Namma Metro; ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ಸೆಪ್ಟೆಂಬರ್ 06; ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿಯೊಂದನ್ನು ನೀಡಿದೆ. ಸಂಪೂರ್ಣ ನೇರಲೆ ಮಾರ್ಗದ ನಮ್ಮ ಮೆಟ್ರೋ ರೈಲುಗಳ ಸಂಚಾರ ಸೆಪ್ಟೆಂಬರ್ 15ರ ಬಳಿಕ ಆರಂಭವಾಗಲಿದೆ. ಸದ್ಯ ಈ ಮಾರ್ಗದ 39.4 ಕಿ. ಮೀ. ಸಂಚಾರಕ್ಕೆ ಮುಕ್ತವಾಗಿದೆ.
ನಮ್ಮ ಮೆಟ್ರೋ ಸಂಪೂರ್ಣ ನೇರಳೆ ಮಾರ್ಗ ವೈಟ್‌ಫೀಲ್ಡ್-ಚಲ್ಲಘಟ್ಟ ಈ ತಿಂಗಳಿನಲ್ಲಿಯೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಕೆಲವು ಸ್ಪಷ್ಟನೆಗಳನ್ನು ಕೇಳಿದ್ದು, ಅದನ್ನು ಸೆಪ್ಟೆಂಬರ್ 7ರಂದು ಸಲ್ಲಿಕೆ ಮಾಡಲಾಗುತ್ತದೆ.

ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ಬೈಯಪ್ಪನಹಳ್ಳಿ-ಕೆ. ಆರ್. ಪುರ (2.1 ಕಿ. ಮೀ.) ಮತ್ತು ಕೆಂಗೇರಿ-ಚಲ್ಲಘಟ್ಟ (2 ಕಿ. ಮೀ.) ಮಾರ್ಗದಲ್ಲಿ ಪರಿಶೀಲನೆ ನಡೆಸಿ, ವಾಣಿಜ್ಯ ಸಂಚಾರಕ್ಕೆ ಒಪ್ಪಿಗೆ ನೀಡಲಿದ್ದಾರೆ. ಸೆಪ್ಟೆಂಬರ್ 15ರೊಳಗೆ ಈ ಕಾರ್ಯಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ಬಿಎಂಆರ್‌ಸಿಎಲ್ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ.
ನಮ್ಮ ಮೆಟ್ರೋ ನೇರಳೆ ವಿಸ್ತರಿತ ಮಾರ್ಗದಲ್ಲಿ ಸದ್ಯ ಬೈಯಪ್ಪನಹಳ್ಳಿ-ಕೆ. ಆರ್. ಪುರ ಮತ್ತು ಕೆಂಗೇರಿ-ಚಲ್ಲಘಟ್ಟ ನಡುವೆ ಮೆಟ್ರೋ ರೈಲು ಸಂಚಾರ ನಡೆಸುತ್ತಿಲ್ಲ. ಸೆಪ್ಟೆಂಬರ್ 15ರ ಬಳಿಕ ಯಾವಾಗಲಾದರೂ ಮಾರ್ಗ ಉದ್ಘಾಟನೆಗೆ ಬಿಎಂಆರ್‌ಸಿಎಲ್ ಸಿದ್ಧವಿದೆ. ಕೇಂದ್ರ, ರಾಜ್ಯ ಸರ್ಕಾರಗಳ ಒಪ್ಪಿಗೆ ಬಳಿಕ ಅಂತಿಮ ದಿನಾಂಕ ನಿಗದಿ ಮಾಡಲಾಗುತ್ತದೆ.
ಸಂಪೂರ್ಣ ನೇರಳೆ ಮಾರ್ಗ ಸಂಚಾರ; ಬೆಂಗಳೂರು ನಗರದ ಮೆಟ್ರೋ ಯೋಜನೆಯ ಸಂಪೂರ್ಣ ನೇರಳೆ ಮಾರ್ಗ ವೈಟ್‌ಫೀಲ್ಡ್-ಚಲ್ಲಘಟ್ಟ ಸೆಪ್ಟೆಂಬರ್‌ನಲ್ಲಿ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ. ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿನ ಕೆಲವು ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಗೆ ಮೊದಲು ಅದು ಪೂರ್ಣಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ವೈಟ್‌ಫೀಲ್ಡ್-ಕೆ. ಆರ್. ಪುರ (13.7) ಕಿ. ಮೀ. ಮಾರ್ಗವನ್ನು ಉದ್ಘಾಟನೆ ಮಾಡಿದ್ದರು. ಆದರೆ ಬೈಯಪ್ಪನಹಳ್ಳಿ-ಕೆ. ಆರ್. ಪುರ ನಡುವೆ ಮೆಟ್ರೋ ಸಂಚಾರ ಇಲ್ಲದ ಕಾರಣ ಪ್ರಯಾಣಿಕರಿಗೆ ಸಮಸ್ಯೆ ಉಂಟಾಗಿತ್ತು. ಈಗ ಆ ಮಾರ್ಗವೂ ಸಂಚಾರಕ್ಕೆ ಮುಕ್ತವಾಗಲಿದೆ. ಆದ್ದರಿಂದ ವೈಟ್‌ಫೀಲ್ಡ್-ಚಲ್ಲಘಟ್ಟ ನಡುವಿನ ಸಂಪೂರ್ಣ ನೇರಳೆ ಮಾರ್ಗ ಸಂಚಾರ ಆರಂಭಿಸಲಿದೆ.
