ಚುನಾವಣೆಗೆ ನಂದನ್ ನಿಲೇಕಣಿ ತಯಾರಿ ಆರಂಭ!
ಬೆಂಗಳೂರು, ಜ.21 : ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿರುವ ಆಧಾರ್ ಮುಖ್ಯಸ್ಥ ನಂದನ್ ನಿಲೇಕಣಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಸೋಮವಾರ ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳುವ ಮೂಲಕ ಅವರು, ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.
ಸೋಮವಾರ ಜೆ.ಪಿ.ನಗರದಲ್ಲಿರುವ ಕೆಪಿಸಿಸಿ ಹಿಂದುಳಿದ ಘಟಕದ ಅಧ್ಯಕ್ಷ ವೇಣುಗೋಪಾಲ್ ಅವರ ನಿವಾಸದಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದ 16 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಯಿತು. ಸಭೆಯಲ್ಲಿ ನಂದನ್ ನಿಲೇಕಣಿ ಭಾಗವಹಿಸಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಚುನಾವಣೆ ಸಿದ್ಧತೆ ಕುರಿತು ಚರ್ಚೆ ನಡೆಸಲಾಗಿದೆ. [ಬದಲಾವಣೆಗೆ ರಾಜಕೀಯ ಉತ್ತಮ ವೇದಿಕೆ : ನಿಲೇಕಣಿ]

ಸಭೆಯ ನಂತರ ಶಾಸಕರಾದ ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್), ಲೇಔಟ್ ಕೃಷ್ಣಪ್ಪ (ವಿಜಯನಗರ), ಪ್ರಿಯಕೃಷ್ಣ (ಗೋವಿಂದರಾಜ ನಗರ), ಆರ್.ವಿ.ದೇವರಾಜ್ (ಚಿಕ್ಕಪೇಟೆ) ಹಾಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳಾದ ಪ್ರೊ.ಬಿ.ಕೆ. ಚಂದ್ರಶೇಖರ್ (ಬಸವನಗುಡಿ), ವೇಣುಗೋಪಾಲ್ (ಜಯನಗರ), ಚೇತನ್‌ಗೌಡ (ಪದ್ಮನಾಭನಗರ), ಕುಪೇಂದ್ರ ರೆಡ್ಡಿ (ಬೊಮ್ಮನಹಳ್ಳಿ) ಅವರ ನಿವಾಸಕ್ಕೆ ತೆರಳಿ ನಿಲೇಕಣಿ ಮಾತುಕತೆ ನಡೆಸಿದರು.
ನಂದನ್ ನಿಲೇಕಣಿ ಸ್ಪರ್ಧೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತುಗಳ ಹಿನ್ನಲೆಯಲ್ಲಿ, ವೇಣುಗೋಪಾಲ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ, ತಾವು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ನಂದನ್ ನಿಲೇಕಣಿ ಮನವಿ ಮಾಡಿದರು.[ನಿಲೇಕಣಿಗೆ ಸ್ಥಳೀಯ ಕಾಂಗ್ರೆಸಿಗರ ವಿರೋಧ]
ಕಾಂಗ್ರೆಸ್ ಪಕ್ಷವೇ ಏಕೆ : ನನಗೆ ಕಾಂಗ್ರೆಸ್ ಪಕ್ಷ ಎಂದರೆ ಅಭಿಮಾನ. ನನ್ನ ತಂದೆ ಸಹ ಕಾಂಗ್ರೆಸ್ ಪರವಾದ ನಿಲುವು ಹೊಂದಿದ್ದರು. ಕಾಂಗ್ರೆಸ್ ಪಕ್ಷ ನನಗೆ ಆಧಾರ್ ನಂತರ ಬಹುದೊಡ್ಡ ಜವಾಬ್ದಾರಿ ನೀಡಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಮೂಲಕವೇ ನಾನು ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ನಿಲೇಕಣಿ ಹೇಳಿದರು. [ಯುವಕರ ಮತ ಬೇಟೆಗೆ ನಿಲೇಕಣಿ, ಅನಂತ್ ತಂತ್ರ]
ನಾನು ಹುಟ್ಟಿದ್ದು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ, ವಾಸ ಮಾಡುತ್ತಿದ್ದುದು ಮಾಗಡಿ ರಸ್ತೆಯಲ್ಲಿ. ನಾನೂ ಬೆಂಗಳೂರಿನವನೇ. ಆದ್ದರಿಂದ ನನಗೆ ನಿಮ್ಮೆಲ್ಲರ ಬೆಂಬಲ ಬೇಕು ಎಂದು ನಂದನ್ ನಿಲೇಕಣಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ಸಿಗರಿಗೆ ಮನವಿ ಮಾಡಿದರು.
ನಾನು ಬಯಸಿದ್ದರೆ ನೇರವಾಗಿ ರಾಜ್ಯಸಭಾ ಸದಸ್ಯನಾಗಬಹುದಿತ್ತು. ಆದರೆ, ನೇರವಾಗಿ ಜನರಿಂದ ಆಯ್ಕೆಯಾಗಬೇಕು ಎಂಬ ಕಾರಣದಿಂದ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗುತ್ತಿದ್ದೇನೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ನಿಲೇಕಣಿ ಸಭೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications