Namma Metro: ಹಳದಿ ಮಾರ್ಗ ಆರಂಭಕ್ಕೆ ಇನ್ನೆಷ್ಟು ಪರೀಕ್ಷೆಗಳು ಬಾಕಿ ಇವೆ?
ಬೆಂಗಳೂರು, ಜುಲೈ 04: ಬೆಂಗಳೂರು ನಮ್ಮ ಮೆಟ್ರೋ ಎರಡನೇ ಐಟಿ ಕಾರಿಡಾರ್ ಎನ್ನಲಾಗುತ್ತಿರುವ ಆರ್‌ವಿ.ರಸ್ತೆ-ಬೊಮ್ಮಸಂದ್ರವರೆಗಿನ ಹಳದಿ ಮಾರ್ಗವು (Namma Metro Yellow Line) ಆದಷ್ಟು ಶೀಘ್ರವೇ ವಾಣಿಜ್ಯ ಕಾರ್ಯಾಚರಣೆಗೆ ತೆರೆದುಕೊಳ್ಳಲಿರುವ ನೂತನ ಮೆಟ್ರೋ ಮಾರ್ಗವಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಮೆಟ್ರೋ ಹಳದಿ ಮಾರ್ಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ಮುಗಿಸಿದೆ. ಇದರ ಬೆನ್ನಲ್ಲೆ ಜುಲೈ 1ರಂದು ಸಿಗ್ನಲ್ ಪರೀಕ್ಷೆಗಳು ಸಹ ಆರಂಭಿಸಲಾಗಿದೆ. ಈ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ (Driverless Metro Train) ಸಂಚಾರ ನಡೆಸುವ ಹಿನ್ನೆಲೆಯಲ್ಲಿ ಸಿಗ್ನಲಿಂಗ್ ಪರೀಕ್ಷೆ ಬಹಳ ಮುಖ್ಯವಾಗಿದೆ.

ಮೆಟ್ರೋ ಸಂಚಾರ ವಿಳಂಬ ಏಕೆ?
ಇನ್ನು ಎಷ್ಟು ಪರೀಕ್ಷೆಗಳು ಇವೆ, ಯಾವಾಗ ಈ ಮಾರ್ಗದಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಕಾರ್ಯಾಚರಣೆ ನಡೆಸಲಿವೆ ಎಂಬ ಕೆಲವು ಪ್ರಶ್ನೆಗಳು ಕಾಡುತ್ತಿವೆ. ಅದಕ್ಕೆ ಉತ್ತರ ಇಲ್ಲಿದೆ.
ಎಲ್ಲವು ಅಂದುಕೊಂಡಂತೆ ಆಗಿದ್ದರೆ ಇದೇ ವರ್ಷ 2024ರ ಫೆಬ್ರವರಿಯಲ್ಲಿ ಈ ಮೆಟ್ರೋ ಹಳದಿ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಕೊರೊನಾ, ಮೆಟ್ರೋ ರೈಲು ಪೂರೈಕೆಯಲ್ಲಿನ ವಿಳಂಬ ಕಾರಣದಿಂದಾಗಿ ಈ ಮಾರ್ಗ ತೆರೆಯುವುದು ವಿಳಂಬ ವಾಗುತ್ತಿದೆ.
ಇನ್ನೂ ಎಷ್ಟು ಪರೀಕ್ಷೆಗಳು ಆಗಬೇಕು?
ಇದೀಗ ಒಂದೊಂದೆ ಪರೀಕ್ಷೆಗಳು ಪೂರ್ಣಗೊಳ್ಳುತ್ತಿವೆ. ಇದು ಡ್ರೈವರ್‌ಲೆಸ್ ರೈಲು ಆದ ಕಾರಣ, 18 ಕಿಲೋ ಮೀಟರ್ ಉದ್ದದ ಮಾರ್ಗದಲ್ಲಿ ಸುಮಾರು 26ಕ್ಕೂ ಹೆಚ್ಚು ಪರೀಕ್ಷೆಗಳು ಯಶಸ್ವಿ ಆಗಬೇಕಿದೆ. ಮೊದಲೈ ರೈಲು ಸ್ವಯಂ ಸಂಚಾರದ ಪರೀಕ್ಷೆ, ಸಿಗ್ನಲಿಂಗ್‌ಗಳಿಗೆ ಸ್ಪಂದನೆ, ಪ್ರಾಯೋಗಿಕ ಸಂಚಾರ ಪರೀಕ್ಷೆಗಳು ನಡೆದಿವೆ.

ಉಳಿದ ಪರೀಕ್ಷೆಗಳೂ ನಡೆಯಲು 45-60 (ಎರಡು ತಿಂಗಳು) ದಿನಗಳು ಬೇಕಾಗಬಹುದು ಎಂದು ಬಿಎಂಆರ್‌ಸಿಎಲ್ ಈಗಾಗಲೇ ಹೇಳಿದೆ. ಎಲ್ಲ ರೀತಿಯ ಸುರಕ್ಷತಾ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಬೇಕಿದೆ. ಅದಾಗಿ ಕೆಲವು ದಿನಗಳಲ್ಲಿಯೇ ರೈಲ್ವೆ ಸುರಕ್ಷತಾ ಆಯುಕ್ತರು ಇನ್ನಿತರ ಅಧಿಕಾರಿಗಳು ಖುದ್ದು ಮೆಟ್ರೋ ಸಂಚಾರ ಮಾಡಿ ಪರೀಕ್ಷಿಸುತ್ತಾರೆ. ಬಳಿಕ ವಾಣಿಜ್ಯ ಕಾರ್ಯಾಚರಣೆಗೆ ಗ್ರಿನ್ ಸಿಗ್ನಲ್ ದೊರೆಯಲಿದೆ.
ಹಳದಿ ಮೇಲ್ಛಾವಣಿಯ 16 ನಿಲ್ದಾಣಗಳು
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಇವೆಲ್ಲವು ಹಳದಿ ಮೇಲ್ಛಾವಣಿ ಹೋಂದಿವೆ. ಇನ್ಫೋಸಿಸ್ ಸೇರಿದಂತೆ ಹಲವು ಕಾರ್ಪೋರೇಟ್ ಸಂಸ್ಥೆಗಳ ಸಹಕಾರದಲ್ಲಿ ನಿರ್ಮಿಸಲಾಗಿದೆ. ಮೆಟ್ರೋ ನಿಲ್ದಾಣ, ವಿದ್ಯುತ್ ವ್ಯವಸ್ಥೆ ಅಳವಡಿಕೆ ಎಲ್ಲವು ಪೂರ್ಣಗೊಂಡಿದೆ. ವಿವಿಧ ಪರೀಕ್ಷೆಗಳು ಮುಗಿಯುತ್ತಿದ್ದ ಈ ವರ್ಷಾಂತ್ಯಕ್ಕೆ 2024ರ ಡಿಸೆಂಬರ್‌ಗೆ ವಾಣಿಜ್ಯ ಕಾರ್ಯಾಚರಣೆ ಆರಂಭಗೊಳ್ಳಲಿದೆ.
ಮೆಟ್ರೋ ರೈಲು ಸೆಟ್‌ಗಳು ಪೂರೈಕೆಗೆ ದಿನಗಣನೆ
ಚೀನಾ ಮೂಲದ ಕಂಪನಿಯು ಪಶ್ಚಿಮ ಬಂಗಾಳದ ಕೋಲ್ಕೊತ್ತಾದ ಸಮೀಪ ಉತ್ಪಾದನಾ ಘಟಕವನ್ನು ಹೊಂದಿರುವ ಟಿಟಾಗರ್ ವ್ಯಾಗನ್ಸ್ ಮೂಲಕ ಮೆಟ್ರೋ ಬೋಗಿ ಒದಗಿಸುತ್ತಿದೆ. ಮೆಟ್ರೋ ಹಳದಿ ಮಾರ್ಗಕ್ಕಾಗಿ 216 ಕೋಚ್‌ಗಳನ್ನು (36 ರೈಲು ಸೆಟ್) ತಯಾರಿಸಿ ಕೊಡುವಂತೆ ಚೀನಾ ಕಂಪನಿ ಜತೆ BMRCL ಒಪ್ಪಂದ ಮಾಡಿಕೊಂಡಿದೆ.
ಕಳೆದ ವರ್ಷ 2023ರ ಆಗಸ್ಟ್‌ನಲ್ಲಿ ಒಂದು ಸೆಟ್ (ಆರು ಬೋಗಿ ರೈಲು) ಪೂರೈಸಿದೆ. ಈ ರೈಲು ಮಾರ್ಗ ಆರಂಭವಾಗುವ ಹೊತ್ತಿಗೆ ಇನ್ನು ಎರಡು ಸೆಟ್ ರೈಲುಗಳನ್ನು ಒದಗಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಕಳೆದ ತಿಂಗಳ ವಯಾಡಕ್ಟ್ ಮೂಲಕ ಇದೇ ಹಳದಿ ಮಾರ್ಗದಲ್ಲಿ ಹಳಿಗೆ ವಿದ್ಯುತ್ ಪೂರೈಕೆಗೆ ಮಾಡಲಾಗಿತ್ತು. ಆಗ ಈ ಮಾರ್ಗದಲ್ಲಿ ಯಾರು ಬರದಂತೆ ಸೂಚನೆ ನೀಡಲಾಗಿತ್ತು. ಹೀಗೆ ಒಂದರ ಹಿಂದೆ ಒಂದರಂತೆ ಈ ಮಾರ್ಗದ ಕೆಲಸಗಳು ಅಂತಿಮಗೊಳ್ಳುತ್ತಿವೆ. ಇದೀಗ ಪ್ರಾಯೋಗಿಕ ಪರೀಕ್ಷೆ ಆಗಿ, ಸಿಗ್ನಲಿಂಗ್ ಟೆಸ್ಟ್ ನಡೆಯುತ್ತಿದೆ.












Click it and Unblock the Notifications