Namma metro: ಮೊದಲ ಬಾರಿಗೆ ಮಾಸಿಕ ಪ್ರಯಾಣಿಕರ ಸಂಚಾರದಲ್ಲಿ ಸಾಧನೆ, ಶೇ.30 ಏರಿಕೆ, ಆದಾಯ ಬಂದಿದ್ದೆಷ್ಟು?
ಬೆಂಗಳೂರು, ಜನವರಿ 10: ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ನೇರಳೆ ಮಾರ್ಗ ಸಂಪೂರ್ಣವಾಗಿ ತೆರೆದ ನಂತರವು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಆಗಿರಲಿಲ್ಲ. ಆದರೆ ನಮ್ಮ ಮೆಟ್ರೋ (Namma Metro) ಮೊದಲ ಬಾರಿಗೆ ಒಂದೇ ತಿಂಗಳಲ್ಲಿ ಅತ್ಯಧಿಕ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ದಾಖಲೆ ಬರೆದಿದೆ.
ಬೆಂಗಳೂರು ನಮ್ಮ ಮೆಟ್ರೋ ರೈಲುಗಳಲ್ಲಿ ಕಳೆದ ತಿಂಗಳಲ್ಲಿ ಒಟ್ಟು 2 ಕೋಟಿ ಜನರು ಮೆಟ್ರೋ ಸಾರಿಗೆ ಬಳಸಿದ್ದಾರೆ. ಇದು ಈವರೆಗಿನ ಮೊದಲ ಮಾಸಿಕ ಸಾಧನೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮೂಲಗಳು ತಿಳಿಸಿವೆ ಎಂದು 'ಡಿಎಚ್' ವರದಿ ಮಾಡಿದೆ.

ಈ ಸಾಧನೆ ಆಗಿರುವುದು ಕಳೆದ ಡಿಸೆಂಬರ್ ತಿಂಗಳಿನಲ್ಲಿ. ಹೌದು, ಡಿಸೆಂಬರ್‌ನಲ್ಲಿ ಪ್ರತಿನಿತ್ಯ ಸರಾಸರಿ 6.88 ಲಕ್ಷ ಪ್ರಯಾಣಿಕರ ಮೆಟ್ರೋದಲ್ಲಿ ಓಡಾಡಿದ್ದಾರೆ. ಇದರಿಂದ ಆ ತಿಂಗಳ ಮಾಸಿಕ ಪ್ರಯಾಣಿಕರ ಓಡಾಟ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.
ಡಿಸೆಂಬರ್ ಒಂದೇ ತಿಂಗಳಲ್ಲಿ 2 ಕೋಟಿ ಜನ ಸಂಚಾರ
2023ರ ಡಿಸೆಂಬರ್ ತಿಂಗಳಲ್ಲಿ ನಮ್ಮ ಮೆಟ್ರೋದಲ್ಲಿ 2,13,34,076 ಜನರು ಮೆಟ್ರೋದಲ್ಲಿ ಸಂಚರಿಸಿದ್ದಾರೆ. ಅಂದರೆ ನಿತ್ಯ 6,88,196 ಜನ ಪ್ರತಿನಿತ್ಯ ಮೆಟ್ರೋ ಸಾರಿಗೆ ಬಳಸಿದ್ದಾರೆ ಎಂಬುದು ಗೊತ್ತಾಗುತ್ತಿದೆ. ಇದರಿಂದ ಆ ಒಂದು ತಿಂಗಳಿನಲ್ಲಿ ಬಿಎಂಆರ್‌ಸಿಎಲ್‌ಗೆ ಸುಮಾರು 55 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ.
2023ರ ಜನವರಿಯಲ್ಲಿ ಪ್ರತಿ ನಿತ್ಯ ಸುಮಾರು 5.32 ಲಕ್ಷ ಜನರು ಪ್ರಯಾಣ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಒಂದು ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆ ಆಗಿದೆ. ಕಳೆದ ಒಂದೇ ವರ್ಷದಲ್ಲಿ ಸುಮಾರು ಶೇಕಡಾ 30 ರಷ್ಟು ಏರಿಕೆ ಆಗಿದೆ.
ದೈನಂದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಳ
ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆ ಈಗ 64,000 ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಆದರೆ ಇದು ಮೂರು ತಿಂಗಳ ಹಿಂದಷ್ಟೇ ತೆರೆಯಲಾದ ಪರ್ಪಲ್ ಲೈನ್ ಕಾರ್ಯಾಚರಣೆ ನಂತರದ ನಿರೀಕ್ಷಿತ ಹೆಚ್ಚಳ ಅಲ್ಲ ಅಂತಲೂ ಹೇಳಲಾಗಿದೆ. ಏಕೆಂದರೆ ನಿತ್ಯ 75,000 ರಿಂದ 1 ಲಕ್ಷವರೆಗೆ ಜನರನ್ನು ನಮ್ಮ ಮೆಟ್ರೋ ನಿರೀಕ್ಷಿಸಿತ್ತು.
ನಮ್ಮ ಮೆಟ್ರೋ 2023ರ ಅಕ್ಟೋಬರ್ ಎರಡನೇ ವಾರ ಬೈಯಪ್ಪನಹಳ್ಳಿ-ಕೆಆರ್ ಪುರ (2.1 ಕಿಮೀ) ಹೊಸ ಮಾರ್ಗ ಮತ್ತು ಕೆಂಗೇರಿ-ಚಲ್ಲಘಟ್ಟ (2.05 ಕಿಮೀ) ವಿಸ್ತರಣೆ ಮಾರ್ಗ ತೆರೆಯತು. ಇದಿರಂದ ಸಂಪೂರ್ಣ ನೇರಳೆ ಮಾರ್ಗವು 43.49 ಕಿಮೀಗೆ ವಿಸ್ತರಿಸಿತು. ಅಲ್ಲದೇ ಇದು ಐಟಿಕಾರಿಡಾರ್‌ಗೆ ನೇರ ಸಂಪರ್ಕ ಕಲ್ಪಿಸುತ್ತದೆ ಎಂಬ ಕಾರಣಕ್ಕೆ ಅತ್ಯಧಿಕ ಪ್ರಯಾಣಿಕರ ನಿರೀಕ್ಷೆ ಇತ್ತು.

