Namma Metro: ನಮ್ಮ ಮೆಟ್ರೋ ಎರಡನೇ ಹಂತ ಯೋಜನೆ; 3,000 ಕೋಟಿ ಸಾಲ ಮಂಜೂರು
ನಮ್ಮ ಮೆಟ್ರೋ 2ನೇ ಹಂತದ ಯೋಜನೆಗಾಗಿ ಬಿಎಂಆರ್ ಸಿಎಲ್ 3000 ಕೋಟಿ ರೂಪಾಯಿ ಸಾಲ ಪಡೆದುಕೊಮಡಿದೆ. ಭಾರತ ಸರ್ಕಾರವು ಜರ್ಮನ್‌ನ ಹೂಡಿಕೆ ಬ್ಯಾಂಕ್ ಕೆಎಫ್‌ಡಬ್ಲ್ಯೂ ಜೊತೆ 3,044.54 ಕೋಟಿ (€340 ಮಿಲಿಯನ್) ಸಾಲಕ್ಕೆ ಒಪ್ಪಂದ ಮಾಡಿಕೊಂಡಿದೆ.
ಶುಕ್ರವಾರ ನವದೆಹಲಿಯಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೀಶಾ ಸಿನ್ಹಾ ಮತ್ತು ಕೆಎಫ್‌ಡಬ್ಲ್ಯೂ ಜರ್ಮನಿಯ ನಿರ್ದೇಶಕಿ (ದಕ್ಷಿಣ ಏಷ್ಯಾ) ಕ್ಯಾರೊಲಿನ್ ಗ್ಯಾಸ್ನರ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಬಿಎಂಆರ್ ಸಿಎಲ್ ಮ್ಯಾನೇಜಿಂಗ್ ಡೈರೆಕ್ಟರ್ ಎಂ ಮಹೇಶ್ವರ್ ರಾವ್ ಅವರು ಕೆಎಫ್‌ಡಬ್ಲ್ಯೂ (KfW) ಕಚೇರಿಯಲ್ಲಿ ಗ್ಯಾಸ್ನರ್ ಜೊತೆ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್ ಹಣಕಾಸು ವಿಭಾಗದ ನಿರ್ದೇಶಕ ಎಸ್ ಶಿವಮದನ್ ಮತ್ತು ಹಿರಿಯ ಅಧಿಕಾರಿಗಳು ಹಾಜರಿದ್ದರು.

12,141 ಕೋಟಿ ರೂಪಾಯಿ ಸಾಲ
ನಮ್ಮ ಮೆಟ್ರೋ 2ನೇ ಹಂತದ ಯೋಜನೆ 75.06 ಕಿ.ಮೀ ಮಾರ್ಗದಲ್ಲಿ ವ್ಯಾಪಿಸಿದ್ದು ಈವರೆಗೆ 12,141.14 ಕೋಟಿ ರೂಪಾಯಿ ಸಾಲವನ್ನು ಪಡೆದುಕೊಂಡಿದೆ. ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA), ಏಜೆನ್ಸ್ ಫ್ರಾಂಕಾಯ್ಸ್ ಡಿ ಡೆವಲಪ್ಮೆಂಟ್ (AFD), ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB), ಮತ್ತು ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (EIB) ಮೂಲಕ 9,096.60 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಈಗ ಜರ್ಮನಿಯ ಕೆಎಫ್‌ಡಬ್ಲ್ಯೂ ಬ್ಯಾಂಕ್ 3,044.54 ಕೋಟಿ ರೂಪಾಯಿ ಸಾಲ ಮಂಜೂರು ಮಾಡಿದೆ.
ನಮ್ಮ ಮೆಟ್ರೋ 2ನೇ ಹಂತರ ಕಾಮಗಾರಿಗೆ 30,695 ಕೋಟಿ ರೂಪಾಯಿಗೆ ಅನುಮೋದನೆ ನೀಡಲಾಗಿತ್ತು, ಆದರೆ ಕಾಮಗಾರಿ ವಿಳಂಬ, ಕಾಮಗಾರಿಗೆ ಹೆಚ್ಚಿನ ಭೂಮಿ ಅಗತ್ಯತೆ ಮತ್ತು ಇನ್ನಿತರ ಕಾರಣಗಳಿಂದ ಯೋಜನಾ ವೆಚ್ಚ 40,614.27 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.
ರಾಜ್ಯ ಸರ್ಕಾರ ಇದೀಗ ₹9,919.27 ಕೋಟಿ ಹೆಚ್ಚುವರಿ ವೆಚ್ಚವನ್ನು ಭರಿಸಲಿದೆ ಎಂದು ಬಿಎಂಆರ್‌ಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಡಿಎಚ್ ವರದಿ ಮಾಡಿದೆ. ಹೆಚ್ಚುವರಿ ವೆಚ್ಚಕ್ಕೆ ಈಗಾಗಲೇ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ರಾಜ್ಯ ಸಚಿವ ಸಂಪುಟದ ಅನುಮೋದನೆಗೆ ಕಳಿಸಿಕೊಡಲಾಗಿದೆ. ಡಿಸೆಂಬರ್ 6ರಂದು ಕ್ಯಾಬಿನೆಟ್‌ನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ನಿರ್ಧಾರವನ್ನು ಮುಂದೂಡಿದೆ.
ನಮ್ಮ ಮೆಟ್ರೋ 2ನೇ ಹಂತದ ಗುಲಾಬಿ (ಪಿಂಕ್) ಮಾರ್ಗದ ಕಾಮಗಾರಿ ನಡೆಯುತ್ತಿದ್ದು ಕಾಳೇನ ಅಗ್ರಹಾರದಿಂದ ನಾಗಾವರವನ್ನು ಸಂಪರ್ಕಿಸಲಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವಲ್ಲಿ ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಗರದ ಸಾರಿಗೆಯನ್ನು ಸುಧಾರಿಸಲು ಮಹತ್ವದ ಪಾತ್ರ ವಹಿಸಲಿದೆ.












Click it and Unblock the Notifications