Namma Metro: ನಮ್ಮ ಮೆಟ್ರೋದ ಈ ಮಾರ್ಗದಲ್ಲಿ ಆಗಸ್ಟ್ 15ರವರೆಗೆ ರೈಲು ಸೇವೆ ವ್ಯತ್ಯಯ
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಆಗಸ್ಟ್ 15ರವರೆಗೆ ಸಮಸ್ಯೆಯಾಗಲಿದೆ. ಹಸಿರು ಮಾರ್ಗದ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಆಗಸ್ಟ್ 13 ರಿಂದ 15ರವರೆಗೆ ರೈಲು ಸಮಯದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ. ಪೀಣ್ಯ ಇಂಡಸ್ಟ್ರಿ ಮತ್ತು ನಾಗಸಂದ್ರ ನಡುವಿನ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ನೇರಳೆ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ.
ಆಗಸ್ಟ್ 13ರಂದು ಮಂಗಳವಾರ ಕೊನೆಯ ರೈಲು ರಾತ್ರಿ 11 ಗಂಟೆಯ ಬದಲಾಗಿ 10 ಗಂಟೆಗೆ ತಲುಪಲಿದೆ. ದಿನಾಂಕ 14ರಂದು ಮೆಟ್ರೋ ಸಂಚಾರ ಬೆಳಗ್ಗೆ 5 ಗಂಟೆಗೆ ಬದಲಾಗಿ 6 ಗಂಟೆಗೆ ಆರಂಭವಾಗಲಿದೆ ಮತ್ತು ಕೊನೆಯ ರೈಲು 11 ಗಂಟೆಯ ಬದಲಾಗಿ 10 ಗಂಟೆಗೆ ಬರಲಿದೆ. ಆಗಸ್ಟ್ 15ರಂದು ಸ್ವಾತಂತ್ರ ದಿನಾಚರಣೆ ಕೂಡ ಬೆಳಗ್ಗೆ 5 ಗಂಟೆಯ ಬದಲಾಗಿ 6 ಗಂಟೆಗೆ ರೈಲು ಸೇವೆ ಆರಂಭವಾಗಲಿದೆ.

ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆಗಸ್ಟ್ 13 ಮತ್ತು 14ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು 14 ಮತ್ತು 15 ರಂದು ಬೆಳಗ್ಗೆ 5 ಗಂಟೆಗೆ ಶುರುವಾಗಲಿದೆ ಎಂದು ಸ್ಪಷ್ಟನೆ ನೀಡಿದೆ.












Click it and Unblock the Notifications