Namma Metro: ವಾಟ್ಸಾಪ್ ಟಿಕೆಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ, ಪ್ರಯಾಣಿಕರ ಪರದಾಟ
ಬೆಂಗಳೂರು, ಸೆಪ್ಟಂಬರ್ 28: ಬೆಂಗಳೂರು ಮೆಟ್ರೋ ರೈಲು ವೇಗದ ಮತ್ತು ಸುರಕ್ಷಿತ ಸಾರಿಗೆಯಾಗಿದೆ. ಬಿಎಂಟಿಸಿ ಬಳಿಕ ಜನರು ಹೆಚ್ಚು ಮೆಟ್ರೊ ಸಾರಿಗೆ ಮೇಲೆ ಅವಲಂಬನೆ ಆಗಿದ್ದಾರೆ. ಹಳದಿ ಮಾರ್ಗ ಲೋಕಾರ್ಪಣೆ ಬಳಿಕ ದಿನದಿಂದ ದಿನಕ್ಕೆ ಮೆಟ್ರೋ ಏರುವವರ ಸಂಖ್ಯೆ ಏರಿಕೆ ಆಗಿದೆ. ಟೋಕನ್ ಟಿಕೆಟ್ ಖರೀದಿಸಲು ಹೆಚ್ಚು ಸಮಯ ಕಾಯಬೇಕಿದೆ. ಈ ಮಧ್ಯೆ ನೆನ್ನೆ ಶನಿವಾರ (ಸೆಪ್ಟಂಬರ್ 27) ವಾಟ್ಸಾಪ್ ಟಿಕೆಟ್ ಸೇವೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಕಿರಿಕಿರಿ ಉಂಟಾಗಿದೆ.
ಬೆಂಗಳೂರು ಸಂಚಾರ ದಟ್ಟಣೆಯಿಂದ ಕಿರಿ ಕಿರಿ ಅನುಭವಿಸುತ್ತಿರುವ ಜನರು ಇದೀಗ ಮೆಟ್ರೋ ನಿಲ್ದಾಣಗಳಲ್ಲು ನಿಮಿಷಗಳಗಟ್ಟಲೇ ಕಾಯುವಂತಾಗಿದೆ. ನೆನ್ನೆ ವಾಟ್ಸಾಪ್ ಟಿಕೆಟ್ ಸೇವೆಯಲ್ಲಿ ತಾಂತ್ರಿಕ ದೋಷ ಕಂಡು ಬರುತ್ತಿದ್ದಂತೆ ಮೆಟ್ರೋದಲ್ಲಿ ನಿಲ್ಲಲು ಜಾಗವಿರದಷ್ಟು ಜನರು ಸೇರಿ ಬಿಟ್ಟರು. ವಾಟ್ಸಾಪ್ ಸ್ಕ್ಯಾನ್ ಮಾಡಿ ಒಳಹೋಗಲು, ಹೊರ ಬರಲು ಆಗದ ಸ್ಥಿತಿ ಕಂಡು ಬಂತು. ವಾಟ್ಸಾಪ್ ಮೂಲಕ ಟಿಕೆಟ್ ಖರೀದಿಸಲು ಸಾಧ್ಯವಾಗದೇ ಪ್ರಯಾಣಿಕರು ಪರದಾಡಿದರು.