ಪಶ್ಚಿಮ ಬೆಂಗಳೂರಿನ ಚಲ್ಲಘಟ್ಟ ಮತ್ತು ಪೂರ್ವ ಬೆಂಗಳೂರಿನ ವೈಟ್‌ಫೀಲ್ಡ್ ನಡುವೆ ಸಂಚಾರ ನಡೆಸಲು 76 ನಿಮಿಷ ಬೇಕಾಗಬಹುದು ಎಂದು ಮೆಟ್ರೋ ಅಧಿಕಾರಿಗಳು ಅಂದಾಜಿಸಿದ್ದಾರೆ. ಪೂರ್ಣ ಪ್ರಯಾಣ ದರ 60 ರೂ. ಆಗಬಹುದು. ಸಂಪೂರ್ಣ ನೇರಳೆ ಮಾರ್ಗ ಉದ್ಘಾಟನೆಗೊಂಡರೆ ನಮ್ಮ ಮೆಟ್ರೋ ಪ್ರತಿದಿನದ ಪ್ರಯಾಣಿಕರ ಸಂಖ್ಯೆ 6.2 ಲಕ್ಷದಿಂದ 7 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
2020ರ ಡಿಸೆಂಬರ್‌ನಲ್ಲಿಯೇ ಸಂಪೂರ್ಣ ನೇರಳೆ ಮಾರ್ಗವನ್ನು ಸಂಚಾರ ಮುಕ್ತವಾಗಿಸಬೇಕು ಎಂದು ಬಿಎಂಆರ್‌ಸಿಎಲ್ ಗುಡುವು ಹಾಕಿಕೊಂಡಿತ್ತು. ಆದರೆ ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಸಂಚಾರ ತಡವಾಗಿದೆ. ಮೈಸೂರು, ರಾಮನಗರ, ಮಂಡ್ಯ ಭಾಗದಿಂದ ಬೆಂಗಳೂರು ನಗರಕ್ಕೆ ಆಗಮಿಸುವ ಜನರು ವೈಟ್‌ಫೀಲ್ಡ್‌ಗೆ ತಲುಪಲು ನಮ್ಮ ಮೆಟ್ರೋ ಸಹಕಾರಿಯಾಗಲಿದೆ.
ವೈಟ್‌ಫೀಲ್ಡ್‌ನಿಂದ ಹೊರಡುವ ನಮ್ಮ ಮೆಟ್ರೋ ರೈಲು ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ ಪಾಳ್ಯ, ಮಹದೇವಪುರ, ಕೆ. ಆರ್. ಪುರಂ ಮೂಲಕ ಬೆನ್ನಿಗಾನಹಳ್ಳಿಯನ್ನು ತಲುಪಲಿದೆ.
ನೇರಳೆ ಮಾರ್ಗದಲ್ಲಿ ಮೊದಲು ಎಂಜಿ ರಸ್ತೆ-ಮೈಸೂರು ರಸ್ತೆ (ನಾಯಂಡಹಳ್ಳಿ) ತನಕ ಮೆಟ್ರೋ ಸಂಚಾರ ಆರಂಭಿಸಲಾಯಿತು. ಬಳಿಕ ನಾಯಂಡಹಳ್ಳಿ ನಿಲ್ದಾಣದಿಂದ ಕೆಂಗೇರಿ ತನಕ ರೈಲು ಸೇವೆ ಆರಂಭವಾಯಿತು. ಈಗ ಕೆಂಗೇರಿಯಿಂದ ಚಲ್ಲಘಟ್ಟ ತನಕ ವಿಸ್ತರಿತಗೊಂಡಿರುವ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತದೆ. ಆ ಮೂಲಕ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟ ತನಕ ಸಂಪೂರ್ಣ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ.












Click it and Unblock the Notifications