Namma Metro: ನಾಗಸಂದ್ರ-ಮಾದಾವರವರೆಗೆ ಆ. 6ರಿಂದ ಪ್ರಾಯೋಗಿಕ ಸಂಚಾರ, ಸಾರ್ವಜನಿಕರಿಗೆ ಮುಕ್ತ ಯಾವಾಗ?
ಬೆಂಗಳೂರು, ಜುಲೈ 31: ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಹಾಲಿ 73ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಮುಂದಿನ ಎರಡೇ ತಿಂಗಳಲ್ಲಿ ಮೆಟ್ರೋ ಜಾಲ 76.7 ಕಿಲೋ ಮೀಟರ್‌ಗೆ ಹೆಚ್ಚಾಗಲಿದೆ. ಏಕೆಂದರೆ ಮೆಟ್ರೋ ಹಸಿರು ಮಾರ್ಗದ ವಿಸ್ತರಣೆಯ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರಕ್ಕೆ ಮಹೂರ್ತ ನಿಗದಿ ಆಗಿದೆ.
ನಮ್ಮ ಮೆಟ್ರೋ ಹಸಿರು ಮಾರ್ಗವು ರೇಷ್ಮೆ ಸಂಸ್ಥೆಯಿಂದ-ನಾಗಸಂದ್ರವರೆಗೆ ಇದೆ. ಈ ಮಾರ್ಗವನ್ನು ನಾಗಸಂದ್ರದಿಂದ ತುಮಕೂರು ಕಡೆಗೆ ಅಂದರೆ ಮಾದಾವರ ವರೆಗೆ 3.7 ಕಿಮೀ ವಿಸ್ತರಣೆ ಮಾಡಲಾಗಿದೆ. ಈ ವಿಸ್ತರಿಸಿದ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಇದೇ ಆಗಸ್ಟ್ 6ರಿಂದ ಪ್ರಾಯೋಗಿಕ ಸಂಚಾರ ನಡೆಸಲಿವೆ ಎಂದು ಖುದ್ದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು TNIE ವರದಿ ಮಾಡಿದೆ.

ಅಕ್ಟೋಬರ್‌ಗೆ ಮಾದಾವರವರೆಗೂ ಮೆಟ್ರೋ ಸಂಚಾರ
ಈ ಹಸಿರು ಮಾರ್ಗದ ನಾಗಸಂದ್ರ- ಮಾದಾವರವರೆಗೆ ಪ್ರಾಯೋಗಿಕ ಸಂಚಾರ ನಡೆದು ಎಲ್ಲ ಪರೀಕ್ಷೆಗಳು ಕೊನೆಗೊಳ್ಳಲು ಎರಡು ತಿಂಗಳ ಕಾಲವಕಾಶ ಹಿಡಿಯಬಹುದು. ಇದಾದ ಬಳಿಕ ವಿಸ್ತರಣೆ ಮಾರ್ಗವು ವಾಣಿಜ್ಯ ಸಂಚಾರಕ್ಕೆ ಅಣಿಯಾಗಲಿದೆ. ತುಮಕೂರಿನಿಂದ ಹಾಗೂ ಬೆಂಗಳೂರು ಹೊರವಲಯದ (NH-4 ಹೆದ್ದಾರಿ ಅಕ್ಕ ಪಕ್ಕದ) ನಿವಾಸಿಗಳಿಗೆ ಸಹಾಯವಾಗಲಿದೆ.
ಸೆಪ್ಟೆಂಬರ್ ಅಂತ್ಯಕ್ಕೆ ಇಲ್ಲವೇ ಅಕ್ಟೋಬರ್ ಮೊದಲ ವಾರ ಗ್ರೀನ್ ಲೈನ್‌ನಲ್ಲಿ ರೈಲುಗಳು ಸಂಚರಿಸಲಿವೆ. ಒಟ್ಟು 298 ಕೋಟಿ ರೂ. ವೆಚ್ಚದಲ್ಲಿ 3.7-ಕಿಮೀ ಮಾರ್ಗ ವಿಸ್ತರಿಸಲಾಗಿದೆ. ಇದರಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಹಿಂದಿನ ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ) ಎಂಬ ಮೂರು ನಿಲ್ದಾಣಗಳು ಬರಲಿವೆ.

ಮೆಟ್ರೋ ಆಯುಕ್ತರಿಂದ ತಪಾಸಣೆ ಬಳಿಕ ಗ್ರೀನ್ ಸಿಗ್ನಲ್
ಸಿಗ್ನಲ್ ಟೆಸ್ಟ್, ಪ್ರಾಯೋಗಿಕ ಸಂಚಾರ ಸೇರಿದಂತೆ ಕೆಲವು ಪರೀಕ್ಷೆಗಳನ್ನು ಮೆಟ್ರೋ ಅಧಿಕಾರಿಗಳು ನಡೆಸಲಿದ್ದಾರೆ. ಇದಾಗುತ್ತಿದ್ದಂತೆ ಸೆಪ್ಟೆಂಬರ್ ಎರಡನೇ ವಾರದೊಳಗೆ ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರಿಂದ ಅಂತಿಮ ತಪಾಸಣೆ ಆಗಿ ಬಳಿಕ ಅನುಮೋದನೆ ದೊರೆಯಲಿದೆ.
ಈ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲು 2019ರ ಆಗಸ್ಟ್ ಗೆ ಗಡುವು ನೀಡಲಾಗಿತ್ತು. ಆದರೆ ಮಾದಾವರವರೆಗೆ ಮಾರ್ಗದ ನಿರ್ಮಾಣ ಕೆಲಸ ಪೂರ್ಣಗೊಳ್ಳಲು ತಡವಾದ್ದರಿಂದ ಗಡುವು ವಿಸ್ತರಣೆ ಆಯಿತು. ಸದ್ಯ ಎಲ್ಲವು ಅಂದುಕೊಂಡಂತೆ ಆಗಲಿದೆ.
ವಾಣಿಜ್ಯ ಕಾರ್ಯಾಚರಣೆ ಆರಂಭ ಆಗುತ್ತಿದ್ದಂತೆ ನೆಲಮಂಗಲ, ಮಾಕಳಿ ಮತ್ತು ಮಾದನಾಯಕನಹಳ್ಳಿ ನಿವಾಸಿಗಳಿಗೆ ನಗರ ಪ್ರವೇಶಿಸಲು ಸಾಕಷ್ಟು ಸಹಾಯವಾಗಲಿದೆ. ಇದರೊಂದಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡುವವರು ಇನ್ನು ಮುಂದೆ ನಮ್ಮ ಮೆಟ್ರೋದಲ್ಲಿ ತೆರಳಬಹುದು.












Click it and Unblock the Notifications