಜನರಷ್ಟೇ ಬಂದಿದ್ದರು ಎಂದರು. ನರೇಂದ್ರ ಮೋದಿ ರಾಜ್ಯಕ್ಕೆ ಬಂದರು, ಹೋದರು. ಬಿಜೆಪಿ ನಾಯಕರೇ ನಿಮ್ಮ ಹಣೆಬರಹ ಏನು? ಎಂದು ಪ್ರಶ್ನಿಸಿದ ಪರಮೇಶ್ವರ್, ಮೋದಿ ಅತ್ತ ಹೋದ ಮೇಲೆ ಮತ್ತೆ ನೀವೆಲ್ಲಾ ಮತ್ತೆ ಜೀರೊ ಲೆವೆಲ್‌ಗೆ ಬಂದಿದ್ದೀರಿ ಎಂದು ಕುಟುಕಿದರು.
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮಹಾತ್ಮ ಗಾಂಧಿಯನ್ನು ಗುಂಡಿಕ್ಕಿ ಕೊಂದ ಗೋಡ್ಸೆಗೂ ನರೇಂದ್ರ ಮೋದಿಗೂ ಯಾವುದೇ ವ್ಯತ್ಯಾಸವಿಲ್ಲ ನಮೋ ಮೋದಿ ಎಂದು ಹೆಸರಿಡುವ ಬದಲು ನರಮೇಧ ಮೋದಿ ಎಂಬ ಹೆಸರು ಹೆಚ್ಚು ಸೂಕ್ತವೆನಿಸುತ್ತದೆ ಎಂದು ವಾಗ್ದಾಳಿ ನಡೆಸಿದರು. ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರನ್ನೇ ಪಕ್ಕಕ್ಕೆ ತಳ್ಳಿದ ಮೋದಿ ಬೆಂಗಳೂರಿನ ಭಾಷಣ ದೊಂಬರಾಟದಂತಿದ್ದು ಎಂದರು.











Click it and Unblock the Notifications