Namma Metro: ಸಂಪೂರ್ಣ 'ನೇರಳೆ ಮಾರ್ಗ' ಯಾವಾಗ ಆರಂಭ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರ
ಬೆಂಗಳೂರು, ಆಗಸ್ಟ್ 16: ಬೆಂಗಳೂರು ನಮ್ಮ ಮೆಟ್ರೋದ ಚಲಘಟ್ಟದಿಂದ ಕಾಡುಗೋಡಿವರೆಗೆ ಪೂರ್ತೀ 'ನೇರಳೆ ಮಾರ್ಗ'ವು ಮುಂದಿನ ತಿಂಗಳು ಸೆಪ್ಟಂಬರ್‌ನಲ್ಲಿ ಕಾರ್ಯರಂಭಗೊಳ್ಳಲಿದೆ ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮಾಹಿತಿ ನೀಡಿದ್ದಾರೆ.
ಹೌದು, ಐಟಿ ಪ್ರದೇಶಗಳಿಗೆ ಸಂಪರ್ಕಿಸಲಾದ ಮೊದಲ ಕಾರಿಡಾರ್ ಎಂದರೆ ಅದು ನಮ್ಮ ಮೆಟ್ರೋದ ನೇರಳೆ ಮಾರ್ಗ. ಈ ಮಾರ್ಗದಲ್ಲಿ ಎರಡು ಕಡೆ ಸಂಪರ್ಕ ಸಾಧಿಸುವ ಕೆಲಸ ಪೂರ್ಣಗೊಂಡಿದ್ದು, ಸಿಗ್ನಲಿಂಗ್ ಕೆಲಸ ನಡೆಯುತ್ತಿದೆ. ಇದು ಪೂರ್ಣಗೊಂಡರೆ ಮೈಸೂರು ರಸ್ತೆಯ ಚಲಘಟ್ಟದಿಂದ ವೈಟ್‌ಫಿಲ್ಡ್ (ಕಾಡುಗೋಡಿ) ವರೆಗೆ ಜನರ ಓಡಾಡಬಹುದಾಗಿದೆ.

ಈ ಕುರಿತು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹಾಲಿ 69.66 ಕಿಲೋ ಮೀಟರ್ ಮಾರ್ಗದಲ್ಲಿ ಸುಮಾರು 6.1 ಲಕ್ಷ ಪ್ರಯಾಣಿಕರು ನಿತ್ಯ ಸಂಚರಿಸುತ್ತಿದ್ದಾರೆ.
ಚಲಘಟ್ಟ- ಕಾಡುಗೋಡಿವರೆಗೆ ಮೆಟ್ರೋ ಪ್ರಯಾಣ
ಕೆ.ಆರ್‌ಪುರಂ- ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲಘಟ್ಟ ಮಾರ್ಗ ನಿರ್ಮಾಣ ಕೆಲಸ ಪೂರ್ಣಗೊಂಡಿದ್ದು, ಸೆಪ್ಟಂಬರ್‌ಗೆ ಈ ಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋಗಳು ಸಂಚರಿಸಲಿವೆ. ಕಾಡುಗೋಡಿವರೆಗೆ ಚಲಘಟ್ಟದಿಂದ ಒಂದೇ ಮಾರ್ಗದಲ್ಲಿ ಲಕ್ಷಾಂತರ ಪ್ರಯಾಣಿಕರು ಸಂಚರಿಸಬಹುದಾಗಿದೆ ಎಂದು ಅವರು ತಿಳಿಸಿದರು.

ಇನ್ನೂ ನಾಗಸಂದ್ರದಿಂದ ಮಾದಾವರವರೆಗಿನ ಹಸಿರು ಮಾರ್ಗವು ಹಾಗೂ ಆರ್‌ವಿ ರಸ್ತೆಯಿಂದ ಬೊಮ್ಮನಹಳ್ಳಿವರೆಗಿನ ವಿಸ್ತರಣೆ ಮೆಟ್ರೋ ಮಾರ್ಗದ ಕಾಮಗಾರಿ ಮುಂದಿನ ಡಿಸೆಂಬರ್‌ಗೆ ಪೂರ್ಣಗೊಳ್ಳಿದೆ. ಈ ವರ್ಷಾಂತ್ಯಕ್ಕೆ ಈಎರಡು ಮಾರ್ಗದಲ್ಲಿ ಮೆಟ್ರೋ ಸಂಚಾರ ನಡೆಸುವ ಸಾಧ್ಯತೆಗಳು ಇವೆ.
ಹಾಲಿ ಸುಮಾರು 70 ಕಿಲೋ ಮೀಟರ್ ಮಾರ್ಗದಲ್ಲಿ ಸೇವೆ ನೀಡುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) 2026ರ ಹೊತ್ತಿಗೆ ಬೆಂಗಳೂರಿನಲ್ಲಿ ಒಟ್ಟು 175 ಕೀಲೋ ಮೀಟರ್ ಮೆಟ್ರೋ ಜಾಲ ಹೊಂದುವ ಗುರಿ ಇಟ್ಟುಕೊಂಡಿದೆ. ಈ ಸಂಬಂಧ 'ಹಳದಿ ಮಾರ್ಗ, ನೀಲಿ ಮಾರ್ಗ ಸೇರಿದಂತೆ ವಿಸ್ತರಣೆ ಹಾಗೂ ಹೊಸ ಮೆಟ್ರೋ ಮಾರ್ಗ ನಿರ್ಮಾಣದ ಕೆಲಸದ ವೇಗವನ್ನು ಹೆಚ್ಚಿಸಿದೆ ಎಂದು ತಿಳಿದು ಬಂದಿದೆ.
ಆ.17ರಿಂದ ಏಳು ದಿನ 'ನೇರಳೆ ಮಾರ್ಗ'ದಲ್ಲಿ ಸೇವೆ ವ್ಯತ್ಯಯ
ಕೆಆರ್.ಪುರಂ ಮತ್ತು ಬೈಯಪ್ಪನಳ್ಳಿ ಹಾಗೂ ಚಲಘಟ್ಟದಿಂದ ಭಾಗದಲ್ಲಿ ಮೆಟ್ರೋ ಮಾರ್ಗದಲ್ಲಿ ಸಿಗ್ನಲಿಂಗ್ ಕಾರ್ಯ ನಡೆಯುತ್ತಿದೆ. ಈ ಸಂಬಂಧ ನಾಳೆ ಗುರುವಾರ ಆಗಸ್ಟ್ 17 ರಿಂದ ಆಗಸ್ಟ್ 29ರವರೆಗೆ ವಿವಿಧ ದಿನಗಳಲ್ಲಿ (ಒಟ್ಟು 7 ದಿನ) ಬೆಳಗ್ಗೆ 5 ಗಂಟೆಯಿಂದ 7 ಗಂಟೆವರೆಗೆ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು BRMCL ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications