Bengaluru Metro: ರೈತನಿಗೆ ಪ್ರವೇಶ ನಕಾರ: ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು
ಬೆಂಗಳೂರು, ಫೆಬ್ರವರಿ 29: ಬೆಂಗಳೂರು ನಮ್ಮ ಮೆಟ್ರೋ ದಲ್ಲಿ ಕೊಳೆಯಾದ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬರಿಗೆ (ರೈತ) ನಿಲ್ದಾಣ ಪ್ರವೇಶಕ್ಕೆ ನಿರಾಕರಿಸಲಾಗಿತ್ತು. ಸಾರ್ವಜನಿಕರು BMRCL ಹಾಗೂ ಸಿಬ್ಬಂದಿ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ ಬೆನ್ನಲ್ಲೆ, ಇದೀಗ ದೂರು ದಾಖಲಾಗಿದೆ.
ಹೌದು, ನಮ್ಮ ಮೆಟ್ರೊ ನಿಲ್ದಾಣದೊಳಗೆ ವ್ಯಕ್ತಿಯೊಬ್ಬರಿಗೆ ಪ್ರವೇಶ ನಿರಾಕರಿಸುವ ಮೂಲಕ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL)ದ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದರು. ಘಟನೆ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಬುಧವಾರ ಸ್ವಯಂಪ್ರೇರಿತ ದೂರು ದಾಖಲಿಕೊಂಡಿದೆ.

ಪ್ರಕರಣ ದಾಖಲಿಸಿಕೊಂಡ ಆಯೋಗವು ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಿದೆ. ಮುಂದಿನ ಒಂದು ತಿಂಗಳಲ್ಲಿ ಘಟನೆ ಸಂಬಂಧ ವರದಿ ನೀಡುವಂತೆ ನೋಟಿಸ್‌ನಲ್ಲಿ ನಿರ್ದೇಶಿಸಿದೆ.
ಕೈಗೊಂಡ ಕ್ರಮಗಳ ಬಗ್ಗೆ ಉಲ್ಲೇಖಿಸಲು ಸೂಚನೆ
ಅಲ್ಲದೇ ಇಂತಹ ಘಟನೆಗಳು ಮುಂದೆ ಭವಿಷ್ಯದಲ್ಲಿ ಯಾವತ್ತೂ ಮರುಕಳಿಸಬಾರದು. ಈ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಏನು ಎಂಬುದು ನಿಮ್ಮ ವರದಿಯಲ್ಲಿ ಇರಬೇಕು ಎಂದು ಆಯೋಗ ಸೂಚಿಸಿದೆ.
ರೈತರಿಗೆ ಮೆಟ್ರೋ ಪ್ರವೇಶ ನಿರಾಕರಣೆ ಘಟನೆ ಕಳೆದ ಫೆಬ್ರವರಿ 18ರಂದು ನಗರದ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ತಲೆ ಮೇಲೆ ಚೀಲ ಹೊತ್ತು ಮಾಸಲು ಬಟ್ಟೆ ಧರಿಸಿಕೊಂಡು ಬಂದಿದ್ದ ರೈತರು ಮಟ್ರೋ ದಲ್ಲಿ ಪ್ರಯಾಣಿಸಲು ಆಗಮಿಸಿದ್ದರು.

ಘಟನೆ ಬಗ್ಗೆ ಆಯೋಗ ಸ್ಪಷ್ಟನೆ
ಸದ್ಯ ಘಟನೆ ಬಗ್ಗೆ ವರದಿಗಳು ನಿಜವೇ ಆಗಿದ್ದಲ್ಲಿ, ಇದು ಸ್ಪಷ್ಟ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ. ವ್ಯಕ್ತಿಯು ಧರಿಸಿರುವ ಉಡುಪು ಆಧಾರದಲ್ಲಿ ಪ್ರವೇಶ ತಡೆಯಬಾರದು. ನಿಯಮ ಮೀರಿ, ನಿರ್ಬಂಧಿತ ವಸ್ತು ಒಯ್ಯುವವರಿಗೆ ನಿಷೇಧ ವಿಧಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ವಿಡಿಯೋ ವೈರಲ್ : ಸಾರ್ವಜನಿಕರ ಆಕ್ರೊಶ
ಹೊಲ ಗದ್ದೆಗಳಲ್ಲಿ ಕೆಲಸ ಮಾಡುವವರು, ಮಾರುಕಟ್ಟೆಗೆ ತರಕಾರಿಯಂತ ಉತ್ಪನ್ನ ಮಾರಾಟಕ್ಕೆ ಬರುವ ರೈತರ ಬಟ್ಟೆ ಸಾಮಾನ್ಯವಾಗಿ ಕೊಳೆಯಾಗಿರುತ್ತದೆ. ಅವರನ್ನು ನೋಡಿದರೆ ಇವರು ರೈತರು ಎಂಬುದು ತಿಳಿಯುತ್ತದೆ. ಇಲ್ಲೂ ಸಹ ಮೇಲ್ನೋಟಕ್ಕೆ ಇವರು ರೈತರು ಎಂಬುದು ಗೊತ್ತಾಗುತ್ತಿದ್ದರೂ ಸಹ ಧರಿಸಿದ ಉಡುಪು ಆಧರಿಸಿ ಅವರನ್ನು ಒಳಗೆ ಬಿಡಲು ಮೆಟ್ರೊ ಸಿಬ್ಬಂದಿ ಒಪ್ಪಿಲಿಲ್ಲ ಎಂಬುದು ಆನ್‌ಲೈನ್ ನಲ್ಲಿ ವೈರಲ್ ಆದ ವಿಡಿಯೋದಿಂದ ತಿಳಿದು ಬಂದಿದೆ.
ಸಿಬ್ಬಂದಿ ನಡೆಯನ್ನು ತಪಾಸಣೆಗೆ ಒಳಪಡುತ್ತಿದ್ದ ಸಹ ಪ್ರಯಾಣಿಕರು ಖಂಡಿಸಿದ್ದಾರೆ. ಈ ಕುರಿತು ವಿಡಿಯೋವನ್ನು ಆನ್‌ಲೈನ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಂತೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಎಂಆರ್‌ಸಿಎಲ್ ಇಂತಹ ಘಟನೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಸಬೂಬು ತಿಳಿಸಿತ್ತು.












Click it and Unblock the Notifications