ಮೆಟ್ರೋ 3ನೇ ಹಂತ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಗೆ BMRCL ಚಾಲನೆ
ಬೆಂಗಳೂರು, ಏಪ್ರಿಲ್, 08: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ದಿನದಿಂದ ದಿನಕ್ಕೆ ಪ್ರಸಿದ್ದಿ ಪಡೆಯುತ್ತಿದೆ. ಸಾರ್ವಜನಿಕರು, ಉದ್ಯೋಗಿಗಳ ಅಚ್ಚುಮೆಚ್ಚಿನ ಸಾರಿಗೆಗಳಲ್ಲಿ ಈ ನಮ್ಮ ಮೆಟ್ರೋವೂ ಒಂದಾಗಿದೆ. ಇನ್ನು ಕೆಲವು ಮಾರ್ಗಗಗಳ ಮೆಟ್ರೋದಲ್ಲಂತೂ ಪ್ರತಿನಿತ್ಯ ಜನಜಂಗುಳಿಯೇ ಇರುತ್ತದೆ. ಮತ್ತೊಂದೆಡೆ ಹೊಸ ಮಾರ್ಗಗಳಲ್ಲಿಯೂ ಮೆಟ್ರೋ ಕಾಮಗಾರಿ ಚುರುಕು ಪಡೆಯುತ್ತಿವೆ. ಹಾಗೆಯೇ ಮೆಟ್ರೋ ಮೂರನೇ ಹಂತದ ಯೋಜನೆ ಕಾಮಗಾರಿ ಎಲ್ಲಿಗೆ ಬಂತು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೊಟ್ರೋ ಮೂರನೇ ಹಂತದ ಯೋಜನೆ ಆರಂಭಿಸಲು ಭೂಸ್ವಾಧಿನಕ್ಕೆ ಭಾರೀ ಅಡೆತಡೆಗಳು ಉಂಟಾಗುತ್ತಲೇ ಇವೆ. ಸಾಮಾನ್ಯವಾಗಿ ಯಾವುದೇ ಕಾಮಗಾರಿ ಆರಂಭವಾದರೂ ಅಡೆತಡೆಗಳು ಇದ್ದೇ ಇರುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ.

ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದು, ಈ ವೇಳೆಯೇ ಬಿಎಂಆರ್‌ಸಿಎಲ್ ಯೋಜನೆಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. 106 ಹೆಕ್ಟೇರ್ ವ್ಯಾಪ್ತಿಯಲ್ಲಿರುವ ಒಟ್ಟು 713 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಆದರೆ ಆ ಎಲ್ಲ ಆಸ್ತಿಗಳನ್ನು ಯೋಜನೆಗೆ ಬಿಟ್ಟುಕೊಡಲು ಮಾಲೀಕರು ಒಪ್ಪುತ್ತಿಲ್ಲ ಎನ್ನುವ ಮಾಹಿತಿ ಬಿಎಂಆರ್‌ಸಿಎಲ್ ಅಧಿಕಾರಿಗಳಿಂದ ಲಭ್ಯವಾಗಿದೆ.
ಮೆಟ್ರೋ 3ನೇ ಹಂತ ಇದು ಎರಡು ಎಲಿವೇಟೆಡ್ ಕಾರಿಡಾರ್‌ಗಳಲ್ಲಿ 21 ನಿಲ್ದಾಣಗಳನ್ನು ಹೊಂದಿದೆ. ಒಂದು ಜೆಪಿ ನಗರ 4ನೇ ಹಂತದಿಂದ ಹೊರವರ್ತುಲ ರಸ್ತೆಯ ಮೂಲಕ ಕೆಂಪಾಪುರದವರೆಗೆ 32.5 ಕಿಲೋ ಮೀಟರ್ ಮತ್ತು ಮತ್ತೊಂದೆಡೆ ಮಾಗಡಿ ರಸ್ತೆಯ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿಲೋ ಮೀಟರ್.
ರಾಜ್ಯ ಸಚಿವ ಸಂಪುಟವು ಈ ಯೋಜನೆಗೆ ಒಪ್ಪಿಗೆ ನೀಡಿದೆ. ಆದರೆ, ತಿಂಗಳಿನಿಂದ ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ. ಇದೀಗ ಲೋಕಸಭೆ ಚುನಾವಣೆ ಘೋಷಣೆ ಹಿನ್ನೆಲೆ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಅನುಮತಿ ದೊರೆಯುವ ಸಾಧ್ಯೆತೆಯಿದೆ ಎನ್ನಲಾಗುತ್ತಿದೆ.