ನಿರೀಕ್ಷೆಯ 7 ಲಕ್ಷ ತಲುಪಿಲ್ಲ
ನೇರಳ ಮಾರ್ಗ ಸಂಪೂರ್ಣ ತೆರೆದ ತತ್‌ಕ್ಷಣಕ್ಕೆ ಪ್ರಯಾಣಿಕರ ಸಂಖ್ಯೆಯನ್ನು ಏರಿಕೆ ಮಾಡಿತ್ತು. ಅಕ್ಟೋಬರ್‌ನಲ್ಲಿ 6,40,441 ಮತ್ತು ನವೆಂಬರ್‌ನಲ್ಲಿ 6,64,048 ಕ್ಕೆ ಹೆಚ್ಚಾಗಿತ್ತು. ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ದೀರ್ಘ ರಜಾದಿನಗಳ ಕಾರಣ ದೈನಂದಿನ ಪ್ರಯಾಣಿಕರ ಸಂಖ್ಯೆ ನಿರೀಕ್ಷಿತ 7 ಲಕ್ಷ ತಲುಪಲಿಲ್ಲ. ಈ ವರ್ಷ ಜನವರಿಯಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಯ ಗಡಿ ಮುಟ್ಟಲಿದೆ ಎಂಬ ವಿಶ್ವಾಸ ಬಿಎಂಆರ್‌ಸಿಎಲ್ ವ್ಯಕ್ತಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ಭಾರಿ ಜನಸಂದಣಿ ಕಂಡು ಬರುತ್ತಿದೆ. ಪೀಕ್ ಸಮಯದಲ್ಲಂತೂ ಮೆಟ್ರೋ ರೈಲುಗಳು ತುಂಬಿ ತುಳುಕುತ್ತಿರುತ್ತವೆ.
ಈ ವರ್ಷಾಂತ್ಯಕ್ಕೆ ರೈಲು ಸಂಖ್ಯೆ ಹಚ್ಚಳ?
BMRCL ಜೊತೆಗಿನ ಒಪ್ಪಂದದಂತೆ ಚೀನಾ ದೇಶ ಅಗತ್ಯ (216) ಕೋಚ್‌ಗಳನ್ನು ನಮ್ಮ ಮೆಟ್ರೋಗೆ ಇದೇ ವರ್ಷ ಹಸ್ತಾಂತರಿಸಲಿದೆ. 2024 ರ ಅಂತ್ಯದವರೆಗೆ ಪರ್ಪಲ್ ಲೈನ್‌ನಲ್ಲಿ ಅಧಿಕ ರೈಲುಗಳನ್ನು ನಿಯೋಜಿಸುವ ಸಾಧ್ಯತೆ ಇದೆ. ರೈಲ್ವೆ ಕೋಚ್‌ಗಳನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯು ಇದೆ.
ಬೆಂಗಳೂರು ಮೆಟ್ರೋ ವ್ಯಾಪ್ತಿಯಲ್ಲಿ ಒಟ್ಟು ಮೆಟ್ರೋ ರೈಲುಗಳ ಪೈಕಿ ಆರು ಕೋಚಿನ 33 ರೈಲುಸೆಟ್‌ಗಳನ್ನು ಪರ್ಪಲ್ ಲೈನ್‌ಗೆ (Metro purple line) ಹಾಗೂ 24 ರೈಲುಗಳನ್ನು ಗ್ರೀನ್ ಲೈನ್‌ನಲ್ಲಿ (Metro green line) ಕಾರ್ಯಾಚರಣೆ ನಡೆಸುತ್ತಿವೆ.












Click it and Unblock the Notifications