ಮೆಟ್ರೋ ನಿಲ್ದಾಣದಲ್ಲಿ ರೈಲಿಗಾಗಿ ಇನ್ನು ಹೆಚ್ಚು ಹೊತ್ತು ಕಾಯೋದ್ಬೇಡ
Recommended Video
ಬೆಂಗಳೂರು, ಜನವರಿ 30: ಇನ್ನುಮುಂದೆ ಪ್ರತಿ ನಾಲ್ಕು ನಿಮಿಷಗಳಿಗೊಂದು ಮೆಟ್ರೋ ರೈಲು ಸಂಚರಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂದಣಿ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅದರಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಸಮಯದಲ್ಲಿ ಪ್ರತಿ 4 ನಿಮಿಷಕ್ಕೆ ಒಂದು ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.

ಉಳಿದ ಸಮಯದಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದೆ. ಜನವರಿ 20 ರಿಂದ ಮೆಟ್ರೋ ಕಾರ್ಡ್ ಮೂಲಕ ರೀಚಾರ್ಜ್ ಮಾಡಿಕೊಳ್ಳುವವರಿಗೆ ನೀಡುತ್ತಿದ್ದ ಶೇ. 15ರಷ್ಟು ರಿಯಾಯಿತಿಯನ್ನು ಇದೀಗ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.
19 ರೈಲುಗಳಲ್ಲಿ 6 ಬೋಗಿ: ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ ಆರು ಬೋಗಿಗಳ ರೈಲುಗಳ ಸಂಖ್ಯೆ ಹೆಚ್ಚಿಸಲಾಗುತ್ತಿದ್ದು, ಈವರೆಗೆ ಒಟ್ಟು 19 ರೈಲುಗಳಲ್ಲಿ ಮೂರು ಬೋಗಿಗಳ ಬದಲಾಗಿ ಆರು ಬೋಗಿಗಳನ್ನು ಅಳವಡಿಸಲಾಗಿದೆ. ಮೊದಲ ಹಂತದಲ್ಲಿನ ಎಲ್ಲಾ 50 ರೈಲುಗಳಿಗೆ ಆರು ಬೋಗಿಗಳನ್ನು ಅಳವಡಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು.
ಅದರಂತೆ ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಎಲ್ಲಾ ರೈಲುಗಳಿಗೆ ಆರು ಬೋಗಿಗಳನ್ನು ಅಳವಡಿಸಲು ಚಿಂತಿಸಲಾಗಿತ್ತು. ಉಳಿದಂತೆ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಹಂತ ಹಂತವಾಗಿ ಆರು ಬೋಗಿ ಅಳವಡಿಸಲಾಗುತ್ತಿದೆ. ಜ.27ರವರೆಗೆ ಒಟ್ಟು 19 ರೈಲುಗಳು ಆರು ಬೋಗಿಗಳನ್ನು ಹೊಂದಿವೆ.












Click it and Unblock the Notifications