Namma Meto: ನಾಗಸಂದ್ರ-ಮಾದಾವರ ಮೆಟ್ರೋ ಸೇವೆ ಯಾವಾಗ? ಅಂತಿದ್ದಾರೆ ಜನರು
ಬೆಂಗಳೂರು, ಅಕ್ಟೋಬರ್ 31: ದೀಪಾವಳಿ ಹಬ್ಬ, ಸಾಲು ಸಾಲು ರಜೆಯ ಹಿನ್ನಲೆಯಲ್ಲಿ ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬುಧವಾರ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಮಾರ್ಗದಲ್ಲಿ ಬರುವ ನಮ್ಮ ಮೆಟ್ರೋದ ವಿಸ್ತರಿತ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದೆ. ಆದರೆ ಒಂದು ತಿಂಗಳು ಕಳೆಯುತ್ತಾ ಬಂದರೂ ಸಹ ರೈಲುಗಳು ಸಂಚಾರವನ್ನು ಆರಂಭಿಸಲು ಸರ್ಕಾರಗಳಿಗೆ ಕಾಲ ಕೂಡಿ ಬಂದಿಲ್ಲ. ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ರೈಲುಗಳ ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಉದ್ಘಾಟನಾ ದಿನಾಂಕ ಮಾತ್ರ ನಿಗದಿಯಾಗಿಲ್ಲ.
ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಈಗಾಗಲೇ ರೇಷ್ಮೆ ಸಂಸ್ಥೆ ಮತ್ತು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಬಿಎಂಆರ್‌ಸಿಎಲ್ ಈ ಮಾರ್ಗದ ವಿಸ್ತರಿತ ಯೋಜನೆಯಾದ ನಾಗಸಂದ್ರ-ಮಾದಾವರ ನಡುವಿನ ಕಾಮಗಾರಿ ಪೂರ್ಣಗೊಳಿಸಿದೆ. ಪ್ರಾಯೋಗಿಕ ಸಂಚಾರವೂ ಮುಗಿದು ರೈಲುಗಳನ್ನು ಓಡಿಸಲು ಅಕ್ಟೋಬರ್ 4ರಂದು ಒಪ್ಪಿಗೆ ಸಿಕ್ಕಿದೆ. ಆದರೆ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ಮಹೇಶ್ವರ ರಾವ್ ನಾಗಸಂದ್ರ-ಮಾದಾವರ ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಕ್ಕೆ ದಿನಾಂಕ ನಿಗದಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರವನ್ನು ಬರೆದಿದ್ದರು. ಇಲಾಖೆ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಅಕ್ಟೋಬರ್ 18ರಂದು ಬರೆದಿದೆ. ಆದರೆ ನಮ್ಮ ಮೆಟ್ರೋ ರೈಲುಗಳ ಸಂಚಾರಕ್ಕೆ ದಿನಾಂಕ ಮಾತ್ರ ನಿಗದಿಯಾಗಿಲ್ಲ.
ಮೂರು ನಿಲ್ದಾಣಗಳಿವೆ: ಬಿಎಂಆರ್‌ಸಿಎಲ್ ಅಧಿಕಾರಿಗಳ ಮಾಹಿತಿ ಪ್ರಕಾರ ನಮ್ಮ ಮೆಟ್ರೋ ರೈಲು ಓಡಿಸಲು ಕೇವಲ ಕರ್ನಾಟಕ ಸರ್ಕಾರದ ಒಪ್ಪಿಗೆ ಸಾಕಾಗುವುದಿಲ್ಲ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆಯ ಒಪ್ಪಿಗೆ ಬೇಕಿದೆ. ಈ ಖಾತೆಯ ಸಚಿವ ಮನೋಹರ್ ಲಾಲ್ ಖಟ್ಟರ್ ಕಾರ್ಯಕ್ರಮದ ದಿನಾಂಕ ನೋಡಿಕೊಂಡು ಮೆಟ್ರೋ ರೈಲು ಓಡಿಸುವ ದಿನಾಂಕವನ್ನು ನಿಗದಿಗೊಳಿಸಲಾಗುತ್ತದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಚಿವ ಮನೋಹರ್ ಲಾಲ್ ಖಟ್ಟರ್‌ಗೆ ಪತ್ರವನ್ನು ಬರೆದಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರಿಂದ ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ನಾಗಸಂದ್ರ-ಮಾದಾವರ ಮಾರ್ಗಕ್ಕೆ ಅನುಮೋದನೆ ಸಿಕ್ಕಿದೆ. ಉದ್ಘಾಟನಾ ದಿನಾಂಕವನ್ನು ಬೇಗ ನಿಗದಿ ಮಾಡಿ ಎಂದು ಮನವಿ ಮಾಡಿದ್ದಾರೆ. ನವೆಂಬರ್ 10ರೊಳಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಮೆಟ್ರೋ ಹಸಿರು ವಿಸ್ತರಿತ ಮಾರ್ಗ 3.14 ಕಿ. ಮೀ. ಇದೆ. ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು (ಜಿಂದಾಲ್ ನಗರ), ಮಾದವರ (ಬಿಐಇಸಿ) ಮೂರು ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದರೆ ನಗರದಲ್ಲಿ ನಮ್ಮ ಮೆಟ್ರೋ ಜಾಲ 77 ಕಿ. ಮೀ.ಗೆ ವಿಸ್ತರಣೆಯಾಗಲಿದೆ. ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ನಮ್ಮ ಮೆಟ್ರೋ ನಿಲ್ದಾಣದ ಕಾಮಗಾರಿಗಳು ಮುಕ್ತಾಯಗೊಂಡಿವೆ. 2017ರಲ್ಲಿ ಸುಮಾರು 298 ಕೋಟಿ ರೂ. ವೆಚ್ಚದಲ್ಲಿ ಈ 3.14 ವಿಸ್ತರಿತ ಮಾರ್ಗದ ಕಾಮಗಾರಿಯನ್ನು ಕೈಗೊಂಡಿತ್ತು. ವಿವಿಧ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದ್ದು, ಈಗ ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದರೂ ಸಹ ಒಂದು ತಿಂಗಳು ಉದ್ಘಾಟನಾ ದಿನಾಂಕ ನಿಗದಿಗೆ ಕಳೆದು ಹೋಗಿದೆ.
ಆಗಸ್ಟ್ 12 ರಿಂದ 17ರ ತನಕ ಸಿಗ್ನಲಿಂಗ್ ಸೇರಿದಂತೆ ವಿವಿಧ ಪರೀಕ್ಷೆ, ರೈಲುಗಳ ಪ್ರಾಯೋಗಿಕ ಸಂಚಾರವನ್ನು ಮಾರ್ಗದಲ್ಲಿ ನಡೆಸಲಾಗಿತ್ತು. ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಅಕ್ಟೋಬರ್ 3ರಂದು ಮಾರ್ಗದ ಪರಿಶೀಲನೆ ನಡೆಸಿದ್ದರು. ಅಕ್ಟೋಬರ್ 4ರಂದು ಮಾರ್ಗದಲ್ಲಿ ರೈಲುಗಳ ವಾಣಿಜ್ಯ ಸೇವೆಗೆ ಅನುಮತಿ ನೀಡಿದ್ದರು.












Click it and Unblock the Notifications