Namma Metro: ಆರ್‌ವಿ ರಸ್ತೆ-ಬೊಮ್ಮಸಂದ್ರ ಮೆಟ್ರೋ ಹಳದಿ ಮಾರ್ಗ ಆರಂಭ ಯಾವಾಗ: ಇಲ್ಲಿದೆ ಮಾಹಿತಿ
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಹಳದಿ ಮಾರ್ಗವು ಫೆಬ್ರವರಿ 2024 ರ ವೇಳೆಗೆ ಪ್ರಾರಂಭವಾಗಲಿದೆ ಎಂದು ಲೋಕಸಭೆಯ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬುಧವಾರ ಹೇಳಿದ್ದಾರೆ.
ಈ ಮೊದಲಿನಂತೆ ಈ ಬಾರಿ ಮೆಟ್ರೋ ಸಂಪರ್ಕದ ಆರಂಭದ ಗಡುವನ್ನು ತಪ್ಪಿಸುವುದಿಲ್ಲ ಮತ್ತು ನಿರ್ಧರಿಸಿದ ದಿನಾಂಕದಂದು ಪ್ರಾರಂಭಿಸಲಾಗುವುದು ಎಂದು ಮೆಟ್ರೋ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಬೆಂಗಳೂರನ್ನು ಮಧ್ಯ ಮತ್ತು ಉತ್ತರ ಬೆಂಗಳೂರಿಗೆ ಸಂಪರ್ಕಿಸಲು ಹಳದಿ ಮಾರ್ಗದ ಮೆಟ್ರೋ ಮುಖ್ಯವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು. ಈ ಮೆಟ್ರೋ ಮಾರ್ಗವು 18.8 ಕಿಮೀ ಉದ್ದವಿದ್ದು ಬೊಮ್ಮಸಂದ್ರವನ್ನು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ ಮತ್ತು ಇದು 16 ನಿಲ್ದಾಣಗಳನ್ನು ಒಳಗೊಂಡಿದೆ. ಈ ಮೆಟ್ರೋ ಮಾರ್ಗದ ಕಾಮಗಾರಿ 2017 ರಲ್ಲಿ ಪ್ರಾರಂಭವಾಗಿದ್ದು, ಮುಗಿಯುವ ಹಂತದಲ್ಲಿದೆ.
2021ರಲ್ಲೇ ಆರಂಭವಾಗಬೇಕಿತ್ತು
ಆರಂಭಿಕ ಯೋಜನೆಯ ಪ್ರಕಾರ, 2021 ರ ಅಂತ್ಯದ ವೇಳೆಗೆ ಈ ಮಾರ್ಗವನ್ನು ತೆರೆಯಬೇಕಿತ್ತು. ಆದರೆ ಭೂಸ್ವಾಧೀನ ಸಮಸ್ಯೆಗಳು, ಕೋವಿಡ್-19 ಲಾಕ್‌ಡೌನ್, ಜಯದೇವ ಆಸ್ಪತ್ರೆ ಬಳಿಯ ಬಹುಮಹಡಿ ಮೆಟ್ರೋ ನಿಲ್ದಾಣ ಮತ್ತು ಇತರ ಹಲವಾರು ಸವಾಲುಗಳು ಯೋಜನೆಯನ್ನು ವಿಳಂಬಗೊಳಿಸಿದವು.
"ಫೆಬ್ರವರಿ 2024 ರ ವೇಳೆಗೆ ಮೆಟ್ರೋ ಲಿಂಕ್ ಖಂಡಿತವಾಗಿಯೂ ಕಾರ್ಯನಿರ್ವಹಿಸಲಿದೆ ಎಂದು ಮೆಟ್ರೋ ಅಧಿಕಾರಿಗಳು ಈಗ ಭರವಸೆ ನೀಡಿದ್ದಾರೆ" ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು. ಒಟ್ಟು 16 ನಿಲ್ದಾಣಗಳ ಪೈಕಿ 15 ನಿಲ್ದಾಣಗಳಲ್ಲಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು. ಉಳಿದ ಕಾಮಗಾರಿ ಈ ವರ್ಷಾಂತ್ಯಕ್ಕೆ ಮುಗಿಯಲಿದೆ.
ಐಟಿ ದಿಗ್ಗಜ ಇನ್ಫೋಸಿಸ್ ಈ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ನಿಲ್ದಾಣಕ್ಕೆ 180 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಭರವಸೆ ನೀಡಿದೆ ಎಂದು ಅವರು ಹೇಳಿದರು. ಹಳದಿ ಮಾರ್ಗದ ಮೆಟ್ರೋವು ಸಿಲ್ಕ್ ಬೋರ್ಡ್, ಜಯದೇವ ಮತ್ತು ಆರ್ ವಿ ರಸ್ತೆಯಲ್ಲಿ ಮೂರು ಇಂಟರ್‌ಚೇಂಜ್ ನಿಲ್ದಾಣಗಳನ್ನು ಹೊಂದಿರಲಿದೆ.
ಇದು ಪ್ರಯಾಣಿಕರಿಗೆ ಪಿಂಕ್, ಹಸಿರು ಮತ್ತು ನೇರಳೆ ಮೆಟ್ರೋ ಮಾರ್ಗಗಳಿಗೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಹಳದಿ ಮಾರ್ಗ ಮೆಟ್ರೋವು ಪಕ್ಕದ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸುಮಾರು 2.5 ಲಕ್ಷ ನಗರ ನಿವಾಸಿಗಳಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಫೋಟೊ ಕೃಪೆ (@IndexKarnataka)












Click it and Unblock the Notifications