ಬಳಿಕ ಪ್ರಯಾಣಿಕರು ಟಿಕೆಟ್ ಕೌಂಟರ್ ಬಳಿ ನಿಂತುಕೊಂಡು ಟೋಕನ್, ಸ್ಮಾರ್ಟ್ ಕಾರ್ಡ್ ಖರೀದಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದರಿಂದ ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕೆ ಅಡಚಣೆ ಆಯಿತು. ಇತ್ತೀಚೆಗೆ ಕಾರ್ಡ್, ಪಾಸ್ ಮೂಲಕ ಸಂಚಾರ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ವಾಟ್ಸಾಪ್ ಟಿಕೆಟ್ ಖರೀದಿಸಿ ಸಂಚರಿಸುವವರ ಸಂಖ್ಯೆ ಹೆಚ್ಚಾಗಿದೆ. ನೆನ್ನೆ ಆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಸಮಸ್ಯೆಗೆ ಕಾರಣವಾಯಿತು. ಬಳಕೆದಾರರಿಗೆ ವಾಟ್ಸಾಪ್ ಸಂದೇಶ ರವಾನೆಯಾಗಿದ್ದು, ಈ ಟಿಕೆಟ್ ಸೇವೆಯಲ್ಲಿ ತಾತ್ಕಾಲಿಕ ತಾಂತ್ರಿಕ ತೊಂದರೆ ಆಗಿದೆ ಎಂಬ ಸಂದೇಶ ಪ್ರದರ್ಶನವಾಗಿದೆ.
ಟೋಕನ್ ಟಿಕೆಟ್‌ಗಾಗಿ ನಿತ್ಯ ಕ್ಯೂ..
ಮೆಟ್ರೋ ಹಳದಿ ಮಾರ್ಗ ಶುರುವಾದ ಬಳಿಕ ಹೊಸ ಮಾರ್ಗದಲ್ಲಿ ದೈನಂದಿನ ಕನಿಷ್ಠ 70,000 ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಚಲ್ಲಘಟ್ಟ ಮತ್ತು ವೈಟ್‌ಫಿಲ್ಡ್ ನೇರಳೆ ಮಾರ್ಗದಲ್ಲಿ ಪ್ರಯಾಣಿಕರು ನಿತ್ಯ ಟಿಕೆಟ್ ಕೌಂಟರ್ ಮುಂದೆ ಸುಮಾರು 30 ನಿಮಿಷಗಳ ಕಾಲ ಟಿಕೆಟ್ ಖರೀದಿಗೆ ನಿಲ್ಲಬೇಕಾಗಿದೆ. ಹೀಗಾಗಿಯೇ ವಾಟ್ಸಾಪ್ ಟಿಕೆಟ್ ಖರೀದಿಗೆ ಜನ ಮುಂದಾಗಿದ್ದು, ಅವರಿಗೂ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲಿನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ 40 ನಿಮಿಷ ಜನರು ರೈಲಿನಲ್ಲಿ ಪರದಾಡಿದ್ದರು. ಹೊಸ ಮಾರ್ಗ ಮತ್ತು ಹೊಸ ರೈಲುಗಳಲ್ಲಿ ಏನಿದು ಸಮಸ್ಯೆ ಎಂದು ಪ್ರಯಾಣಿಕರು ಪ್ರಶ್ನೆ ಮಾಡಿದ್ದು ಉಂಟು.
ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ಹಸಿರು ಮಾರ್ಗದ ಆರ್.ವಿ.ರಸ್ತೆಯಿಂದ ಹಳದಿ ಮಾರ್ಗಕ್ಕೆ ಬದಲಾಯಿಸುವ ಇಂಟರ್‌ಚೇಂಜ್ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದೆ. ಜನರು ಹೆಚ್ಚಿದಂತೆಲ್ಲ, ದಟ್ಟಣೆಯಿಂದಾಗಿ ನಿಲ್ದಾಣದಲ್ಲಿ ಸಮಸ್ಯೆ ಆಗುತ್ತಿವೆ ಎಂಬ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ BMRCL ಕೂಡಲೇ ಮೆಟ್ರೋ ನಿಲ್ದಾಣಗಳ ಪ್ಲಾಟ್ ಫಾರ್ಮ್ ಮೇಲೆ ಪಿಎಸ್‌ಡಿ ವ್ಯವಸ್ಥೆ ಇಲ್ಲವೇ ಬ್ಯಾರಿಕೇಡ್ ಅಳವಡಿಸುವಂತೆ ಆಗ್ರಹವು ಕೇಳಿ ಬಂದಿತ್ತು.












Click it and Unblock the Notifications