ನಾವು ಈಗ ಮೊದಲ ಎಲಿವೇಟೆಡ್ ಕಾರಿಡಾರ್‌ನಲ್ಲಿ ಮಾತ್ರ ಆಸ್ತಿಗಳನ್ನು ಗುರುತಿಸಲು ಪ್ರಾರಂಭ ಮಾಡಿದ್ದೇವೆ. ಅವುಗಳ ಸ್ವಾಧೀನ ಆರಂಭಿಸಬೇಕಿದೆ. ನಮಗೆ ಇಲ್ಲಿ 106 ಹೆಕ್ಟೇರ್ ಬೇಕಾಗಿದ್ದು, ಅದರಲ್ಲಿ 75 ಹೆಕ್ಟೇರ್ ಡಿಪೋಗೆ ಮಾತ್ರ ಬೇಕಾಗುತ್ತದೆ. ಇದು ಎರಡೂ ಕಾರಿಡಾರ್‌ಗಳಿಗೆ ಸಾಮಾನ್ಯ ಆಗಿರುತ್ತದೆ ಎಂದು ಬಿಎಂಆರ್‌ಸಿಎಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂ ಸ್ವಾಧೀನಕ್ಕೆ ಬಿಎಂಆರ್‌ಸಿಎಲ್ ನೀಡುತ್ತಿರುವ ಅತ್ಯುತ್ತಮ ಪರಿಹಾರದಿಂದಾಗಿ, ಇದನ್ನು ಮಾರುಕಟ್ಟೆ ಮೌಲ್ಯಕ್ಕೆ ಹೋಲಿಕೆ ಮಾಡಿದರೆ ಭಾರೀ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಆಸ್ತಿಯನ್ನು ಮೆಟ್ರೋ ಯೋಜನೆಗಳಿಗೆ ನೀಡಲು ಉತ್ಸಾಹದಿಂದ ಮುಂದೆ ಬರುತ್ತಿದ್ದಾರೆ. ಆದರೆ, ಸದ್ಯ ಮೂರು ಕುಟುಂಬಗಳು ತಮ್ಮ ಆಸ್ತಿ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂರು ಆಸ್ತಿಗಳ ವಿಚಾರದಲಿ, ಯೋಜನೆಗಾಗಿ ಪ್ರತಿಯೊಂದು ಆಸ್ತಿಯ ಒಂದು ಭಾಗವನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲು ಮೆಟ್ರೋ ನಿರ್ಧರಿಸಿದೆ. ಇದರಿಂದ ತಮ್ಮ ಉಳಿದ ಭಾಗದ ಭೂಮಿ ಮೌಲ್ಯ ಕಡಿಮೆ ಆಗುತ್ತದೆ ಎಂದು ಅವರು ಭಾವಿಸಿದ್ದಾರೆ. ನಾವು ಸಂಪೂರ್ಣ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಅಥವಾ ಸ್ವಾಧೀನದಿಂದ ಸಂಪೂರ್ಣವಾಗಿ ಕೈಬಿಡಬೇಕು ಎಂದು ಅವರು ಬಯಸುತ್ತಿದ್ದಾರೆ. ಇನ್ನು ವಿನಾಯಕ ಲೇಔಟ್ ಮೆಟ್ರೊ ನಿಲ್ದಾಣಕ್ಕೆ ಎರಡು ಆಸ್ತಿಗಳು ಬೇಕಾಗಿವೆ ಎಂದು ತಿಳಿಸಿದ್ದಾರೆ.
ಈ ಮೂರು ಆಸ್ತಿಗಳು ಒಟ್ಟು 165.65 ಚದರ ಮೀಟರ್ ಇದ್ದು, 78.18 ಚದರ ಮೀಟರ್, 40.14 ಚದರ ಮೀಟರ್ ಮತ್ತು 47.33 ಚದರ ಮೀಟರ್ ವಿಸ್ತೀರ್ಣದ ಮೂರು ನಿರ್ದಿಷ್ಟ ಪ್ಲಾಟ್‌ಗಳಾಗಿವೆ.
ಇಂತಹ ಪರಿಸ್ಥಿತಿಯಲ್ಲಿ ಮೆಟ್ರೋ ಏನು ಮಾಡಲು ಯೋಜಿಸುತ್ತಿದೆ ಎಂಬುದು ಸ್ಪಷ್ಟ ಆಗಿಲ್ಲ. ಬಿಎಂಆರ್‌ಸಿಎಲ್ ಇದೀಗ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಮುಂದೆ ಏನು ಮಾಡಬಹುದು ಎಂದು ಯೋಜಿಸುತ್ತಿದೆ ಮತ್ತೊಬ್ಬ ಬಿಎಂಆರ್‌ಸಿಎಲ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications