Namma Metro 3 Phase: 44.6 ಕಿ.ಮೀ. ಮೆಟ್ರೋ ಕಾರಿಡಾರ್, 11,000 ಮರಗಳಿಗೆ ಕೊಡಲಿ? ಅಪ್ಡೇಟ್ಸ್
ಬೆಂಗಳೂರು, ಜುಲೈ 21: ಬೆಂಗಳೂರು ನಮ್ಮ ಮೆಟ್ರೋ ಹೊಸ ರೈಲು ಮಾರ್ಗಗಳ ಕಾಮಗಾರಿಗೆ ಚುರುಕು ನೀಡಲಾಗುತ್ತಿದೆ. ಮೂರನೇ ಹಂತದ ಮೆಟ್ರೋ ಯೋಜನೆ ನಿರ್ಮಾಣಕ್ಕಾಗಿ ಸಾವಿರಾರು ಮರಗಳಿಗೆ ಕತ್ತರಿ ಬೀಳುವ ನಿರೀಕ್ಷೆ ಇದೆ. ಹೀಗಾಗಿ ಪರಿಸರ ಕಾಳಜಿ ವಹಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇಂದಿನಿಂದ (ಜುಲೈ 21) ಮೂರು ದಿನಗಳ ಸಾರ್ವಜನಿಕ ಸಮಾಲೋಚನೆ ನಡೆಸಲಿದೆ. ನಾಗರಿಕರು, ಸಾರ್ವಜನಿಕರು ಹಾಗೂ ಪರಿಸರವಾದಿಗಳಿಂದ ಅಗತ್ಯ ಸಲಹೆ ಪಡೆಯಲಿದೆ. ಯಾವೆಲ್ಲ ಮಾರ್ಗಗಳು? ಎಷ್ಟು ಮರಕ್ಕೆ ಕೊಡಲಿ, ವಿವರ ಇಲ್ಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮೂರನೇ ಹಂತದ ಮೆಟ್ರೋ ಯೋಜನೆಯಡಿ ಎತ್ತರಿಸಿದ ಕಾರಿಡಾರ್‌ಗಳು ನಿರ್ಮಾಣವಾಗುತ್ತವೆ. ಅದಕ್ಕೆ ಮರಗಳು ಅಡ್ಡಿಯಾಗಬಹುದೆಂಬ ಕಾರಣಕ್ಕೆ ಸುಮಾರು 11,000 ಕ್ಕೂ ಹೆಚ್ಚು ಮರಗಳಿಗೆ ಕೊಡಲಿ ಹಾಕುವ ನಿರೀಕ್ಷೆಗಳು ಇವೆ. ಈ ಸಂಬಂಧ ಮೊದಲೇ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಅಗತ್ಯ ಸಮಾಲೋಚನೆ ಮಾಡಲು ಮುಂದಾಗಿದ್ದಾರೆ.

ಮೆಟ್ರೋ ಅಧಿಕಾರಿಗಳ ಪ್ಲಾನ್ ಏನು?
Namma Metro Phase-3 ಸಮಗ್ರ ಯೋಜನಾ ವರದಿ (DPR) ಈಗಾಗಲೇ ರಚನೆ ಆಗಿದೆ. ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರಕ್ಕೆ (32.1 ಕಿಮೀ) ಮತ್ತು ಹೊಸಹಳ್ಳಿಯಿಂದ ಕಡಬಗೆರೆಗೆ (12.5 ಕಿಮೀ) ಎರಡು ಕಾರಿಡಾರ್ ಗಳು ನಿರ್ಮಾಣಕ್ಕೆ ಯೋಜಿಸಲಾಗಿದೆ. ಒಟ್ಟು 44.6 ಕಿಲೋ ಮೀಟರ್ ಕಾರಿಡಾರ್ ಇದಾಗಿದ್ದು, ಅದರ ಪರಿಣಾಮ ಸುಮಾರ 11,137 ಮರಗಳ ಮೇಲೆ ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಇದರಿಂದ ಬೆಂಗಳೂರಿನ ಹಸಿರು ಹೊದಿಕೆಗೆ ತೊಂದರೆ ಆಗುವ ಸಾಧ್ಯತೆ ಇದ್ದು, ನಾಗರಿಕ ಗುಂಪುಗಳ ಸಲಹೆ ಪಡೆದು ಮುಂದುವರಿಯಲು ತಿರ್ಮಾನಿಸಿದ್ದಾರೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಕಳೆದ ಬಾರಿ ನೀಲಿ ಮಾರ್ಗದಲ್ಲಿ ಮರಗಳ ತೆರವು ವಿಚಾರವು ಕೋರ್ಟ್ ಮೆಟ್ಟಿಲೇರಿತ್ತು. ಈ ಬಾರಿಯು ಹಾಗಾದರೆ ಯೋಜನೆ ವಿಳಂಬವಾಗಬಹುದು.
ಸಾವಿರಾರು ಮರಗಳನ್ನು ಸ್ಥಳಾಂತರಿಸಬೇಕಾ?, ಕತ್ತರಿಸುವುದಾದರೆ ಎಷ್ಟು ಮರಗಳನ್ನು ಕತ್ತರಿಸಬೇಕು, ಸ್ಥಳಾಂತರವಾದರೆ ಎಲ್ಲಿ? ಹೇಗೆ? ಎಂಬದರ ಚರ್ಚೆ ಆಗಲಿದೆ. ಸ್ವೀಕಾರಾರ್ಹ ಸಲಹೆಗಳನ್ನು BMRCL ಅಧಿಕಾರಿಗಳು ಪಡೆದು ಯೋಜನೆ ಕಾರ್ಯಗತಗೊಳಿಸಲಿದ್ದಾರೆ. ಹೀಗಾಗಿ ಸಮಾಲೋಚನೆಗೆ ಪರಿಸರ ತಜ್ಞರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ.
1ಕಿಮೀ ಮಾರ್ಗದಲ್ಲಿ 250 ಮರಗಳಿಗೆ ತೊಂದರೆ
ಜೆಪಿ ನಗರ 4 ನೇ ಹಂತ-ಕೆಂಪಾಪುರಕ್ಕೆ ಮತ್ತು ಹೊಸಹಳ್ಳಿ-ಕಡಬಗೆರೆ ವರೆಗಿನ ಕಾರಿಡಾರ್ ನಿರ್ಮಾಣ ಯೋಜನೆಯಲ್ಲಿ ಪ್ರತಿ ಒಂದು ಕಿಲೋ ಮೀಟರಿಗೆ ಸರಾಸರಿ 250 ಮರಗಳ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ವಕೀಲರು ಹಾಗೂ ಪರಸರವಾದಿಗಳು ಡಿಪಿಆರ್ ನೋಡಿದ್ದಾರೆ. ಇದನ್ನು ಮರು ಪರಿಶೀಲಿಸಲು ಕೆಲವರು ಆಗ್ರಹಿಸಿದ್ದಾರೆ. ಇನ್ನೂ ಹಲವರು ಮರಗಳು ಮುಖ್ಯವಾದರೂ ಸಹಿತ ದೀರ್ಘ ಕಾಲದವರೆಗೆ ಸಾರಿಗೆ ಯೋಜನೆ ಮುಖ್ಯವಾಗುತ್ತದೆ ಎಂದು ಮೆಟ್ರೋ ಮಾರ್ಗ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಗತ್ಯ ಮರಗಳಿಗೆ ಮಾತ್ರ ಕೊಡಲಿ..
ತೀರಾ ಅಗತ್ಯವೆನಿಸುವ ಮರಗಳನ್ನು ಮಾತ್ರವೇ ಕತ್ತರಿಸಲಾಗುವುದು. ಉಳಿದಂತೆ ಸ್ಥಳಾಂತರಕ್ಕೆ ಮುಂದಾಗುವುದು ಎಂದು ಈಗಾಗಲೇ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಜೆಪಿ ನಗರ, ಹೆಬ್ಬಾಳ ಮತ್ತು ಮಾಗಡಿ ರಸ್ತೆ ವರೆಗೆ ಈ ಮಾರ್ಗಗಳು ಸಂಪರ್ಕ ಕಲ್ಪಿಸುತ್ತವೆ. ಈ ಯೋಜನೆಯಿಂದ ಮೆಟ್ರೋ ಕೊನೆಯ ಮೈಲಿಗೆ ಸಂಪರ್ಕ ಸಾಧಿಸಿದಂತಾಗುತ್ತದೆ..












Click it and Unblock the Notifications